ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ಜುಬೀನ್ ಅಂತ್ಯಕ್ರಿಯೆ
ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ಅಂತ್ಯಕ್ರಿಯೆಯು ನಿನ್ನೆ ಗುವಾಹಟಿಯಲ್ಲಿ ನಡೆದಿದ್ದು, ಜನಸ್ತೋಮದ ವಿಚಾರಕ್ಕೆ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದೆ.
ಜುಬೀನ್ ಗರ್ಗ್
ಗುವಾಹಟಿಯು ನಿನ್ನೆ ಅದ್ಭುತ ದುಃಖಕ್ಕೆ ಸಾಕ್ಷಿಯಾಗಿದೆ. ಹೌದು, ಅಸ್ಸಾಂ ರಾಜ್ಯದ ಖ್ಯಾತ ಗಾಯಕ ಜುಬೀನ್ ಗರ್ಗ್ ಅವರ ಅಂತ್ಯಕ್ರಿಯೆಯು ನಿನ್ನೆ ನಗರದಲ್ಲಿ ನಡೆದಿದ್ದು, ರಸ್ತೆಗಳ ಇಕ್ಕೆಲಗಳಲ್ಲಿ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರು. ಈ ಜನಸ್ತೋಮವು ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.
ಭಾರತದಲ್ಲಿ ಈ ಹಿಂದೆ ಎಂದೂ ಇಷ್ಟು ದೊಡ್ಡ ಪ್ರಮಾಣದ, ಬೃಹತ್ ಜನಸ್ತೋಮದ ನಡುವೆ ಯಾವೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಯೂ ನಡೆದಿರಲಿಲ್ಲ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ತಿಳಿಸಿದೆ.
ಲಿಮ್ಕಾ ಪ್ರಕಾರ, ಜುಬೀನ್ ಅವರ ಅಂತ್ಯಕ್ರಿಯೆಯು ಜಾಗತಿಕವಾಗಿ ನಡೆದ ಅಂತ್ಯಕ್ರಿಯೆಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಕ್ರಮಾಂಕದಲ್ಲಿ ಮೈಕೆಲ್ ಜಾಕ್ಸನ್ ಅವರಿದ್ದರೆ, ಎರಡು ಮತ್ತು ಮೂರನೇ ಬೃಹತ್ ವಿದಾಯದ ಕಾರ್ಯಕ್ರಮಗಳು ಕ್ರಮವಾಗಿ ಪೋಪ್ ಫ್ರಾನ್ಸಿಸ್ ಹಾಗೂ ಬ್ರಿಟನ್ ರಾಣಿ ಎಲಿಜಬೆತ್ ಅವರದಾಗಿತ್ತು ಎಂದು ಲಿಮ್ಕಾ ಹೇಳಿದೆ.
ಜುಬೀನ್ ಅಂತ್ಯಕ್ರಿಯೆ ವೇಳೆ ಅಭಿಮಾನಿಗಳು ತೀವ್ರ ದುಃಖತಪ್ತರಾಗಿದ್ದರಿಂದ ಗುವಾಹಟಿಯ ರಸ್ತೆಗಳೆಲ್ಲವೂ ಜನಸಾಗರದಿಂದ ತುಂಬಿಹೋಗಿದ್ದವು. ಆ ಕಾರಣದಿಂದ ನಗರದೆಲ್ಲೆಡೆ ಬೃಹತ್ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸಾಮೂಹಿಕ ದುಃಖದಲ್ಲಿ ಎಲ್ಲರೂ ಭಾಗಿಯಾಗಿದ್ದರಿಂದ ದೈನಂದಿನ ಜೀವನ ನಿಂತ ನೀರಾಗಿತ್ತು. ತಮ್ಮ ನೆಚ್ಚಿನ ನಾಯಕನನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಅಸ್ಸಾಂ ಅಲ್ಲದೆ ಹೊರ ರಾಜ್ಯಗಳಿಂದಲೂ ಅಪಾರ ಅಭಿಮಾನಿಗಳು ಬಂದಿದ್ದರು.
