ರೆಮಲ್‌ ಪರಿಣಾಮ: ಅಸ್ಸಾಂ, ಮಣಿಪುರದಲ್ಲಿ ಪ್ರವಾಹ, ಸಾವಿನ ಸಂಖ್ಯೆ ಹೆಚ್ಚಳ

ಅಸ್ಸಾಂನಲ್ಲಿ ಸಾವಿನ ಸಂಖ್ಯೆ ಐದಕ್ಕೆ ಏರಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ; ಮಣಿಪುರದಲ್ಲಿ ಮೂವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಎನ್‌ಡಿಆರ್‌ಎಫ್‌ ತಂಡ ಇಂಫಾಲ್‌ಗೆ ಆಗಮಿಸಿದೆ.

Update: 2024-05-30 07:38 GMT
ಅಸ್ಸಾಂನ ನಾಗಾಂವ್ ಜಿಲ್ಲೆಯ ಕಂಪುರ್ ಬಳಿಯ ಸಿಂಗಿಮಾರಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಈಶಾನ್ಯ ರಾಜ್ಯಗಳು ರೆಮಲ್ ಚಂಡಮಾರುತದ ನಂತರ ತೀವ್ರ ಪ್ರವಾಹದಿಂದ ತತ್ತರಿಸುತ್ತಿವೆ. ನಿರಂತರ ಮಳೆಯಿಂದ ಹಲವು ನದಿಗಳ ನೀರಿನ ಮಟ್ಟ ಏರಿತು. ಎಂಟು ಜಿಲ್ಲೆಗಳು ಪ್ರವಾಹಕ್ಕೀಡಾಗಿವೆ. ಮಣಿಪುರದಲ್ಲಿ ಪ್ರವಾಹದಿಂದ ಸಾವಿರಾರು ಜನರು ಸಂತ್ರಸ್ತರಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅಸ್ಸಾಂನಲ್ಲಿ ಒಬ್ಬರು ಮೃತಪಟ್ಟಿದ್ದು, 40,000 ಕ್ಕೂ ಹೆಚ್ಚು ಜನ ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರಂತರ ಮಳೆಯಿಂದ ಎಂಟು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಒಬ್ಬರು ಮುಳುಗಿ ಸಾವಿಗೀಡಾಗಿದ್ದು, ನೆರೆಯ ಕ್ಯಾಚಾರ್ ಜಿಲ್ಲೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಕರೀಂಗಂಜ್, ಕ್ಯಾಚಾರ್, ಹೊಜೈ, ಗೋಲಾಘಾಟ್, ಪಶ್ಚಿಮ ಕರ್ಬಿ ಆಂಗ್ಲಾಂಗ್, ನಾಗಾವ್, ಹೈಲಕಂಡಿ, ಕರ್ಬಿ ಅಂಗ್ಲಾಂಗ್ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ.

ಒಡ್ಡುಗಳಿಗೆ ಹಾನಿ: ದಿಮಾ ಹಸಾವೊದಲ್ಲಿ 11 ಗ್ರಾಮಗಳು, ಕ್ಯಾಚಾರ್‌ನಲ್ಲಿ ಮೂರು ಮತ್ತು ಹೈಲಕಂಡಿಯಲ್ಲಿ ಒಂದು ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಮತ್ತು ಉದರ್‌ಬಾಂಡ್‌ನಲ್ಲಿಯೂ ಭೂ ಸವೆತ ವರದಿಯಾಗಿದೆ. ಬರಾಕ್ ಮತ್ತು ಅದರ ಉಪನದಿಗಳಾದ ಲೊಂಗೈ, ಕುಶಿಯಾರಾ, ಸಿಂಗ್ಲಾ ಮತ್ತು ಕಟಾಖಲ್ ಸೇರಿದಂತೆ ಹಲವೆಡೆ ನೀರು ಅಪಾಯದ ಮಟ್ಟಕ್ಕಿಂತ ಹೆಚ್ಚು ಇದೆ.

