ಜೋಧ್ಪುರದಲ್ಲಿ ಕೋಮುಗಲಭೆ: ಕಲ್ಲು ತೂರಾಟ, ಇಬ್ಬರು ಪೊಲೀಸರಿಗೆ ಗಾಯ

ನಗರದ ಸೂರ್ ಸಾಗರ್ ಪ್ರದೇಶದ ರಾಜಾರಾಮ್ ವೃತ್ತದ ಬಳಿಯ ಈದ್ಗಾದ ಹಿಂಭಾಗದಲ್ಲಿ ಗೇಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಘರ್ಷಣೆ ಆರಂಭವಾಯಿತು.

Update: 2024-06-22 07:08 GMT

ಜೋಧ್‌ಪುರ, ಜೂನ್ 22- ಜೋಧ್‌ಪುರ ದಲ್ಲಿ ಕೋಮುಗಲಭೆ ಭುಗಿಲೆದ್ದಿದ್ದು, ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಎರಡು ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 

ನಗರದ ಸೂರ್ ಸಾಗರ್ ಪ್ರದೇಶದ ರಾಜಾರಾಮ್ ವೃತ್ತದ ಬಳಿಯ ಈದ್ಗಾದ ಹಿಂಭಾಗದಲ್ಲಿ ಗೇಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಘರ್ಷಣೆ ಆರಂಭವಾಗಿದೆ ಎಂದು ಜೋಧ್‌ಪುರ ಪಶ್ಚಿಮ ಡಿಸಿಪಿ ರಾಜೇಶ್ ಕುಮಾರ್ ಯಾದವ್ ಹೇಳಿದ್ದಾರೆ. 

ಈದ್ಗಾ ಹಿಂಬದಿಯಲ್ಲಿ ಜನರ ಓಡಾಟ ಇರುವುದಿಲ್ಲ ಎಂದು ಸ್ಥಳೀಯರು ಗೇಟ್‌ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ನಿನ್ನೆ ರಾತ್ರಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಕೆಲವರು ಕಲ್ಲು ತೂರಾಟ ನಡೆಸಿದರು. ಅಂಗಡಿ ಮತ್ತು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲಾಗಿದೆ, ಜೀಪ್ ಅನ್ನು ಧ್ವಂಸಗೊಳಿಸಲಾಗಿದೆ,ʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ʻಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. 4-5 ಸುತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರುʼ ಎಂದು ಅಧಿಕಾರಿ ಹೇಳಿದರು. 

ಶುಕ್ರವಾರ ತಡ ರಾತ್ರಿ ವೇಳೆಗೆ ಪರಿಸ್ಥಿತಿ ಹತೋಟಿಗೆ ಬಂದಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶನಿವಾರ ಬೆಳಗ್ಗೆ ಹೆಚ್ಚುವರಿ ಪೊಲೀಸ್ ಮತ್ತು ರಾಜಸ್ಥಾನ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ. ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಎರಡೂ ಕಡೆಯವರನ್ನು ಬಂಧಿಸಲಾಗಿದೆ. ಪೊಲೀಸರು ಮನೆಗಳಲ್ಲಿ ಶೋಧ ನಡೆಸುತ್ತಿದ್ದಾರೆ  ಎಂದು ಪೊಲೀಸ್ ಆಯುಕ್ತ ರಾಜೇಂದ್ರ ಸಿಂಗ್ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ ಈದ್ಗಾದ ಹಿಂಭಾಗದಲ್ಲಿ ಗೋಡೆ ನಿರ್ಮಾಣ ಪ್ರಾರಂಭವಾಯಿತು. ಇದನ್ನು ಸ್ಥಳೀಯರು ವಿರೋಧಿಸಿದರು. ಆನಂತರ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳು ನಡೆದವು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಮುಂದಾದಾಗ, ಕೆಲವರು ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದರು. ಲಾಠಿ ಪ್ರಹಾರ ಮಾಡುವಾಗ, ಪೊಲೀಸರ ಮೇಲೆ ಕಲ್ಲುಗಳ ಸುರಿಮಳೆ ನಡೆಯಿತು.

ಉಭಯ ಸಮುದಾಯದ ಹಿರಿಯರ ನೆರವಿನೊಂದಿಗೆ ಪೊಲೀಸರು ಶಾಂತಿ ಕಾಪಾಡಿದರು. ಆದರೆ, ಹಠಾತ್ ಕಲ್ಲು ತೂರಾಟದಿಂದ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತು.

Tags:    

Similar News