ವಿಶಾಲ್ ಮೆಗಾ ಮಾರ್ಟ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರ ದಾರುಣ ಸಾವು
ಕಟ್ಟಡದಲ್ಲಿ ಬೆಂಕಿಯನ್ನು ನಂದಿಸಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಮತ್ತೊಂದು ಸುಟ್ಟಗಾಯಗೊಂಡ ಪುರುಷರೊಬ್ಬರ ಶವ ಪತ್ತೆಯಾಗಿದೆ. ಈ ಎರಡನೇ ಶವದ ಗುರುತನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.;
ರಾಷ್ಟ್ರ ರಾಜಧಾನಿ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿರುವ ವಿಶಾಲ್ ಮೆಗಾ ಮಾರ್ಟ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಘಟನೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬನನ್ನು 25 ವರ್ಷದ ಕುಮಾರ್ ಧೀರೇಂದ್ರ ಪ್ರತಾಪ್ ಎಂದು ಗುರುತಿಸಲಾಗಿದೆ. ಆತ ಲಿಫ್ಟ್‌ನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಆತ ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ.
ಧೀರೇಂದ್ರ ಪ್ರತಾಪ್ ತನ್ನ ಸಾವಿಗೆ ಮುನ್ನ, ಶುಕ್ರವಾರ ಸಂಜೆ 6.51ಕ್ಕೆ ತನ್ನ ಅಣ್ಣನಿಗೆ ಲಿಫ್ಟ್‌ನಿಂದ ಕಳುಹಿಸಿದ ಸಂದೇಶಗಳು ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿವೆ. "ಭೈಯಾ," ಎಂದು ಮೊದಲ ಸಂದೇಶ ಕಳುಹಿಸಿದ ಆತ, "ನಾನು ಲಿಫ್ಟ್‌ನಲ್ಲಿದ್ದೇನೆ. ಗಾಳಿಯಿಲ್ಲ. ಕರೋಲ್ ಬಾಗ್ ಮೆಗಾ ಮಾರ್ಟ್" ಎಂದು ಬರೆದಿದ್ದಾನೆ. ಅವನ ಕೊನೆಯ ಸಂದೇಶವೂ 6.51ಕ್ಕೆ ಹೋಗಿತ್ತು. "ಈಗ ಉಸಿರಾಟ ಕಷ್ಟವಾಗುತ್ತಿದೆ. ಏನಾದರೂ ಮಾಡಿ," ಎಂದಿತ್ತು. ಆ ನಂತರ ಅವನಿಂದ ಯಾವುದೇ ಸಂದೇಶಗಳು ಬಂದಿಲ್ಲ.
ಮತ್ತೊಂದು ಸುಟ್ಟ ಶವ ಪತ್ತೆ, ತನಿಖೆ ಮುಂದುವರಿದಿದೆ
ಕಟ್ಟಡದಲ್ಲಿ ಬೆಂಕಿಯನ್ನು ನಂದಿಸಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಮತ್ತೊಂದು ಸುಟ್ಟಗಾಯಗೊಂಡ ಪುರುಷರೊಬ್ಬರ ಶವ ಪತ್ತೆಯಾಗಿದೆ. ಈ ಎರಡನೇ ಶವದ ಗುರುತನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಸಂಜೆ 6.44ಕ್ಕೆ ಪದಮ್ ಸಿಂಗ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದ ಎರಡನೇ ಮಹಡಿಯಿಂದ ಬೆಂಕಿಯ ಬಗ್ಗೆ ವರದಿಯಾಗಿತ್ತು. "ಇದು ವಿಶಾಲ್ ಮೆಗಾ ಮಾರ್ಟ್‌ನ ಔಟ್‌ಲೆಟ್ ಆಗಿದ್ದು, ಇಲ್ಲಿ ಕಿರಾಣಿ ಮತ್ತು ಬಟ್ಟೆಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ,'' ಎಂದು ದೆಹಲಿ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಕಿಯನ್ನು ಆರಿಸಲು 13 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ಸುಮಾರು 90 ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಟ್ಟಡದ ಒಳಗೆ ಸಾಕಷ್ಟು ಗಾಳಿಯಾಡದಿರುವುದರಿಂದ ಅಗ್ನಿಶಾಮಕ ಕಾರ್ಯಾಚರಣೆ ದೀರ್ಘಕಾಲ ನಡೆಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.