ತಮಿಳುನಾಡು ರಾಜ್ಯಪಾಲರಿಂದ ಪದವಿ ಸ್ವೀಕರಿಸಲು ಡಿಎಂಕೆ ಮುಖಂಡನ ಪತ್ನಿ ನಿರಾಕರಣೆ
ಡಿಎಂಕೆ ಉಪ ಕಾರ್ಯದರ್ಶಿ ಎಂ. ರಾಜನ್ ಅವರ ಪತ್ನಿ ಜೀನ್ ಜೋಸೆಫ್ ಅವರು, ರಾಜ್ಯಪಾಲರು "ತಮಿಳುನಾಡು ವಿರೋಧಿ" ಎಂದು ಆರೋಪಿಸಿ, ಅವರಿಂದ ತಮ್ಮ ಡಾಕ್ಟರೇಟ್ ಪದವಿಯನ್ನು ಪಡೆಯಲು ನಿರಾಕರಿಸಿದರು.;
ತಮಿಳುನಾಡಿನಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಾರ್ವಜನಿಕ ಸಮಾರಂಭದಲ್ಲೂ ತೀವ್ರವಾಗಿ ವ್ಯಕ್ತವಾಗಿವೆ. ಆಡಳಿತಾರೂಢ ಡಿಎಂಕೆ (DMK) ಪಕ್ಷದ ಪದಾಧಿಕಾರಿಯೊಬ್ಬರ ಪತ್ನಿಯಾಗಿರುವ ಪಿಎಚ್‌ಡಿ ಸಂಶೋಧಕಿಯೊಬ್ಬರು, ರಾಜ್ಯಪಾಲ ಆರ್.ಎನ್. ರವಿ ಅವರಿಂದ ತಮ್ಮ ಪದವಿ ಸ್ವೀಕರಿಸಲು ನಿರಾಕರಿಸಿದ್ದಾರೆ.
ಬುಧವಾರ, (ಆಗಸ್ಟ್ 13 ರಂದು_ ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಈ ಘಟನೆ ನಡೆದಿದೆ. ನಾಗರಕೋಯಿಲ್ ನಗರ ಘಟಕದ ಡಿಎಂಕೆ ಉಪ ಕಾರ್ಯದರ್ಶಿ ಎಂ. ರಾಜನ್ ಅವರ ಪತ್ನಿ ಜೀನ್ ಜೋಸೆಫ್ ಅವರು, ರಾಜ್ಯಪಾಲರು "ತಮಿಳುನಾಡು ವಿರೋಧಿ" ಎಂದು ಆರೋಪಿಸಿ, ಅವರಿಂದ ತಮ್ಮ ಡಾಕ್ಟರೇಟ್ ಪದವಿಯನ್ನು ಪಡೆಯಲು ನಿರಾಕರಿಸಿದರು. ಬದಲಾಗಿ, ಅವರು ವಿಶ್ವವಿದ್ಯಾಲಯದ ಉಪಕುಲಪತಿ ಎನ್. ಚಂದ್ರಶೇಖರ್ ಅವರಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ಸಮಾರಂಭದ ವಿಡಿಯೋ ದೃಶ್ಯಾವಳಿಯಲ್ಲಿ, ಜೀನ್ ಜೋಸೆಫ್ ಮುಖ್ಯ ಅತಿಥಿಯಾಗಿದ್ದ ರಾಜ್ಯಪಾಲ ಆರ್.ಎನ್. ರವಿ ಅವರನ್ನು ದಾಟಿ ಹೋಗಿ, ನೇರವಾಗಿ ಉಪಕುಲಪತಿ ಚಂದ್ರಶೇಖರ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. "ಆರ್.ಎನ್. ರವಿ ಅವರು ತಮಿಳುನಾಡು ಮತ್ತು ಇಲ್ಲಿನ ಜನರಿಗೆ ವಿರೋಧಿಯಾಗಿದ್ದಾರೆ. ಅವರು ತಮಿಳು ಜನರಿಗಾಗಿ ಏನನ್ನೂ ಮಾಡಿಲ್ಲ. ಹಾಗಾಗಿ, ಅವರಿಂದ ನನ್ನ ಪದವಿಯನ್ನು ಸ್ವೀಕರಿಸಲು ನಾನು ಬಯಸಲಿಲ್ಲ," ಎಂದು ಜೀನ್ ಜೋಸೆಫ್ ನಂತರ ಸ್ಪಷ್ಟಪಡಿಸಿದರು.
ಪದವಿ ಸ್ವೀಕರಿಸಲು ಬಂದ ಜೀನ್ ಜೋಸೆಫ್ ತಮ್ಮನ್ನು ದಾಟಿ ಹೋಗುತ್ತಿರುವುದನ್ನು ಗಮನಿಸಿದ ರಾಜ್ಯಪಾಲರು, ಇದು ತಪ್ಪಿನಿಂದ ಆಗಿದೆ ಎಂದು ಭಾವಿಸಿ ಅವರನ್ನು ಕರೆಯಲು ಪ್ರಯತ್ನಿಸಿದರು. ಆದರೆ, ಜೀನ್ ಅವರು ತಮ್ಮ ಈ ನಡೆಯು ಉದ್ದೇಶಪೂರ್ವಕವಾದುದು ಎಂದು ಸನ್ನೆಯ ಮೂಲಕ ಸ್ಪಷ್ಟಪಡಿಸಿದರು. ಇದನ್ನು ಗಮನಿಸಿದ ರಾಜ್ಯಪಾಲರು ತಲೆಯಾಡಿಸಿ, ಮುಂದಿನ ಅಭ್ಯರ್ಥಿಯತ್ತ ಗಮನ ಹರಿಸಿದರು.
ಈ ಘಟನೆಯು ಆಡಳಿತಾರೂಢ ಡಿಎಂಕೆ ಮತ್ತು ರಾಜ್ಯಪಾಲ ಆರ್.ಎನ್. ರವಿ ಅವರ ನಡುವೆ ನಡೆಯುತ್ತಿರುವ ವ್ಯಾಪಕ ರಾಜಕೀಯ ಸಂಘರ್ಷದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ. ನೀತಿ ನಿರೂಪಣೆ, ವಿಶ್ವವಿದ್ಯಾಲಯಗಳ ನೇಮಕಾತಿ, ಮತ್ತು ರಾಜ್ಯಪಾಲರ ಕೆಲವು ಸಾರ್ವಜನಿಕ ಹೇಳಿಕೆಗಳು ಈ ಹಿಂದೆ ಹಲವು ಬಾರಿ ಉಭಯರ ನಡುವೆ ಉದ್ವಿಗ್ನತೆಗೆ ಕಾರಣವಾಗಿವೆ. ರಾಜ್ಯ ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಡಿಎಂಕೆ ಸರ್ಕಾರ ಆರೋಪಿಸುತ್ತಲೇ ಬಂದಿದೆ.