ಕೋವಾಕ್ಸಿನ್ ಅಡ್ಡ ಪರಿಣಾಮ ಕುರಿತ ಬಿಎಚ್‌ಯು ಅಧ್ಯಯನ : ಐಸಿಎಂಅರ್‌ ಟೀಕೆ

ಅಧ್ಯಯನವು ತಪ್ಪುದಾರಿಗೆಳೆಯುವಂತಿದೆ ಮತ್ತು ತಪ್ಪಾಗಿ ಐಸಿಎಂಆರ್‌ನ್ನು ಉಲ್ಲೇಖಿಸಿದೆ ಎಂದು ಐಸಿಎಂಆರ್ ನಿರ್ದೇಶಕ ಡಾ. ರಾಜೀವ್ ಬ‌ಹ್ಲ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.;

Update: 2024-05-20 10:42 GMT

ಕೋವಾಕ್ಸಿನ್ ಲಸಿಕೆಯ ದೀರ್ಘಾವಧಿ ಸುರಕ್ಷತೆ ವಿಶ್ಲೇಷಣೆ ಕುರಿತ ಬನಾರಸ್‌ ಹಿಂದು ವಿಶ್ವವಿದ್ಯಾನಿಲಯದ ಅಧ್ಯಯನದ ಕಳಪೆ ಕಾರ್ಯ ವಿಧಾನ ಮತ್ತು ವಿನ್ಯಾಸವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಿರ್ದೇಶಕ ಡಾ. ರಾಜೀವ್ ಬಹ್ಲ್ ಟೀಕಿಸಿದ್ದಾರೆ.

ಅಧ್ಯಯನವು ತಪ್ಪುದಾರಿಗೆಳೆಯುವಂತಿದೆ ಮತ್ತು ತಪ್ಪಾಗಿ ಐಸಿಎಂಆರ್‌ನ್ನು ಉಲ್ಲೇಖಿಸಿದೆ ಎಂದು ಸೋಮವಾರ ಅವರು ಸ್ಪಷ್ಟಪಡಿಸಿದ್ದಾರೆ. 

ಅಧ್ಯಯನದಲ್ಲಿ ಐಸಿಎಂಆರ್ ಪಾಲ್ಗೊಂಡಿಲ್ಲ: ಲಸಿಕೆ ಹಾಕಿದ ಮತ್ತು ಲಸಿಕೆ ಹಾಕಿಸಿಕೊಳ್ಳದ ಗುಂಪುಗಳ ನಡುವಿನ ಅಸ್ವಸ್ಥತೆಯ ದರವನ್ನು ಹೋಲಿಸಲು, ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳ ಮೇಲೆ ಅಧ್ಯಯನ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ. ಆದ್ದರಿಂದ, ಅಧ್ಯಯನದಲ್ಲಿ ವರದಿಯಾದ ಅಸ್ವಸ್ಥತೆಗಳನ್ನು ಕೋವಿಡ್‌ ಲಸಿಕೆಗೆ ಜೋಡಿಸಲು ಇಲ್ಲವೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಐಸಿಎಂಆರ್‌ ಅಧ್ಯಯನದಲ್ಲಿ ಪಾಲ್ಗೊಂಡಿಲ್ಲ ಮತ್ತು ಯಾವುದೇ ಆರ್ಥಿಕ ಅಥವಾ ತಾಂತ್ರಿಕ ಬೆಂಬಲ ನೀಡಿಲ್ಲ ಎಂದು ಹೇಳಿದರು. 

ಐಸಿಎಂಆರ್‌ ಮಹಾ ನಿರ್ದೇಶಕರು ಲೇಖಕರು ಮತ್ತು ಜರ್ನಲ್‌ನ ಸಂಪಾದಕರಿಗೆ ಪತ್ರ ಬರೆದಿದ್ದಾರೆ. ಐಸಿಎಂಆರ್‌ ಹೆಸರು ತೆಗೆದುಹಾಕಬೇಕು ಮತ್ತು ತಪ್ಪೋಲೆ ಪ್ರಕಟಿಸಲು ಹೇಳಿದ್ದಾರೆ. ಅಧ್ಯಯನವು ಭಾರತ್ ಬಯೋಟೆಕ್ ನ ಲಸಿಕೆ ಬಿಬಿವಿ152 ತೆಗೆದುಕೊಂಡ 926 ಮಂದಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರಲ್ಲಿ ʻವಿಶೇಷ ಆಸಕ್ತಿಯ ಪ್ರತಿಕೂಲ ಸಮಸ್ಯೆ(ಎಇಎಸ್‌ ಐ)ʼ ಯನ್ನು ವರದಿ ಮಾಡಿದೆ. ಯಾವುದೇ ಪೂರ್ವಾನುಮತಿ ಅಥವಾ ಐಸಿಎಂಆರ್‌ಗೆ ಸೂಚನೆ ನೀಡದೆ‌, ಐಸಿಎಂಆರ್ ಹೆಸರು ಬಳಸಿಕೊಳ್ಳಲಾಗಿದೆ. ಇದು ಅನುಚಿತ ಮತ್ತು ಸ್ವೀಕಾರಾರ್ಹವಲ್ಲ. ಹಲವು ನಿರ್ಣಾಯಕ ನ್ಯೂನತೆಗಳಿಂದ ಕೂಡಿರುವ ಈ ಅಧ್ಯಯನವನ್ನುಐಸಿಎಂಆರ್‌ ಜೊತೆಗೆ ಜೋಡಿಸಬಾರದು ಎಂದಿದ್ದಾರೆ.

ಫೋನ್ ಮೂಲಕ ಸಂಪರ್ಕ: ಲಸಿಕೆ ಹಾಕಿದ ಒಂದು ವರ್ಷದ ನಂತರ ಅಧ್ಯಯನದಲ್ಲಿ ಭಾಗವಹಿಸಿದ್ದವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ ಮತ್ತು ಕ್ಲಿನಿಕಲ್ ದಾಖಲೆಗಳು ಅಥವಾ ವೈದ್ಯರ ಪರೀಕ್ಷೆಯಿಲ್ಲದೆ ಅವರ ಪ್ರತಿಕ್ರಿಯೆಗಳನ್ನು ದಾಖಲಿಸಲಾಗಿದೆ. ದತ್ತಾಂಶ ಸಂಗ್ರಹ ವಿಧಾನವು ಪಕ್ಷಪಾತದ ಅಧಿಕ ಅಪಾಯವನ್ನು ಹೊಂದಿದೆ ಎಂದು ಹೇಳಿದರು. 

ʻಲೇಖಕರಿಗೆ ತಪ್ಪು ಸರಿಪಡಿಸಲು ಮತ್ತು ತಪ್ಪೋಲೆ ಪ್ರಕಟಿಸಲು ಹೇಳಲಾಗಿದೆ. ಜೊತೆಗೆ, ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಹೇಳಲಾಗುತ್ತದೆ. ಹಾಗೆ ಮಾಡಲು ವಿಫಲವಾದಲ್ಲಿ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪುರಾವೆಗಳಿಲ್ಲದ ಅಧ್ಯಯನ ವನ್ನು ಹಿಂತೆಗೆದುಕೊಳ್ಳುವಂತೆ ಸಂಪಾದಕರನ್ನು ಕೇಳಲಾಗಿದೆ,ʼ ಎಂದು ಹೇಳಿದರು.

ಬಿಎಚ್‌ಯು ಅಧ್ಯಯನದಲ್ಲಿ 926 ಮಂದಿ ಭಾಗಿ: ಜನವರಿ 2022 ರಿಂದ ಆಗಸ್ಟ್ 2023 ರವರೆಗೆ ಬಿಎಚ್‌ಯು ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 926 ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ ಸುಮಾರು ಶೇ.50 ರಷ್ಟು ಮಂದಿಯಲ್ಲಿ ಗಂಟಲು, ಶ್ವಾಸಕೋಶದ ಸೋಂಕುಗಳು ಕಂಡುಬಂದಿದೆ. ಪಾರ್ಶ್ವವಾಯು ಮತ್ತು ಗಿಲ್ಲಿಯನ್‌ ಬಾರ್ರೆ ಸಿಂಡ್ರೋಮ್ ನಂಥ ಗಂಭೀರ ಎಇಎಸ್ಐ, ಶೇ.1ರಷ್ಟು ವ್ಯಕ್ತಿಗಳಲ್ಲಿ ವರದಿಯಾಗಿದೆ ಎಂದು ಅಧ್ಯಯನ ಹೇಳಿತ್ತು.. 

Tags:    

Similar News