Contempt plea on demolition | ಆದೇಶ ಉಲ್ಲಂಘನೆ- ಪ್ರತಿಕ್ರಿಯೆ ಕೇಳಿದ ಸುಪ್ರೀಂ

Update: 2024-09-30 12:11 GMT

ಹೊಸದಿಲ್ಲಿ: ದೇಶಾದ್ಯಂತ ಯಾವುದೇ ಆಸ್ತಿಗಳನ್ನು ತನ್ನ ಅನುಮತಿಯಿಲ್ಲದೆ ಧ್ವಂಸ ಮಾಡಬಾರದು ಎಂಬ ಸುಪ್ರಿಂ ಕೋರ್ಟ್ ಆದೇಶದ ಉಲ್ಲಂಘನೆಗೆ ನ್ಯಾಯಾಂಗನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅಸ್ಸಾಂ ಸರ್ಕಾರ ಮತ್ತು ಇತರರಿಂದ ಸೋಮವಾರ ಪ್ರತಿಕ್ರಿಯೆ ಕೇಳಿದೆ. 

ಈ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಕ್ಷಿದಾರರಿಗೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಸೂಚಿಸಿದೆ. 

ತನ್ನ ಅನುಮತಿಯಿಲ್ಲದೆ ಅಕ್ಟೋಬರ್ 1 ರವರೆಗೆ ಯಾವುದೇ ಆಸ್ತಿಗಳನ್ನು ನೆಲಸಮ ಮಾಡಬಾರದು ಎಂದು ಸೆಪ್ಟೆಂಬರ್ 17 ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಸ್ಸಾಂನ ಸೋನಾಪುರದಲ್ಲಿ ನಡೆದ ನೆಲಸಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಕೋರಿ ಸಲ್ಲಿಸಿದ ಅರ್ಜಿಯು ಸೋಮವಾರ ವಿಚಾರಣೆಗೆ ಬಂದಿತು. 

ಅರ್ಜಿದಾರರ ಪರ ವಕೀಲ ಹುಝೆಫಾ ಅಹ್ಮದಿ, ಸುಪ್ರೀಂ ಕೋರ್ಟ್‌ನ ಅನುಮತಿಯಿಲ್ಲದೆ ನೆಲಸಮ ಮಾಡಬಾರದು ಎಂಬ ಸ್ಪಷ್ಟ ಆದೇಶದ ಉಲ್ಲಂಘನೆ ಆಗಿದೆ ಎಂದು ಹೇಳಿದರು. 

ಅರ್ಜಿ ಕುರಿತು ನೋಟಿಸ್ ನೀಡುವುದಾಗಿ ಪೀಠ ಹೇಳಿದಾಗ, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಅಹ್ಮದಿ ಕೋರಿದರು. ʻಮೂರು ವಾರಗಳಲ್ಲಿ ಉತ್ತರಿಸುವಂತೆ, ನೋಟಿಸ್ ನೀಡಿ. ಈ ಮಧ್ಯೆ ಪಕ್ಷಗಳು ಯಥಾಸ್ಥಿತಿ ಕಾಯ್ದುಕೊಳ್ಳುತ್ತವೆ,ʼ ಎಂದು ಪೀಠ ಹೇಳಿದೆ. 

ಹಿನ್ನೆಲೆ: ಹಲವು ರಾಜ್ಯಗಳಲ್ಲಿ ಆರೋಪಿಗಳ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂಬ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಸೆಪ್ಟೆಂಬರ್ 17 ರಂದು ವಿಚಾರಣೆ ನಡೆಸಿದ ಸುಪ್ರೀಂ , ಮುಂದಿನ ವಿಚಾರಣೆವರೆಗೆ ಈ ನ್ಯಾಯಾಲಯದ ಅನುಮತಿಯಿಲ್ಲದೆ ದೇಶಾದ್ಯಂತ ಎಲ್ಲಿಯೂ ನೆಲಸಮ ಮಾಡಬಾರದು ಎಂದು ಆದೇಶ ನೀಡಿ, ವಿಚಾರಣೆ ಅಕ್ಟೋಬರ್ 1ಕ್ಕೆ ಮುಂದೂಡಿತ್ತು.

Tags:    

Similar News