ಕರೀಮ್‌ಗಂಜ್‌ನಲ್ಲಿ ನಾಲ್ಕು ಒಡ್ಡುಗಳು ಹಾನಿಗೊಳಗಾಗಿವೆ. ಇದರಿಂದ 26,430 ಮಂದಿಗೆ ಹಾನಿಯಾಗಿದೆ. ಕ್ಯಾಚಾರ್‌ನಲ್ಲಿ 8,351 ಮತ್ತು ಹೈಲಕಂಡಿಯಲ್ಲಿ 6,227 ಜನರು ಬಾಧಿತರಾಗಿದ್ದಾರೆ. ಈ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕರಿಂಗಂಜ್‌ನಲ್ಲಿ ಮೂರು ಮತ್ತು ಕ್ಯಾಚಾರ್ ಜಿಲ್ಲೆಯಲ್ಲಿ ಎರಡು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಜನರಿಗೆ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪರ್ಕ ಅಸ್ತವ್ಯಸ್ತ: ಗುಡ್ಡಗಾಡು ಪ್ರದೇಶವಾದ ದಿಮಾ ಹಸಾವೊ ಜಿಲ್ಲೆಯಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಫ್ಲಾಂಗ್-ಸಿಲ್ಚಾರ್ ರಸ್ತೆಯ ಒಂದು ಭಾಗ ಹರಂಗಜಾವೊ ಬಳಿ ಕೊಚ್ಚಿಹೋಗಿದೆ. ಹಫ್ಲಾಂಗ್-ಹರಂಗಜಾವೊ ರಸ್ತೆ ಅನೇಕ ಕಡೆ ಭೂಕುಸಿತಕ್ಕೆ ಸಿಲುಕಿದೆ. ಮಹೂರ್ ಮತ್ತು ಲೈಸಾಂಗ್ ನಡುವಿನ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು, ಲೈಸಾಂಗ್ ಗ್ರಾಮ ಪ್ರತ್ಯೇಕಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಮ್ರಾಂಗ್ಸೊ-ಲಂಕಾ ಮಾರ್ಗ ಹೊರತುಪಡಿಸಿ ಬೇರೆ ರಸ್ತೆಗಳಲ್ಲಿ ರಾತ್ರಿ ವೇಳೆ ಪ್ರಯಾಣಿಸದಂತೆ ಜನರನ್ನು ಕೋರಲಾಗಿದೆ. ಜಿಲ್ಲೆಯಲ್ಲಿ ಶಾಲೆಗಳನ್ನು ಸಹ ಮುಚ್ಚಲಾಗಿದೆ ಎಂದು ಹೇಳಿದರು.

ರೈಲು ಸೇವೆ ಸ್ಥಗಿತ: ಹಫ್ಲಾಂಗ್-ಬದರ್‌ಪುರ ಮಾರ್ಗದಲ್ಲಿ ಭೂಕುಸಿತದಿಂದ ರೈಲು ಸಂಚಾರ ಸ್ಥಗಿತಗೊಂಡಿದೆ. ನಾಗಾಂವ್‌, ಕಂಪುರದಲ್ಲಿ ಬರ್ಪಾನಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು, ಸಿಲ್ದುಬಿ-ಅಮ್ಡುಬಿ ರಸ್ತೆ ಮೇಲೆ ಹರಿಯುತ್ತಿದೆ. ರಾಮನಿಪಥರ್‌ನಲ್ಲಿ ಮರದ ಸೇತುವೆಗೆ ಹಾನಿಯಾಗಿದೆ. ಜಿಲ್ಲೆಯ ಪಾಮಲಿ ಜರಣಿ ಪ್ರದೇಶದಲ್ಲಿ ನೀರಿನಲ್ಲಿ ಶಾಲೆಯೊಂದು ಮುಳುಗಡೆಯಾಗಿದೆ. ಗೋಲಘಟ್ಟದಲ್ಲಿ ಧನ್ಸಿರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಜಿಲ್ಲೆಯ ಕನೈಘಾಟ್ ಪ್ರದೇಶದಲ್ಲಿ ಮನೆಗಳು ಮುಳುಗಡೆಯಾಗಿದ್ದ ಎರಡು ಕುಟುಂಬಗಳನ್ನು ಎಸ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ. 

