ನನ್ನ ಮಗಳಿಗೆ ನಗ್ನ ಫೋಟೋ ಕೇಳಿದ್ದರು: ಸೈಬರ್ ಕ್ರೈಂ ಕರಾಳತೆ ಬಿಚ್ಚಿಟ್ಟ ಅಕ್ಷಯ್ ಕುಮಾರ್

ವಿಡಿಯೋ ಗೇಮ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬಳು ಸಂಪರ್ಕಿಸಿ, ಆಕೆಯ ನಗ್ನ ಫೋಟೋಗಳನ್ನು ಕಳುಹಿಸಬೇಕೆಂದು ಕೇಳಿದ್ದರು. ಆಕೆ ತಕ್ಷಣವೇ ಗೇಮ್ ಆಫ್ ಮಾಡಿ ತಾಯಿಗೆ ವಿಷಯ ತಿಳಿಸಿದರು. ಇದೇ ಸೈಬರ್ ಅಪರಾಧದ ಆರಂಭ ಎಂದು ಅಕ್ಷಯ್ ಕುಮಾರ್ ವಿವರಿಸಿದರು.

Update: 2025-10-04 08:01 GMT

ಅಕ್ಷಯ್‌ ಕುಮಾರ್‌

Click the Play button to listen to article

ತಂತ್ರಜ್ಞಾನ ನಮ್ಮ ಬದುಕನ್ನು ಸುಲಭಗೊಳಿಸಿದಷ್ಟೇ ಅಪಾಯಕಾರಿಯೂ ಹೌದು ಎಂಬುದಕ್ಕೆ ಸೈಬರ್ ಅಪರಾಧಗಳೇ ಸಾಕ್ಷಿ. ಬೀದಿಗಿಳಿದರೆ ಎದುರಾಗುವ ಅಪಾಯಗಳಿಗಿಂತಲೂ, ಮನೆಯೊಳಗಿನ ಡಿಜಿಟಲ್ ಜಗತ್ತಿನ ಕರಾಳತೆ ಹೆಚ್ಚು ಆತಂಕಕಾರಿಯಾಗಿ ಬೆಳೆಯುತ್ತಿದೆ. ಈ ಆತಂಕಕ್ಕೆ ಇತ್ತೀಚಿನ ಸೇರ್ಪಡೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮಗಳು ಎದುರಿಸಿದ ಘಟನೆ. ತಮ್ಮ 13 ವರ್ಷದ ಮಗಳು ನಿತಾರಾ ಆನ್‌ಲೈನ್ ಗೇಮಿಂಗ್ ವೇಳೆ ಎದುರಿಸಿದ ಆಘಾತಕಾರಿ ಅನುಭವವನ್ನು ಸ್ವತಃ ಅಕ್ಷಯ್ ಕುಮಾರ್ ಅವರೇ ಹಂಚಿಕೊಂಡಿದ್ದು, ಸಮಾಜಕ್ಕೆ ಗಂಭೀರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಶುಕ್ರವಾರ ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ "ಸೈಬರ್ ಜಾಗೃತಿ ಮಾಸ – 2025" ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ತಿಂಗಳ ಹಿಂದೆ ತಮ್ಮ ಮನೆಯಲ್ಲಿ ನಡೆದ ಘಟನೆಯನ್ನು ಸಾರ್ವಜನಿಕವಾಗಿ ತೆರೆದಿಟ್ಟರು. "ನನ್ನ ಮಗಳು ಆನ್‌ಲೈನ್ ವಿಡಿಯೋ ಗೇಮ್ ಆಡುತ್ತಿದ್ದಳು. ಅದು ಅಪರಿಚಿತರೊಂದಿಗೂ ಆಡಬಹುದಾದ ಆಟ. ಆರಂಭದಲ್ಲಿ ಆ ವ್ಯಕ್ತಿ, 'ಚೆನ್ನಾಗಿ ಆಡಿದೆ', 'ಧನ್ಯವಾದ' ಎಂದು ಸೌಜನ್ಯದ ಸಂದೇಶಗಳನ್ನು ಕಳುಹಿಸಿ ವಿಶ್ವಾಸ ಗಳಿಸಿದ್ದಾನೆ. ಬಳಿಕ, 'ನೀನು ಗಂಡೋ ಅಥವಾ ಹೆಣ್ಣೋ?' ಎಂದು ಕೇಳಿದ್ದಾನೆ. ಆಕೆ 'ಹೆಣ್ಣು' ಎಂದು ಉತ್ತರಿಸಿದ ತಕ್ಷಣವೇ ಅವನ ಸಂಭಾಷಣೆಯ ಧಾಟಿ ಬದಲಾಗಿದೆ. 'ನಿನ್ನ ನಗ್ನ ಫೋಟೋ ಕಳುಹಿಸು' ಎಂದು ಸಂದೇಶ ಕಳುಹಿಸಿದ್ದಾನೆ. ಅದೃಷ್ಟವಶಾತ್, ನನ್ನ ಮಗಳು ತಕ್ಷಣ ಗೇಮ್ ಆಫ್ ಮಾಡಿ, ವಿಷಯವನ್ನು ತನ್ನ ತಾಯಿ ಟ್ವಿಂಕಲ್ ಖನ್ನಾಗೆ ತಿಳಿಸಿದ್ದಾಳೆ. ಸೈಬರ್ ಅಪರಾಧ ಹೀಗೆಯೇ ಆರಂಭವಾಗುತ್ತದೆ" ಎಂದು ಅಕ್ಷಯ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ತಮ್ಮ ಕುಟುಂಬದಲ್ಲಿ ಸೃಷ್ಟಿಸಿದ ಆತಂಕವನ್ನು ವಿವರಿಸಿದ ಅವರು, ಇಂದಿನ ಮಕ್ಕಳು ಎದುರಿಸುತ್ತಿರುವ ಡಿಜಿಟಲ್ ಅಪಾಯಗಳ ಬಗ್ಗೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಹೆಚ್ಚು ಜಾಗೃತರಾಗಬೇಕು ಎಂದು ಹೇಳಿದರು. "ಸೈಬರ್ ಅಪರಾಧವು ಇಂದು ಬೀದಿ ಅಪರಾಧಕ್ಕಿಂತಲೂ ದೊಡ್ಡದಾಗಿ ಬೆಳೆದಿದೆ. ಇದನ್ನು ತಡೆಯಲು ಕೇವಲ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಬೇಕು," ಎಂದರು. ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಶಾಲೆಗಳಲ್ಲಿ 7 ರಿಂದ 10ನೇ ತರಗತಿಯವರೆಗೆ ವಾರಕ್ಕೊಮ್ಮೆ ಕಡ್ಡಾಯವಾಗಿ 'ಸೈಬರ್ ತರಗತಿ'ಯನ್ನು ಜಾರಿಗೊಳಿಸುವಂತೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ವೇದಿಕೆಯಲ್ಲೇ ಮನವಿ ಮಾಡಿದರು. ಇದರಿಂದ ಮಕ್ಕಳು ಅಪಾಯಗಳನ್ನು ಗುರುತಿಸಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರಾಗುತ್ತಾರೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಸೈಬರ್ ವಂಚನೆಗೆ ಸಿಲುಕಿದ್ದ ನಟರ ಅನುಭವ

ಅಕ್ಷಯ್ ಕುಮಾರ್ ಅವರ ಹೇಳಿಕೆಗೆ ಧ್ವನಿಗೂಡಿಸಿದ ನಟ ರೋಹಿತ್ ರಾಯ್, ತಾವೂ ಕೂಡ ಸೈಬರ್ ವಂಚಕರ ಜಾಲಕ್ಕೆ ಸಿಲುಕಿದ್ದ ಅನುಭವವನ್ನು ಹಂಚಿಕೊಂಡರು. ಅವರ ಮುಂಬರುವ ಸಿನಿಮಾ 'ಕಂಟ್ರೋಲ್' ಕೂಡ ಇದೇ ವಿಷಯದ ಮೇಲೆ ಆಧಾರಿತವಾಗಿದೆ ಎಂದು ತಿಳಿಸಿದರು. "ಈ ಅಪರಾಧಗಳಿಂದ ಯಾರೂ ಹೊರತಾಗಿಲ್ಲ. ಒಮ್ಮೆ ನನ್ನ ಆಪ್ತ ಸ್ನೇಹಿತನ ನಂಬರ್‌ನಿಂದಲೇ ಹಣ ಕೇಳಿ ಸಂದೇಶ ಬಂದಿತ್ತು. ಆದರೆ, ಮಾತಿನ ಶೈಲಿ ವಿಭಿನ್ನವಾಗಿದ್ದರಿಂದ ಅನುಮಾನ ಬಂದು ಕರೆ ಮಾಡಿದಾಗ, ಸಂಖ್ಯೆ ಬ್ಯುಸಿಯಾಗಿತ್ತು. ಆಗ ಅದು ವಂಚನೆ ಎಂದು ತಿಳಿಯಿತು," ಎಂದು ಅವರು ಹೇಳಿದರು.

ಹಲವು ವರ್ಷಗಳ ಹಿಂದೆ ತಾವೇ ಫಿಶಿಂಗ್ ಇ-ಮೇಲ್ ಲಿಂಕ್ ಕ್ಲಿಕ್ ಮಾಡಿ ತಮ್ಮ ಕೆಲವು ಖಾತೆಗಳು ಹ್ಯಾಕ್ ಆಗಿದ್ದನ್ನೂ ಅವರು ನೆನಪಿಸಿಕೊಂಡರು. "ಆ ಇ-ಮೇಲ್ ಸಂಪೂರ್ಣ ಅಸಲಿಯಂತೆ ಕಾಣುತ್ತಿತ್ತು. ಯಾವುದೇ ಸ್ಪ್ಯಾಮ್ ಲಕ್ಷಣಗಳಿರಲಿಲ್ಲ. ಅಜಾಗರೂಕತೆಯಿಂದ ಲಿಂಕ್ ಕ್ಲಿಕ್ ಮಾಡಿದ್ದೆ. ಅದೃಷ್ಟವಶಾತ್, ತಕ್ಷಣ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರಿಂದ ದೊಡ್ಡ ಅನಾಹುತ ತಪ್ಪಿತು," ಎಂದು ರೋಹಿತ್ ರಾಯ್ ತಮ್ಮ ಅನುಭವವನ್ನು ವಿವರಿಸಿದರು. ಇಂತಹ ಘಟನೆಗಳು ಸಾರ್ವಜನಿಕ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯರವರೆಗೂ ಯಾರನ್ನಾದರೂ ಗುರಿಯಾಗಿಸಬಹುದು ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತದೆ.

Tags:    

Similar News