ಹೊಸದಿಲ್ಲಿ, ಏಪ್ರಿಲ್ 12- ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಐದು ದಿನಗಳ ಕಸ್ಟಡಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.
ದಿಲ್ಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿಯನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿದೆ. ಸಿಬಿಐ ಹಾಗೂ ಕವಿತಾ ಪರ ವಕೀಲರ ವಾದ ಆಲಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ, ಆದೇಶವನ್ನು ಕಾಯ್ದಿರಿಸಿದರು.
ʻಕವಿತಾ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಉತ್ತರಿಸದೆ ನುಣುಚಿಕೊಳ್ಳುತ್ತಿದ್ದಾರೆʼ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಆರೋಪಿ ಪರ ವಕೀಲ ನಿತೇಶ್ ರಾಣಾ ಅವರು ಸಿಬಿಐ ಮನವಿಯನ್ನು ವಿರೋಧಿಸಿ, ಬಂಧನ ಕಾನೂನುಬಾಹಿರ ಎಂದು ಹೇಳಿದರು. ತನಿಖಾ ಸಂಸ್ಥೆಯು ಕವಿತಾ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು.
ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಕವಿತಾ ಅವರನ್ನು ಜೈಲಿನೊಳಗೆ ವಿಚಾರಣೆ ನಡೆಸಿದ್ದರು. ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಕವಿತಾ (46) ಅವರನ್ನುಇಡಿ ಬಂಧಿಸಿತು.