ದೆಹಲಿಯ ಹುಮಾಯೂನ್ ಸಮಾಧಿ ಬಳಿ ಕಟ್ಟಡ ಕುಸಿತ: ಐವರು ಸಾವು, ಹಲವರಿಗೆ ಗಾಯ
ಕುಸಿದಿರುವ ಭಾಗವು ಹುಮಾಯೂನ್ ಸಮಾಧಿಯ ಮುಖ್ಯ ಕಟ್ಟಡಕ್ಕೆ ಸೇರಿದ್ದಲ್ಲ, ಬದಲಾಗಿ ಅದರ ಆವರಣದ ಸಮೀಪದಲ್ಲಿದ್ದ ಒಂದು ಪಕ್ಕದ ಕಟ್ಟಡವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.;
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹುಮಾಯೂನ್ ಸಮಾಧಿಯ ಸಮೀಪದಲ್ಲಿದ್ದ ಕಟ್ಟಡವೊಂದರ ಒಂದು ಭಾಗ ಶುಕ್ರವಾರ ಕುಸಿದು ಬಿದ್ದ ಪರಿಣಾಮ ಐದು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ದರ್ಗಾ ಫತೇಹ್ ಶಾ ವಾಲಿಯ ಸಮೀಪದಲ್ಲಿದ್ದ ಕೋಣೆಯ ಚಾವಣಿ ಕುಸಿದಿದೆ. ಸುದ್ದಿ ತಿಳಿದ ತಕ್ಷಣವೇ ದೆಹಲಿ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ದೆಹಲಿ ಪೊಲೀಸರು ಸೇರಿದಂತೆ ಹಲವು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ಆರಂಭಿಸಿವೆ. ಇಲ್ಲಿಯವರೆಗೆ 10 ರಿಂದ 12 ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್ ಮತ್ತು ಎಲ್ಎಜ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಸಿದಿರುವ ಭಾಗವು ಹುಮಾಯೂನ್ ಸಮಾಧಿಯ ಮುಖ್ಯ ಕಟ್ಟಡಕ್ಕೆ ಸೇರಿದ್ದಲ್ಲ, ಬದಲಾಗಿ ಅದರ ಆವರಣದ ಸಮೀಪದಲ್ಲಿದ್ದ ಒಂದು ಪಕ್ಕದ ಕಟ್ಟಡವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಟ್ಟಡದ ರಚನೆ ದುರ್ಬಲಗೊಂಡಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗದಂತೆ, ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕಾಗಿ ಆಸ್ಪತ್ರೆಗೆ ಹೋಗುವ ಮಾರ್ಗಗಳನ್ನು ತೆರವುಗೊಳಿಸುವಂತೆ ದೆಹಲಿ ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ.