ದೇಶದಲ್ಲಿ ಪ್ರಜಾಪ್ರಭುತ್ವದ ದುರ್ಬಲಗೊಳಿಸುವಿಕೆ ಬಗ್ಗೆ ಎಚ್ಚರಿಕೆ
ಪತ್ರಕ್ಕೆ ಅಮರ್ತ್ಯ ಸೇನ್, ಅಮಿತಾವ್ ಘೋಷ್ ಮತ್ತಿತರರು ಸಹಿ;
ಅಮರ್ತ್ಯ ಸೇನ್ ಮತ್ತು ಅಮಿತಾವ್ ಘೋಷ್ ಸೇರಿದಂತೆ ಪ್ರಸಿದ್ಧ ವಿದ್ವಾಂಸರು, ಶಿಕ್ಷಣತಜ್ಞರು ಮತ್ತು ಲೇಖಕರು ಭಾರತದಲ್ಲಿ ಪ್ರಜಾಪ್ರಭುತ್ವದ ʻದುರ್ಬಲಗೊಳಿಸುವಿಕೆʼ ಬಗ್ಗೆ ಎಚ್ಚರಿಕೆ ಮತ್ತು ಕಳವಳವನ್ನು ವ್ಯಕ್ತಪಡಿಸುವ ಕಠಿಣ ಪದಗಳ ಮುಕ್ತ ಪತ್ರವನ್ನು ಬರೆದಿದ್ದಾರೆ.
ಬರಹಗಾರರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ದೋಷಾರೋಪ ಪಟ್ಟಿ ಸಲ್ಲಿಸದೆ, ವಿಚಾರಣೆಯಿಲ್ಲದೆ ಸುದೀರ್ಘ ಕಾಲ ಸೆರೆವಾಸಕ್ಕೆ ಒಳಪಡಿಸುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ. ಪತ್ರಕ್ಕೆ ಘೋಷ್ ಮತ್ತು ಸೇನ್ ಅಲ್ಲದೆ, ವೆಂಡಿ ಬ್ರೌನ್, ಗಾಯತ್ರಿ ಚಕ್ರವರ್ತಿ ಸ್ಪಿವಾಕ್, ಮಾರ್ಥಾ ಸಿ. ನುಸ್ಬಾಮ್ ಇನ್ನಿತರರು ಸಹಿ ಹಾಕಿದ್ದಾರೆ. ಇವರೆಲ್ಲರೂ ಪ್ರಸ್ತುತ ಸರ್ಕಾರವನ್ನು ಟೀಕಿಸಿದ್ದಾರೆ.
ಪ್ರಜಾಪ್ರಭುತ್ವದ ಹಿಮ್ಮುಖ ಚಲನೆ:
ಇತ್ತೀಚಿನ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ ಅವರು, ದೇಶದ ವಿವಿಧ ಅಂಗಗಳಲ್ಲಿ, ವಿಶೇಷವಾಗಿ ನ್ಯಾಯಾಂಗ ದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿರುವವರು ಪರಿಸ್ಥಿತಿಯನ್ನು ಸರಿಪಡಿಸುವುದನ್ನು ಖಾತ್ರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಈ ʻಹಿನ್ನಡೆʼ ಯು ಪ್ರಜಾಪ್ರಭುತ್ವವನ್ನು ಹಿಮ್ಮೆಟ್ಟಿಸಲು ಮತ್ತು ಭಾರತೀಯರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ.
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಅಮರ್ತ್ಯ ಸೇನ್ ಅವರ ಪ್ರತ್ಯೇಕ ಪತ್ರವನ್ನುಒಳಗೊಂಡಿರುವ ಹೇಳಿಕೆಯು ನ್ಯೂಸ್‌ಕ್ಲಿಕ್ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ (75) ಬಂಧನ ಪ್ರಕರಣವನ್ನು ಉಲ್ಲೇಖಿಸಿದೆ. ಭೀಮಾ ಕೋರೆಗಾಂವ್ ಮತ್ತು ದೆಹಲಿ ಗಲಭೆ ಪ್ರಕರಣದ ಆರೋಪಿಗಳು ಸೇರಿದಂತೆ ಇನ್ನಿತರರು ಯಾವುದೇ ವಿಚಾರಣೆಯಿಲ್ಲದೆ ದೀರ್ಘಕಾಲ ಸೆರೆಯಲ್ಲಿ ಇದ್ದುದನ್ನು ಉದಹರಿಸಿದೆ.
