ನಿಯಮಗಳನ್ನು ತಿರುಚಿ ಕಲ್ಲಿದ್ದಲು ಹರಾಜು ನಡೆಸಿದ ಕೇಂದ್ರ: ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್ ಆರೋಪ
ಆಯ್ದ ಕೆಲ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನಿಯಮಗಳನ್ನು ತಿರುಚಿ ಕಲ್ಲಿದ್ದಲು ಹರಾಜನ್ನು ನಡೆಸಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್ ಆರೋಪಿಸಿದೆ.;
ಹೊಸದಿಲ್ಲಿ: ಆಯ್ದ ಕೆಲ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನಿಯಮಗಳನ್ನು ತಿರುಚಿ ಕಲ್ಲಿದ್ದಲು ಹರಾಜನ್ನು ನಡೆಸಿದೆ. ಇದರಿಂದ ಭಾರಿ ಆದಾಯ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್ ಆರೋಪ ಮಾಡಿದೆ.
ಇದೇ ವೇಳೆ, ಈ ಕಲ್ಲಿದ್ದಲು ಹರಾಜಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಇಬ್ಬರು ಬಿಜೆಪಿ ನಾಯಕರು ಬರೆದ ಪತ್ರಗಳ ಬಗ್ಗೆ ಸರ್ಕಾರ ಮತ್ತು ಪ್ರಧಾನಿ ಏಕೆ ಕ್ರಮ ಕೈಗೊಂಡಿಲ್ಲ?, ಈ ವಿಷಯದ ಬಗ್ಗೆಯೂ ಇಡಿ ತನಿಖೆಗೆ ಸರ್ಕಾರ ಆದೇಶಿಸುತ್ತದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, 2015ರಲ್ಲಿ ಕಲ್ಲಿದ್ದಲು ಹರಾಜಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಹಾಲಿ ಸಚಿವರಾದ ಆರ್.ಕೆ.ಸಿಂಗ್ ಮತ್ತು ರಾಜೀವ್ ಚಂದ್ರಶೇಖರ್ ಅವರ ಪತ್ರಗಳನ್ನು ಬಹಿರಂಗ ಪಡಿಸಿದರು. ಅಲ್ಲದೇ, ಎರಡು ಕಂಪನಿಗಳಿಗೆ ಮಾತ್ರ ಬಿಡ್ ಮಾಡಲು ಅವಕಾಶ ನೀಡಲಾಗಿದೆ. ಇದು ಕಾರ್ಟೆಲೈಸೇಶನ್ ಮತ್ತು ಆದಾಯದ ನಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇದರ ನಂತರವೇ ಈ ಇಬ್ಬರನ್ನು ಸಚಿವರನ್ನಾಗಿ ಮಾಡಲಾಗಿದ್ದು, ಇದಾದ ಬಳಿಕ ಈ ವಿಷಯದಲ್ಲಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಈ ಕುರಿತು ಮೋದಿ ಸರ್ಕಾರವು ಇಡಿ ದಾಳಿಗೆ ಆದೇಶಿಸುತ್ತದೆಯೇ?, ಈ ಹಗರಣ ಮತ್ತು ಭ್ರಷ್ಟಾಚಾರದ ಕಥೆಯನ್ನು ತನಿಖೆ ಮಾಡುತ್ತದೆ ಎಂದು ಪ್ರಶ್ನಿಸಿದರು.
ಇದೇ ವೇಳೆ, ಮತ್ತೊಬ್ಬ ನಾಯಕ ಜೈರಾಮ್ ರಮೇಶ್ ಮಾತನಾಡಿ, 'ಮೋದಿ ಕಿ ಗ್ಯಾರಂಟಿ' ಎಂದು ಹೇಳುತ್ತಿರುವ ಪ್ರಧಾನಿ, ತಮ್ಮ ಕಾರ್ಪೊರೇಟ್ ಚಂದಾದಾರರಿಗೆ ಕೊಟ್ಟಿರುವ ಒಂದೇ ಒಂದು ಗ್ಯಾರಂಟಿ ಎಂದರೆ, ಅದು 'ಚಂದಾ ಕೊಡು, ಕಲ್ಲಿದ್ದಲು ತೊಗಿ' ಎಂಬುವುದಾಗಿದೆ. ಮೋದಿ ಸರ್ಕಾರವು ತನ್ನದೇ ಆದ ನಾಯಕರ ಎಚ್ಚರಿಕೆಯ ಹೊರತಾಗಿಯೂ ಹೆಚ್ಚು ಲಾಭದಾಯಕ ಕಲ್ಲಿದ್ದಲು ಗಣಿಗಳನ್ನು ತನ್ನ ಪರಮಮಿತ್ರ ಮತ್ತು ಅತಿ ಹೆಚ್ಚು ಚಂದಾ ಕೊಡುವವರಿಗೆ ಅತ್ಯಲ್ಪ ಬೆಲೆಗೆ ಹಸ್ತಾಂತರಿಸಿದೆ. ಈ ಕಲ್ಲಿದ್ದಲು ಹರಾಜಿನಲ್ಲಿ ಸಂಪೂರ್ಣ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಅಲ್ಲದೇ, ಮೋದಿ ಸರ್ಕಾರವು ಹರಾಜನ್ನು ಸೀಮಿತ ಟೆಂಡರ್‌ನೊಂದಿಗೆ ಸಿದ್ಧಮಾಡಿತ್ತು. ಇದು ಪ್ರತಿ ಕಲ್ಲಿದ್ದಲು ಬ್ಲಾಕ್‌ಗೆ ಸ್ಪರ್ಧಿಸಬಹುದಾದ ಕಂಪನಿಗಳ ಸಂಖ್ಯೆಯನ್ನು ಸೀಮಿತಗೊಳಿಸಿತ್ತು. ಇದು ಕಡಿಮೆ ಬೆಲೆಗೆ ಹರಾಜಿಗೆ ಕಾರಣವಾಗಿದ್ದು, ಇದರಿಂದ ಸಾವಿರಾರು ಕೋಟಿ ರೂ. ಸರ್ಕಾರದ ಖಜಾನೆಗೆ ನಷ್ಟವಾಗಿದೆ ಎಂದು ಅವರು ದೂರಿದರು.