ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧಿಸಿದ ಇಡಿ

ಇಡಿ ಬಂಧನವಾಗದಂತೆ ತಡೆಯಲು ದೆಹಲಿ ಹೈಕೋರ್ಟ್‌ ನಿರಾಕರಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ನಿವಾಸಕ್ಕೆ ತೆರಳಿದ ಇಡಿ ಅಧಿಕಾರಿಗಳು ಬಂಧಿಸಿದರು. ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿದ ಪ್ರಕರಣ ಇದಾಗಿದೆ.;

Update: 2024-03-21 16:40 GMT

ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ರಾತ್ರಿ ಬಂಧಿಸಿದೆ.

ಇಡಿ ಬಂಧನವಾಗದಂತೆ ತಡೆಯಲು ದೆಹಲಿ ಹೈಕೋರ್ಟ್‌ ನಿರಾಕರಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ನಿವಾಸಕ್ಕೆ ತೆರಳಿದ ಇಡಿ ಅಧಿಕಾರಿಗಳು ಬಂಧಿಸಿದರು.  ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿದ ಪ್ರಕರಣ ಇದಾಗಿದೆ. ಹೈಕೋರ್ಟ್ ಆದೇಶದ ನಂತರ ಇಡಿ ತಂಡವು ಅವರ ನಿವಾಸಕ್ಕೆ ಆಗಮಿಸಿ ಶೋಧ ನಡೆಸಿತು. ನಂತರ ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಮತ್ತು ಅಗತ್ಯವಿದ್ದರೆ  ಅವರು ಸರ್ಕಾರವನ್ನು ಜೈಲಿನಿಂದಲೇ ನಡೆಸುತ್ತಾರೆ ಎಂದು ದೆಹಲಿ ಕ್ಯಾಬಿನೆಟ್ ಸಚಿವ ಅತಿಶಿ ಹೇಳಿದ್ದಾರೆ.  ಇಡಿ  ಕ್ರಮದ ವಿರುದ್ಧ ಆಮ್ ಆದ್ಮಿ ಪಕ್ಷವು ಸುಪ್ರೀಂ ಕೋರ್ಟ್‌ನ ಮೊರೆ ಹೋಗಲಿದೆ ಎಂದು ಅವರು ಹೇಳಿದರು.

"ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಅಗತ್ಯವಿದ್ದರೆ, ಅವರು ಸರ್ಕಾರವನ್ನು ಜೈಲಿನಿಂದ ನಡೆಸುತ್ತಾರೆ. ಅವರು ಜೈಲಿನಿಂದ ಸರ್ಕಾರವನ್ನು ನಡೆಸುವುದನ್ನು ತಡೆಯುವ ಯಾವುದೇ ನಿಯಮವಿಲ್ಲ," ಎಂದು ಅತಿಶಿ ಹೇಳಿದರು.



ಹೈಕೋರ್ಟ್‌ ನಿರಾಕರಣೆ:

ಅಬಕಾರಿ ನೀತಿ ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ಇಡಿ) ತಂಡ ಗುರುವಾರ ಸಂಜೆ ಕೇಜ್ರಿವಾಲ್ ಅವರ ನವದೆಹಲಿ ನಿವಾಸವನ್ನು ತಲುಪಿದೆ. ತಮ್ಮ ಬಳಿ ಸರ್ಚ್ ವಾರೆಂಟ್ ಇದೆ ಎಂದು ಮುಖ್ಯಮಂತ್ರಿ ನಿವಾಸದ ಸಿಬ್ಬಂದಿಗೆ ತಂಡ ತಿಳಿಸಿದೆ.  ಪ್ರಕರಣದಲ್ಲಿ ಕೇಜ್ರಿವಾಲ್‌ ಈ ಹಿಂದೆ ಏಜೆನ್ಸಿಯ ಅನೇಕ ಸಮನ್ಸ್‌ಗಳನ್ನು ತಪ್ಪಿಸಿಕೊಂಡಿದ್ದರು.

