‌ಕರ್ನಾಟಕ ಬರ ಪರಿಹಾರ: ವಾರದಲ್ಲಿ ನಿರ್ಧಾರ ಎಂದು ಸುಪ್ರೀಂಕೋರ್ಟ್‌ಗೆ ಹೇಳಿದ ಕೇಂದ್ರ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ಅನುಮತಿ ಕೋರಿತ್ತು. ಈಗಾಗಲೇ ಚುನಾವಣಾ ಆಯೋಗ ಅನುಮತಿ ನೀಡಿದ್ದು, ಮುಂದಿನ ಒಂದು ವಾರದಲ್ಲಿ ಸರ್ಕಾರ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ವೆಂಕಟರಮಣಿ ಅವರು ಪೀಠಕ್ಕೆ ಹೇಳಿದರು.

Update: 2024-04-22 07:54 GMT

ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮುಂದಿನ ಒಂದು ವಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಹೇಳಿದೆ. 

ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಮೊರೆ ಹೋಗಿರುವ ಕರ್ನಾಟಕ ಸರ್ಕಾರದ ಅರ್ಜಿಯ ವಿಚಾರಣೆ ವೇಳೆ, ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಈ ಮಾಹಿತಿ ನೀಡಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ಅನುಮತಿ ಕೋರಿತ್ತು. ಈಗಾಗಲೇ ಚುನಾವಣಾ ಆಯೋಗ ಅನುಮತಿ ನೀಡಿದ್ದು, ಮುಂದಿನ ಒಂದು ವಾರದಲ್ಲಿ ಸರ್ಕಾರ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ವೆಂಕಟರಮಣಿ ಅವರು ಪೀಠಕ್ಕೆ ಹೇಳಿದರು.

ಕಳೆದ ವಾರ ಬರ ಪರಿಹಾರ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಮುಖ್ಯ ಎಂದಿದ್ದ ಸುಪ್ರೀಂಕೋರ್ಟ್‌, ಚುನಾವಣಾ ಆಯೋಗದ ಅನುಮತಿ ಪಡೆದು ಸಮಸ್ಯೆ ಬಗೆಹರಿಸುವಂತೆ ಹೇಳಿತ್ತು. 

ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಮತ್ತು ಅದರಿಂದಾಗಿ ಉದ್ಭವಿಸಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್)ಯಿಂದ 36,162 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟಿನ ಮೊರೆ ಹೋಗಿತ್ತು.

ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ನೆನಪಿಸಿದ ಸುಪ್ರೀಂಕೋರ್ಟ್‌

ನ್ಯಾಯಮೂರ್ತಿಗಳಾದ ಭೂಷಣ್ .ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿ‌ ಅವರು ಮಾಹಿತಿ ನೀಡಿ, ಕರ್ನಾಟಕದ ಮನವಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಕೋರಿತ್ತು. ಆಯೋಗ ಈಗಾಗಲೇ ಅನುಮತಿ ನೀಡಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಆದಷ್ಟು ಶೀಘ್ರವೇ, ಮುಂದಿನ ಸೋಮವಾರದ ಒಳಗಾಗಿ ಒಂದು ತೀರ್ಮಾನ ಕೈಗೊಳ್ಳಲಿದೆ. ಹಾಗಾಗಿ ಈ ಹಂತದಲ್ಲಿ ಅರ್ಜಿಯ ಮೇಲಿನ ವಾದ ಮುಂದುವರಿಸುವುದು ಬೇಡ ಎಂದು ಮನವಿ ಮಾಡಿದರು.

ಆ ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯಿಸಿದ ಪೀಠ, ಬರದಂತಹ ವಿಷಯದಲ್ಲಿ ನ್ಯಾಯಾಂಗದ ಮಧ್ಯಪ್ರವೇಶದಂತಹ ಪರಿಸ್ಥಿತಿ ಉದ್ಭವಿಸಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸ್ಥಿತಿಯನ್ನು ಅವಲೋಕಿಸಿ ಪರಸ್ಪರ ಹೊಂದಾಣಿಕೆ ಮೂಲಕ ಸೂಕ್ತ ಮತ್ತು ಸಕಾಲಿಕ ನಿರ್ಧಾರಗಳನ್ನು ಕೈಗೊಳ್ಳಬೇಕು. ನಮ್ಮದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯ ಮೂಲಕ ಕೆಲಸ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. 

