ಬಿಹಾರ ಚುನಾವಣೆ: ಪ್ರಚಾರದಲ್ಲಿ AI ದುರ್ಬಳಕೆಗೆ ಬ್ರೇಕ್, ಚುನಾವಣಾ ಆಯೋಗದಿಂದ ಕಠಿಣ ನಿಯಮ ಜಾರಿ
ಹೊಸ ನಿಯಮಗಳ ಅನ್ವಯ, ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಬಳಸುವ ಯಾವುದೇ ಎಐ-ರಚಿತ ಅಥವಾ ಡಿಜಿಟಲ್ ಆಗಿ ಬದಲಾಯಿಸಿದ ಚಿತ್ರ, ಆಡಿಯೊ ಅಥವಾ ವಿಡಿಯೊಗೆ 'AI-Generated' ಅಥವಾ 'Synthetic Content' ಎಂಬ ಲೇಬಲ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು.
ಸಾಂದರ್ಭಿಕ ಚಿತ್ರ
ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ 'ಡೀಪ್‌ಫೇಕ್' ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಐ ಬಳಸಿ ರಾಜಕೀಯ ನಾಯಕರ ನಕಲಿ ವಿಡಿಯೊ ಹಾಗೂ ಆಡಿಯೊಗಳನ್ನು ಸೃಷ್ಟಿಸಿ ಮತದಾರರನ್ನು ದಾರಿತಪ್ಪಿಸುವ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ "ಗಂಭೀರ ಬೆದರಿಕೆ" ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ.
ಹೊಸ ನಿಯಮಗಳ ಅನ್ವಯ, ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಬಳಸುವ ಯಾವುದೇ ಎಐ-ರಚಿತ ಅಥವಾ ಡಿಜಿಟಲ್ ಆಗಿ ಬದಲಾಯಿಸಿದ ಚಿತ್ರ, ಆಡಿಯೊ ಅಥವಾ ವಿಡಿಯೊಗೆ 'AI-Generated' ಅಥವಾ 'Synthetic Content' ಎಂಬ ಲೇಬಲ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಲೇಬಲ್, ದೃಶ್ಯದ ಕನಿಷ್ಠ ಶೇ. 10ರಷ್ಟು ಭಾಗವನ್ನು ಆವರಿಸಿರಬೇಕು ಮತ್ತು ಅದರ ಸೃಷ್ಟಿಕರ್ತರ ಮಾಹಿತಿಯನ್ನು ಸಹ ಬಹಿರಂಗಪಡಿಸಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ.
ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಗುರುತು ಅಥವಾ ಧ್ವನಿಯನ್ನು ಬಳಸಿ ನಕಲಿ ವಿಷಯಗಳನ್ನು ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ, ರಾಜಕೀಯ ಪಕ್ಷಗಳ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇಂತಹ ತಪ್ಪು ಮಾಹಿತಿ ಕಂಡುಬಂದರೆ, ವರದಿಯಾದ ಮೂರು ಗಂಟೆಯೊಳಗೆ ಅದನ್ನು ತೆಗೆದುಹಾಕಬೇಕು ಎಂದು ಆಯೋಗ ಗಡುವು ನೀಡಿದೆ. ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ಈ ಅಧಿಕಾರವನ್ನು ಬಳಸಿಕೊಂಡು, ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.