ಬಂಧನ ಬಗ್ಗೆ ಟ್ವೀಟ್‌

ಎಎಪಿ- ಮುಖ್ಯಮಂತ್ರಿ ಮನೆ ಹೊರಗೆ ಭಾರೀ ಭದ್ರತೆ ಇರುವುದರಿಂದ, ಇಡಿ ಕೇಜ್ರಿವಾಲ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ದೆಹಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದರು. ʻಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆʼ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.

ʻವಿಷಯ ದೆಹಲಿ ಹೈಕೋರ್ಟ್‌ನಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ. ಕೇಜ್ರಿವಾಲ್ ಅವರ ಬಂಧನ ಏಕೆ ನಿರ್ಣಾಯಕ ಎಂಬ ಕುರಿತು ಉತ್ತರ ನೀಡಲು ಹೈಕೋರ್ಟ್ ಇಡಿಗೆ ಏಪ್ರಿಲ್ 22 ರವರೆಗೆ ಸಮಯ ನೀಡಿದೆ. ಒಂದರ್ಥದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದೊಳಗೆ ಈಗ ಜಾರಿ ನಿರ್ದೇಶನಾಲಯವಿದೆ; ಮನೆ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಇದೆ. ಈಗ ಕೇಜ್ರಿವಾಲ್ ಜೊತೆ ಅಥವಾ ಅವರ ಕಾರ್ಯದರ್ಶಿಯೊಂದಿಗೆ ಸಂವಹನ ಸಾಧ್ಯವಿಲ್ಲ. ಏಜೆನ್ಸಿ ಅವರನ್ನು ಬಂಧಿಸಬಹುದು... ಬಿಜೆಪಿಯ ದುಷ್ಕೃತ್ಯಗಳು ಈ ದೇಶದ ಮುಂದೆ ಬಯಲಾಗಿವೆ...ʼ’ ಎಂದು ಅವರು ನಂತರ ಮಾಧ್ಯಮಗಳಿಗೆ ತಿಳಿಸಿದರು.

ಸುಪ್ರೀಂ ಮೊರೆ ಹೋದ ಕೇಜ್ರಿವಾಲ್: ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ಪೀಠ, ಕೇಜ್ರಿವಾಲ್‌ಗೆ ಬಲವಂತದ ಕ್ರಮದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿತು. ಎಎಪಿ ನಾಯಕನ ಅರ್ಜಿಯನ್ನು ಹೆಚ್ಚಿನ ಪರಿಗಣನೆಗೆ ಏಪ್ರಿಲ್ 22ಕ್ಕೆ ಪಟ್ಟಿ ಮಾಡಿತು. ಸಮನ್ಸ್ ಪ್ರಶ್ನಿಸಿ ಸಲ್ಲಿಸಿದ್ದ ಅವರ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲಾಯಿತು ಮತ್ತು ಪ್ರತಿಕ್ರಿಯೆ ಸಲ್ಲಿಸಲು ಇಡಿಗೆ ಕೇಳಲಾಯಿತು.

ಪ್ರಕರಣ 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ನಂತರ ಆ ನೀತಿಯನ್ನು ರದ್ದುಗೊಳಿಸಲಾಯಿತು. ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇಡಿ ಸಲ್ಲಿಸಿರುವ ಚಾರ್ಜ್ ಶೀಟ್‌ಗಳಲ್ಲಿ ಕೇಜ್ರಿವಾಲ್ ಹೆಸರನ್ನು ಹಲವು ಬಾರಿ ಉಲ್ಲೇಖಿಸಲಾಗಿದೆ. ಆರೋಪಿಗಳು ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಇದರಿಂದಾಗಿ ಅವರಿಗೆ ಅನಪೇಕ್ಷಿತ ಲಾಭ ಉಂಟಾಗಿದೆ ಮತ್ತು ಎಎಪಿಗೆ ಲಂಚ ಪಾವತಿಯಾಗಿದೆ ಎಂದು ಇಡಿ ಆರೋಪಿಸಿದೆ.


ಅರವಿಂದ್ ಕೇಜ್ರಿವಾಲ್‌ ಬಂಧನ ಕುರಿತ ಕ್ಷಣಕ್ಷಣದ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.. https://thefederal.com/latest-news/excise-policy-case-ed-team-at-delhi-cm-kejriwals-residence-with-search-warrant-114646

Tags:    

Similar News