ಇಡಿ ದಾಳಿಯನ್ನು ತೆರೆದ ಬಾಹುಗಳಿಂದ ಸ್ವಾಗತಿಸುವೆ: ರಾಹುಲ್

Update: 2024-08-02 12:53 GMT

ನವದೆಹಲಿ, ಆ 2: ಸಂಸತ್ತಿನಲ್ಲಿ 'ಚಕ್ರವ್ಯೂಹ' ಭಾಷಣ ಮಾಡಿದ ನಂತರ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆಸಲು ಯೋಜಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ವಯನಾಡಿನಲ್ಲಿ ಭೀಕರ ಭೂಕುಸಿತದ ಬಳಿ ಸಂಸದರಾಗಿ ಅವರ ಉತ್ತರದಾಯಿತ್ವವನ್ನು ಪ್ರಶ್ನಿಸುವವರನ್ನು ಬೇರೆಡೆಗೆ ಸೆಳೆಯಲು ರಾಹುಲ್‌, ಹೊಸ ಕಥನವನ್ನು ರಚಿಸುತ್ತಿದ್ದಾರೆ ಎಂದು ಬಿಜೆಪಿ ಅವರ ಹೇಳಿಕೆಯನ್ನು ತಳ್ಳಿಹಾಕಿದೆ.

ಶುಕ್ರವಾರ ಬೆಳಗ್ಗೆ ಎಕ್ಸ್‌ನ ಪೋಸ್ಟ್‌ನಲ್ಲಿ ರಾಹುಲ್,‌ ʻಅವರಿಗೆ ನನ್ನ ಚಕ್ರವ್ಯೂಹದ ಭಾಷಣ ಇಷ್ಟವಾಗಿಲ್ಲ. ನನ್ನ ಮೇಲೆ ದಾಳಿಯನ್ನು ಯೋಜಿಸಲಾಗಿದೆ ಎಂದು ಇಡಿ ಒಳಗಿರುವವರು ಹೇಳಿದ್ದಾರೆ. ಚಹಾ ಮತ್ತು ಬಿಸ್ಕತ್‌ ನೊಂದಿಗೆ ತೆರೆದ ಬಾಹುಗಳಿಂದ ಕಾಯುತ್ತಿದ್ದೇನೆ,ʼ ಎಂದು ಬರೆದಿದ್ದರು.

ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಅವರು, ʻಕಿರುಕುಳ ನೀಡಲು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಮತ್ತಿತರ ಏಜೆನ್ಸಿಗಳನ್ನು ಬಿಜೆಪಿ ಸರ್ಕಾರ ದುರುಪಯೋಗಪಡಿಸಿಕೊಂಡಿದೆ,ʼ ಎಂದು ನೋಟಿಸ್ ಸಲ್ಲಿಸಿದರು.

ʻಇಂಥ ದುರುಪಯೋಗವನ್ನು ಪ್ರತಿಪಕ್ಷಗಳು ಖಂಡಿಸುತ್ತವೆ. ಬಿಜೆಪಿ ಸಂಖ್ಯೆ 303 ರಿಂದ 240 ಕ್ಕೆ ಇಳಿದು, ಟಿಡಿಪಿ ಮತ್ತು ಜೆಡಿಯು ಮೈತ್ರಿಯನ್ನು ಅವಲಂಬಿಸಿದ್ದರೂ, ಕೇಂದ್ರೀಯ ಏಜೆನ್ಸಿಗಳ ಬಳಕೆ ಮುಂದುವರಿಸಿದೆ. ವಿರೋಧ ಪಕ್ಷದ ನಾಯಕರನ್ನು ಬೆದರಿಸುವುದು ಮತ್ತು ಪ್ರಜಾಸತ್ತಾತ್ಮಕ ತತ್ವಗಳನ್ನು ದುರ್ಬಲಗೊಳಿಸುವುದು ಸ್ವೀಕಾರಾರ್ಹವಲ್ಲ; ಇದರಿಂದ ನಮ್ಮ ಸಂಸ್ಥೆಗಳ ಸಮಗ್ರತೆಗೆ ಧಕ್ಕೆ ತರುತ್ತದೆʼ ಎಂದು ನೋಟಿಸ್‌ ನಲ್ಲಿದೆ .

ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ʻಜನರು ನಿಮ್ಮ ಹೊಣೆಗಾರಿಕೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಹೇಳಿರಬಹುದು. ಆದ್ದರಿಂದ ಅವರು ಹೊಸ ಕಥನ ರಚಿಸಲು ಪ್ರಯತ್ನಿಸಿದ್ದಾರೆ,ʼ ಎಂದು ಹೇಳಿದರು.

ಪ್ರತಿಪಕ್ಷಗಳು ರಾಹುಲ್‌ ಅವರ ಬೆಂಬಲಕ್ಕೆ ನಿಂತಿವೆ. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ನಾಗೌರ್ ಸಂಸದ ಹನುಮಾನ್ ರಾಮ್‌ದೇವ್ ಬೇನಿವಾಲ್ ಅವರು, ರಾಹುಲ್‌ ಹೇಳಿರುವುದು ಸರಿ ಇದೆ. ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ,ʼ ಎಂದಿದ್ದಾರೆ.

ಸ್ವತಂತ್ರ ಸಂಸದ ಪಪ್ಪು ಯಾದವ್, ʻಜನರನ್ನು ಹೆದರಿಸುವುದು ಸರ್ಕಾರ ಮತ್ತು ಇಡಿ ಪ್ರವೃತ್ತಿಯಾಗಿದೆ. ಆದರೆ, ರಾಹುಲ್‌ ಅವರಲ್ಲಿ ಕಿಂಚಿತ್‌ ಭಯ ಇಲ್ಲ,ʼ ಎಂದಿದ್ದಾರೆ.

ಎಎಪಿ ಸಂಸದ ಸಂಜಯ್ ಸಿಂಗ್, ʻ ಇಡಿ ಮತ್ತು ಸಿಬಿಐ ಪ್ರತಿಪಕ್ಷಗಳ ಧ್ವನಿ ಹತ್ತಿಕ್ಕುವ ಮತ್ತು ಸರ್ಕಾರಗಳನ್ನು ಉರುಳಿಸುವ ಏಜೆನ್ಸಿಗಳಾಗಿ ಕೆಲಸ ಮಾಡುತ್ತಿವೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳುತ್ತೇನೆ; ಸಮಯ ಬದಲಾಗಿದೆ, ನೀವು 240 ತಲುಪಿದ್ದೀರಿ. ಹೀಗೆಯೇ ಮುಂದುವರಿದರೆ 24 ಮತ್ತು ಎರಡು ತಲುಪುತ್ತಾರೆ,ʼ ಎಂದು ಸುದ್ದಿಗಾರರಿಗೆ ತಿಳಿಸಿದರು.

ಚಕ್ರವ್ಯೂಹ ರೂಪಕ: ಸಂಸತ್ತಿನಲ್ಲಿ ಸೋಮವಾರ ʼಚಕ್ರವ್ಯೂಹ' ರೂಪಕವನ್ನು ಬಳಸಿದ್ದ ರಾಹುಲ್‌, ಆರು ಮಂದಿ ಇಡೀ ದೇಶವನ್ನು 'ಚಕ್ರವ್ಯೂಹ'ದಲ್ಲಿ ಸಿಲುಕಿಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಇದನ್ನು ಇಂಡಿಯ ಒಕ್ಕೂಟ ಛಿದ್ರಗೊಳಿಸಲಿದೆ ಎಂದು ಹೇಳಿದ್ದರು.

ಕುರುಕ್ಷೇತ್ರದ 'ಚಕ್ರವ್ಯೂಹ'ದಲ್ಲಿ ಅಭಿಮನ್ಯುವನ್ನು ಆರು ಜನರು ಕೊಂದಿದ್ದರು. ಚಕ್ರವ್ಯೂಹ ಎಂದರೆ ಹಿಂಸೆ ಮತ್ತು ಭಯ. ಕಮಲ (ಬಿಜೆಪಿಯ ಚುನಾವಣೆ ಚಿಹ್ನೆ)ದ ರಚನೆಯನ್ನು ಹೋಲುವುದರಿಂದ, 'ಚಕ್ರವ್ಯೂಹ'ವನ್ನು 'ಪದ್ಮವ್ಯೂಹ' ಎಂದೂ ಕರೆಯುತ್ತಾರೆ ಎಂದು ರಾಹುಲ್‌ ಹೇಳಿದ್ದರು. 

Tags:    

Similar News