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಎಜಿ ವೆಂಕಟರಮಣಿ ಅವರು, ಒಂದು ವಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಆವರೆಗೆ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿಕೆಕೊಂಡರು. ಕರ್ನಾಟಕ ಸರ್ಕಾರದ ಪರ ವಕೀಲ ಕಪಿಲ್‌ ಸಿಬಲ್‌ ಕೂಡ ಸಹಮತ ಸೂಚಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.

ಕರ್ನಾಟಕದಲ್ಲಿ 'ಭೀಕರ ಬರ'

ನೂರು ವರ್ಷಗಳಲ್ಲೇ ಕಂಡುಕೇಳರಿಯದ ಪ್ರಮಾಣದ ಭೀಕರ ಬರಗಾಲ ರಾಜ್ಯದ 223 ತಾಲೂಕುಗಳಲ್ಲಿ ವ್ಯಾಪಿಸಿದ್ದು, ಆಹಾರ ಧಾನ್ಯ, ಕುಡಿಯುವ ನೀರಿಗಾಗಿ ಜನ ಜಾನುವಾರು ಹಾಹಾಕಾರಪಡುವ ಸ್ಥಿತಿ ಇದೆ. ಆದರೂ, ಬರ ಪರಿಹಾರ ಕೋರಿ ಆರು ತಿಂಗಳು ಉರುಳಿದರೂ ಕೇಂದ್ರ ಸರ್ಕಾರ ಬಿಡಿಗಾಸಿನ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ಸರ್ಕಾರ, ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು.

ಪರಿಹಾರಕ್ಕೆ ಹಣಕಾಸು ನೆರವು ಬಿಡುಗಡೆ ಮಾಡದೆ ಇರುವ ಕೇಂದ್ರದ ಕ್ರಮವು ಸಂವಿಧಾನದ 14 ಮತ್ತು 21 ನೇ ಪರಿಚ್ಛೇದದಡಿ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ರಾಜ್ಯ ತೀವ್ರ ಬರದಿಂದ ತತ್ತರಿಸುತ್ತಿದೆ. 236 ರಲ್ಲಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. 196 ತಾಲೂಕುಗಳನ್ನು ತೀವ್ರ ಮತ್ತು 27 ಮಧ್ಯಮ ಪೀಡಿತ ಎಂದು ವರ್ಗೀಕರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹಿರಿಯ ವಕೀಲ ದೇವದತ್‌ ಕಾಮತ್ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಕೆ. ಶಶಿ ಕಿರಣ್ ಶೆಟ್ಟಿ ಅವರು, ʻವಿಪತ್ತು ನಿರ್ವಹಣಾ ಕಾಯಿದೆ 2005 ರ ಪ್ರಕಾರ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡಲು ಭಾರತ ಒಕ್ಕೂಟವು ಬಾಧ್ಯತೆ ಹೊಂದಿದೆʼ ಎಂದು ಮನವಿ ಸಲ್ಲಿಸಿದ್ದರು.

ʻಅಂತರ್-ಸಚಿವಾಲಯದ ಕೇಂದ್ರ ಬರ ಅಧ್ಯಯನ ತಂಡ (ಐಎಂಸಿಟಿ)ದ ಮನವಿ ಸ್ವೀಕರಿಸಿದ ಒಂದು ತಿಂಗಳೊಳಗೆ ಎನ್‌ಡಿಆರ್‌ಎಫ್‌ನಿಂದ ರಾಜ್ಯಕ್ಕೆ ನೆರವು ನೀಡಬೇಕಿದೆ. ಆದರೆ, ಆರು ತಿಂಗಳ ಕಾಲ ಕಳೆದರೂ ಕೇಂದ್ರ ನಿರ್ಧಾರ ತೆಗೆದುಕೊಂಡಿಲ್ಲ,ʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಅಧಿಕಾರರೂಢ ಕಾಂಗ್ರೆಸ್‌, ಬರ ಪರಿಹಾರಕ್ಕೆ ಬಿಡಿಗಾಸಿನ ನೆರವು ನೀಡದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಸುತ್ತಿದೆ.

Tags:    

Similar News