Delhi excise scam | ದೆಹಲಿ ಸಿಎಂ ಜಾಮೀನು ಆದೇಶ ಕಾಯ್ದಿರಿಸಿದ ಸುಪ್ರೀಂ
ಸಿಬಿಐ ತನ್ನನ್ನು ಸುಮಾರು ಎರಡು ವರ್ಷಗಳಿಂದ ಬಂಧಿಸಿರಲಿಲ್ಲ.ಇಡಿ ದಾಖಲಿಸಿದ ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಜೂನ್ 26 ರಂದು ಬಂಧಿಸಿದೆ ಎಂದು ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.;
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ಮತ್ತು ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿರುವುದರ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ʻಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ತನ್ನನ್ನು ಸುಮಾರು ಎರಡು ವರ್ಷಗಳಿಂದ ಬಂಧಿಸಲಿಲ್ಲ. ಆದರೆ, ಇಡಿ ಸಲ್ಲಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಜೂನ್ 26 ರಂದು ಬಂಧಿಸಿದೆ,ʼ ಎಂದು ಕೇಜ್ರಿವಾಲ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠಕ್ಕೆ ಗುರುವಾರ ತಿಳಿಸಿದರು.
ಮುಖ್ಯಮಂತ್ರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ʻಬಂಧನಕ್ಕೆ ಮುನ್ನ ಸಿಬಿಐ ಕೇಜ್ರಿವಾಲ್‌ಗೆ ಯಾವುದೇ ನೋಟಿಸ್ ನೀಡಿಲ್ಲ. ವಿಚಾರಣೆ ನ್ಯಾಯಾಲಯವು ಕಕ್ಷಿದಾರನ ಬಂಧನ ಆದೇಶವನ್ನು ಹೊರಡಿಸಿದೆ. ಕೇಜ್ರಿವಾಲ್ ಒಬ್ಬ ಸಾಂವಿಧಾನಿಕ ಅಧಿಕಾರಿ. ಅವರನ್ನು ಸಿಬಿಐ ಎಫ್‌ಐಆರ್‌ನಲ್ಲಿ ಹೆಸರಿಸಿಲ್ಲ ಮತ್ತು ಅವರು ದೇಶ ತೊರೆಯುವ ಅಪಾಯವಿಲ್ಲʼ ಎಂದು ಹೇಳಿದರು.
ʻಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್, ಮುಖ್ಯಮಂತ್ರಿ ಸಮಾಜಕ್ಕೆ ಬೆದರಿಕೆಯಲ್ಲ ಎಂದಿದೆ. ಆಗಸ್ಟ್, 2023 ರಲ್ಲಿ ಪ್ರಾರಂಭವಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2024ರ ಮಾರ್ಚ್‌ನಲ್ಲಿ ಬಂಧಿಸಲಾಗಿದೆ. ಸುಪ್ರೀಂ ಮತ್ತು ವಿಚಾರಣಾ ನ್ಯಾಯಾಲಯವು ಈಗಾಗಲೇ ಅವರಿಗೆ ಜಾಮೀನು ನೀಡಿದೆ,ʼ ಎಂದು ಹೇಳಿದರು.
ಆಗಸ್ಟ್ 14 ರಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತ್ತು.