ದೋಣಿ ಸೇವೆ ನಿಲುಗಡೆ: ಬ್ರಹ್ಮಪುತ್ರ ಮತ್ತು ಅದರ ಉಪನದಿಗಳು ಸೋನಿತ್‌ಪುರದಲ್ಲಿ ಅಪಾಯದ ಅಂಚಿನಲ್ಲಿವೆ. ಪ್ರತಿಕೂಲ ಹವಾಮಾನದಿಂದಾಗಿ ರಾಜ್ಯದಲ್ಲಿ ದೋಣಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಂತ್ರಸ್ತರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿ ರವಿ ಕೋಟಾ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಮತ್ತು ಎಲ್ಲಾ ಇಲಾಖೆಗಳು ಹಾಗೂ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಮೂವರು ಸಾವು: ಮಣಿಪುರದಲ್ಲಿ ಸೇನಾಪತಿ ಜಿಲ್ಲೆಯ ಥೋಂಗ್ಲಾಂಗ್ ರಸ್ತೆಯಲ್ಲಿ ಭೂಕುಸಿತದಿಂದ 34 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಉಕ್ಕಿ ಹರಿದ ಸೇನಾಪತಿ ನದಿಯಲ್ಲಿ 83 ವರ್ಷದ ಮಹಿಳೆಯೊಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಇಂಫಾಲ್‌ನಲ್ಲಿ 75 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. 

ನಂಬುಲ್ ನದಿ ಉಕ್ಕಿ ಹರಿಯುತ್ತಿರುವುದರಿಂದ ಇಂಫಾಲ್ ಪಶ್ಚಿಮ ಜಿಲ್ಲೆಯ ಕನಿಷ್ಠ 86 ಪ್ರದೇಶಗಳಲ್ಲಿ ಪ್ರವಾಹ ವರದಿಯಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯ ಕೀರಾಂಗ್, ಖಬಾಮ್ ಮತ್ತು ಲೈರಿಯೆಂಗ್ಬಾಮ್ ಲೈಕೈ ಪ್ರದೇಶಗಳ ಬಳಿ ಇಂಫಾಲ್ ನದಿಯ ಒಡ್ಡು ಒಡೆದು ನೂರಾರು ಮನೆಗಳನ್ನು ಮುಳುಗಿಸಿದೆ. 

ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ರಾತ್ರಿ 10 ಗಂಟೆ ಸುಮಾರಿಗೆ ವಿಶೇಷ ವಾಯುಪಡೆಯ ವಿಮಾನದ ಮೂಲಕ ಇಂಫಾಲ್‌ಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ʻನದಿ ದಡ ಒಡೆದುಹೋಗಿದೆ. ಅಧಿಕಾರಿಗಳು, ಭದ್ರತೆ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರು ಸಂತ್ರಸ್ತ ಜನರಿಗೆ ನೆರವು ನೀಡಲು ಶ್ರಮಿಸುತ್ತಿದ್ದಾರೆ. ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ,ʼ ಎಂದು ಹೇಳಿದರು. 

ಇಂಫಾಲ್ ಮತ್ತು ಸಿಲ್ಚಾರ್‌ ನ್ನು ಸಂಪರ್ಕಿಸುವ ಎನ್‌ಎಚ್‌ 37 ರ ಇರಾಂಗ್ ಬೈಲಿ ಸೇತುವೆಯು ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. 

Tags:    

Similar News