ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಳ: ಕಾಂಗ್ರೆಸ್
ದೇಶದಲ್ಲಿ 2012 ರಿಂದ 2021ರವರೆಗೆ ಸೃಷ್ಟಿಯಾದ ಸಂಪತ್ತಿನಲ್ಲಿ ಶೇ.40 ಕ್ಕಿಂತ ಹೆಚ್ಚು ಕೇವಲ ಶೇಕಡಾ 1 ರಷ್ಟು ಜನರ ಪಾಲಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.;
ಆರ್ಥಿಕ ಅಸಮಾನತೆ ಹೆಚ್ಚಳ ಕುರಿತು ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವ ಕಾಂಗ್ರೆಸ್, ಪ್ರತಿ ಯೊಂದು ದತ್ತಾಂಶವೂ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿರುವುದನ್ನು ತೋರಿಸುತ್ತಿವೆ ಎಂದು ಬುಧವಾರ ಹೇಳಿದೆ.
ಮಾಧ್ಯಮ ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್, ಶ್ರೀಮಂತರ ಬಳಕೆ ವೆಚ್ಚ ಮತ್ತು ಬಡವರ ಬಳಕೆ ವೆಚ್ಚದ ನಡುವಿನ ವ್ಯತ್ಯಾಸ ಸುಮಾರು 10 ಪಟ್ಟು ಹೆಚ್ಚಿದೆ. ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ ಎಂಬ ವಿಷಯವನ್ನು ಕಾಂಗ್ರೆಸ್ ನಿರಂತರವಾಗಿ ಪ್ರಸ್ತಾಪಿಸುತ್ತ ಬಂದಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ರಮೇಶ್, ಗ್ರಾಮೀಣ ಪ್ರದೇಶದ ಶೇ.5 ರಷ್ಟು ಕಡು ಬಡವರ ಮಾಸಿಕ ಬಳಕೆ ವೆಚ್ಚ ಕೇವಲ 1,373 ರೂ. ಆದರೆ, ನಗರ ಪ್ರದೇಶದ ಶ್ರೀಮಂತರ ಮಾಸಿಕ ಬಳಕೆ ವೆಚ್ಚ 20,824 ರೂ. ಎಂದು ಹೇಳಿದ್ದಾರೆ.
ʻಇದು ಹೊಸ ದತ್ತಾಂಶ. ಆದರೆ, ನೀವು ಯಾವುದೇ ದತ್ತಾಂಶವನ್ನು ನೋಡಿದರೂ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಬೆಳೆಯುತ್ತಿರುವುದನ್ನು ತೋರಿಸುತ್ತದೆ. 2012 ರಿಂದ 2021 ರ ವರೆಗೆ ದೇಶದಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.40 ಕ್ಕೂ ಅಧಿಕ ಪಾಲು ಜನಸಂಖ್ಯೆಯ ಶೇ.1 ರಷ್ಟು ಜನರಿಗೆ ಮಾತ್ರ ಹೋಗಿದೆ,ʼ ಎಂದು ಹೇಳಿದ್ದಾರೆ.
ʻದೇಶದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಶೇ.64ರಷ್ಟು ಬಡವರು, ಕೆಳ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದವರಿಂದ ಬರು ತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಸಾರ್ವಜನಿಕ ಆಸ್ತಿಗಳು ಮತ್ತು ಸಂಪನ್ಮೂಲಗಳನ್ನು ಒಂದು ಅಥವಾ ಎರಡು ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಬೆಳೆಯುತ್ತಿರುವ ಏಕಸ್ವಾಮ್ಯವು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ,ʼ ಎಂದು ರಮೇಶ್ ಹೇಳಿದರು.
21 ಶತ ಕೋಟಿಪತಿಗಳು 70 ಕೋಟಿ ಭಾರತೀಯರಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂದು ರಮೇಶ್ ಹೇಳಿದರು.
ಅಸಮಾನತೆ, ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಳಕ್ಕೆ ಸರ್ಕಾರದ ನೀತಿಗಳು ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.