ಇಂಥ ಕಾರಾಗೃಹವಾಸದಿಂದ ʻಸಂವಿಧಾನ ದುರ್ಬಲಗೊಳ್ಳುತ್ತಿದೆʼ ಮತ್ತು ʻಪ್ರಜಾಪ್ರಭುತ್ವದ ಸಂರಚನೆಗಳು ಅಸ್ತವ್ಯಸ್ತಗೊಳ್ಳುತ್ತಿವೆʼ ಎಂದಿ ರುವ ಅವರು, ʻವಿಚಾರಣೆಯಿಲ್ಲದೆ ದೀರ್ಘ ಕಾಲ ಸೆರೆವಾಸ ವಿಧಿಸುವುದಕ್ಕೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ ತಿದ್ದುಪಡಿ ಮೂಲಕ ಶಾಸಕಾಂಗ ಬೆಂಬಲ ನೀಡಲಾಗಿದೆʼ. ಸಾಂವಿಧಾನಿಕ ಕಟ್ಟುಪಾಡುಗಳ ಹೊರತಾಗಿಯೂ ಶಾಸಕಾಂಗದಲ್ಲಿ ಬಹುಮತವನ್ನು ಹೊಂದಿರುವ ಸರ್ಕಾರವು ನಾಗರಿಕರನ್ನು ವಿಚಾರಣೆಯಿಲ್ಲದೆ ಜೈಲಿನಲ್ಲಿಡಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.
ಅನಾಗರಿಕತೆಯನ್ನು ತೊಡೆದುಹಾಕಿ: ಅಮರ್ತ್ಯ ಸೇನ್- ಅಮರ್ತ್ಯ ಸೇನ್ ತಮ್ಮ ಪ್ರತ್ಯೇಕ ಪತ್ರದಲ್ಲಿ ʻವಿಚಾರಣೆಯಿಲ್ಲದೆ ಮತ್ತು ನ್ಯಾಯಸಮ್ಮತವಲ್ಲದ ಜೈಲುವಾಸ ಕೆಟ್ಟ ಅನ್ಯಾಯʼ ಎಂದಿದ್ದಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ʻಇಂಥ ಅನಾಗರಿಕತೆಯನ್ನು ತೊಡೆದುಹಾಕುವʼ ವಿವೇಚನೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ʻಈ ಅನ್ಯಾಯದಿಂದ ಆಕ್ರೋಶಗೊಂಡಿರುವ ಇನ್ನಿತರರೊಂದಿಗೆ, ನನ್ನ ದೇಶದಲ್ಲಿ ಮಾನವ ಸ್ವಾತಂತ್ರ್ಯದ ಇಂಥ ಮೂಲಭೂತ ಉಲ್ಲಂ ಘನೆಗೆ ನನ್ನ ಆಕ್ರೋಶವನ್ನು ಬಲವಾಗಿ ವ್ಯಕ್ತಪಡಿಸುತ್ತಿದ್ದೇನೆ. ಇಂಥ ಆಚರಣೆಗಳಿಂದ ತಾನು ಪ್ರಜಾಪ್ರಭುತ್ವ ದೇಶ ಎಂಬ ಹೇಳಿಕೆ ಅರ್ಥ ಕಳೆದುಕೊಳ್ಳುತ್ತದೆʼ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಕಳಂಕ: ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವದಲ್ಲೇ ಅತಿ ದೊಡ್ಡಮತ್ತು ಅನುಕರಣೀಯ ಪ್ರಜಾಪ್ರಭುತ್ವ ಎಂದು ಪ್ರಶಂಸಿಸಲ್ಪಟ್ಟಿದೆ. ʻಭಾರತದಲ್ಲಿ ಪ್ರಜಾಪ್ರಭುತ್ವದ ಯಾವುದೇ ಹಿನ್ನಡೆಯು ದೇಶದ ಜನರಿಗೆ ಮಾತ್ರವಲ್ಲ, ಮಾನವೀಯತೆಯ ದುರಂತʼ ಎಂದು ಎಚ್ಚರಿಸಿದ್ದಾರೆ. ʻದೇಶ ದಲ್ಲಿನ ಇತ್ತೀಚಿನ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಅಂತಾರಾಷ್ಟ್ರೀಯ ಅಭಿಪ್ರಾಯ ಏನಿದೆ ಎಂದು ಎಚ್ಚರಿಸಲು ಈ ಪತ್ರವನ್ನು ಬರೆದಿದ್ದೇವೆʼ ಎಂದು ವಿವರಿಸಿದ್ದಾರೆ.