ಮೆರವಣಿಗೆ ವೇಳೆ ಪಾರ್ಥಿವ ಶರೀರವಿದ್ದ ವಾಹನದ ಮೇಲೆ ಹೂವಿನ ಸುರಿಮಳೆಗೈಯ್ಯುವ, ಆತ್ಮ ಶಾಂತಿಗಾಗಿ ಪ್ರಾರ್ಥನೆ ಮಾಡುವ ಹಾಗೂ ಗಾಯಕ ಹಾಡಿದ್ದ ಹಾಡುಗಳನ್ನು ಹಾಡುವ ಮುಖೇನ ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕನಿಗೆ ಅಂತಿಮ ವಿದಾಯ ಸಲ್ಲಿಸಿದರು. ನಗರದ ಮೂಲೆ ಮೂಲೆಯಲ್ಲೂ ಜಮಾಯಿಸಿ್ ಅಭಿಮಾನಿಗಳ ಕಣ್ಣುಗಳಲ್ಲಿ ವ್ಯಕ್ತವಾಗುತ್ತಿತ್ತು. ಈ ದುಃಖವು ಕೇವಲ ಅಸ್ಸಾಂಗೆ ಸೀಮಿತವಾಗಿರಲಿಲ್ಲ, ಬದಲಾಗಿ ಜುಬೀನ್ ಸಂಗೀತ ಕೇಳಿಕೊಂಡು ಬೆಳೆದಿದ್ದ ನವ ಪೀಳಿಗೆಗೂ ವ್ಯಾಪಿಸಿತ್ತು.
ಮುಳುಗಿ ಸಾವು
ಈಶಾನ್ಯ ಭಾರತಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಡಲೆಂದು ಜುಬೀನ್ ಸಿಂಗಾಪುರಕ್ಕೆ ತೆರಳಿದ್ದರು. ಸೆ.19ರಂದು ಸಮುದ್ರದ ಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಅವರು ಉಸಿರುಗಟ್ಟಿ ಮೃತಪಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆ ಇಡೀ ದೇಶ ತಲ್ಲಣಗೊಂಡಿತ್ತು.
ತಮ್ಮ ನೆಚ್ಚಿನ ನಾಯಕನಿಗೆ ಅಂತಿಮ ವಿದಾಯ ಸಲ್ಲಿಸಲು ಎಲ್ಲಾ ವಯೋಮಾನದ ಅಭಿಮಾನಿಗಳು ಕೂಡ ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು. ಜನಸಾಗರವೇ ನೆರೆದಿದ್ದ ಸಾಕಷ್ಟು ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿಹೋಗಿದ್ದವು. ಇದನ್ನು ನೋಡಿದ ಕೆಲವರು, ದುಃಖದಲ್ಲಿ ಹಿಂದೆಂದೂ ಕಾಣದ ಅಪರೂಪದ ಕ್ಷಣಕ್ಕೆ ಅಸ್ಸಾಂ ಸಾಕ್ಷಿಯಾಗಿದೆ ಎಂದು ಹೇಳುತ್ತಿದ್ದರು.
ಜುಬೀನ್ ಅವರಿಗೆ ʼಗುನುಗುವ ರಾಜʼ ಎನ್ನಲಾಗುತ್ತಿತ್ತು. ಅವರು ಗಾಯಕರಿಗಿಂತ ಹೆಚ್ಚು ಎಂಬಷ್ಟು ಖ್ಯಾತಿ ಗಳಿಸಿದ್ದರು. ಜುಬೀನ್ ಅವರು ಅಸ್ಸಾಂ ಸಂಗೀತಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡಿ ಸಾಂಸ್ಕೃತಿಕ ಸೇತುವೆಯಾಗಿದ್ದರು. ಅಷ್ಟೇ ಅಲ್ಲ, 2006ರಲ್ಲಿ ತೆರೆಕಂಡ ಬಾಲಿವುಡ್ ಚಿತ್ರ ʼಗ್ಯಾಂಗ್‌ಸ್ಟರ್ʼನ ʼಯಾ ಅಲಿ..ʼ ಅಂತಹ ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದರು.