Chhattisgarh Mob violence | ಗುಂಪು ಹಿಂಸಾಚಾರ, ಕಸ್ಟಡಿ ಸಾವು- ಎಸ್ಪಿ, ಕಲೆಕ್ಟರ್ ವರ್ಗಾವಣೆ

ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಶರ್ಮಾ ಅವರು ರೆಂಗಾಖರ್ ಪ್ರದೇಶವನ್ನು ಒಳಗೊಂಡ ಕವರ್ಧಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

Update: 2024-09-21 08:21 GMT

ರಾಯ್‌ಪುರ: ಕಬೀರ್‌ಧಾಮ್‌ ಜಿಲ್ಲೆಯಲ್ಲಿ ಗುಂಪು ಹಿಂಸಾಚಾರ ಮತ್ತು ಠಾಣೆಯಲ್ಲಿ ಸಾವಿನ ಹಿನ್ನೆಲೆಯಲ್ಲಿ ಕಲೆಕ್ಟರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ, ಕಾಂಗ್ರೆಸ್ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದೆ. ಕಲೆಕ್ಟರ್‌ ಜನಮೇಜಯ ಮಹೋಬೆ ಅವರನ್ನು ಬದಲಿಸಿ ಗೋಪಾಲ್ ವರ್ಮಾ ಹಾಗೂ ಎಸ್ಪಿ ಅಭಿಷೇಕ್ ಪಲ್ಲವ ಅವರ ಬದಲು ರಾಜೇಶ್ ಅಗರವಾಲ್ ಅವರನ್ನು ನೇಮಕಗೊಳಿಸಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. 

ಸೆಪ್ಟೆಂಬರ್ 15 ರಂದು ಉಪ ಸರಪಂಚನ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ಭಯ್ ಕುಮಾರ್ ಸಾಹು ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಹಿಂಸಾಚಾರ ಘಟನೆ ನಂತರ ಲೋಹರಿದಿಹ್ ಗ್ರಾಮದ ನಿವಾಸಿಗಳನ್ನು ಥಳಿಸಿದ್ದಕ್ಕಾಗಿ ರೆಂಗಾಖರ್ ಪೊಲೀಸ್ ಠಾಣೆಯ 23 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು. 

ಘಟನೆ ಏನು?: ಸೆಪ್ಟೆಂಬರ್ 15 ರಂದು ರೆಂಗಾಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಲೋಹರಿದಿಹ್ ಗ್ರಾಮದ ಉಪ ಸರಪಂಚ ರಘುನಾಥ್ ಸಾಹು ಅವರ ಮನೆಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 69 ಜನರನ್ನು ಬಂಧಿಸಲಾಯಿತು. ಇವರಲ್ಲಿ ಪ್ರಶಾಂತ್ ಸಾಹು ಎಂಬುವರು ಸೆಪ್ಟೆಂಬರ್ 18ರಂದು ನ್ಯಾಯಾಂಗ ಬಂಧನದಲ್ಲಿ ಮೃತಪಟ್ಟಿದ್ದರು. 

ಪಕ್ಕದ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಬಿಜತೋಲಾ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕಚ್ರು ಸಾಹು ಎಂಬುವನ ಸಾವಿಗೆ ರಘುನಾಥ್‌ ಸಾಹು ಕಾರಣ ಎಂದು ಗ್ರಾಮಸ್ಥರು, ರಘುನಾಥ್‌ ಮನೆ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ರಘುನಾಥ್ ಅವರ ಪತ್ನಿ ಸೇರಿದಂತೆ ಕುಟುಂಬದ ಮೂವರನ್ನು ರಕ್ಷಿಸಿದ್ದಾರೆ. ಕಲ್ಲು ತೂರಾಟದಲ್ಲಿ ಕಬೀರ್‌ಧಾಮ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಸೇರಿದಂತೆ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಉಪ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ: ಪ್ರಶಾಂತ್ ಸಾಹು ಅವರ ಮೇಲೆ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ದೂರಿದೆ. ಸಾಹು ಅವರ ಮೇಲೆ ಹಲ್ಲೆ ನಡೆದಿದೆ ಎಂದು ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕಬೀರ್‌ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಅವರನ್ನು ಅಮಾನತುಗೊಳಿಸಿದ್ದಾರೆ.

ಕಸ್ಟಡಿ ಸಾವಿನ ತನಿಖೆಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೆಪ್ಟೆಂಬರ್ 19 ರಂದು ಲೋಹರಿದಿಹ್‌ಗೆ ಭೇಟಿ ನೀಡಿದ್ದರು. ಪ್ರಶಾಂತ್ ಅವರ ದೇಹದ ಮೇಲೆ ದೊಡ್ಡ ಗಾಯದ ಗುರುತುಗಳನ್ನು ಹೊಂದಿರುವ ಚಿತ್ರಗಳನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಉಪ ಮುಖ್ಯಮಂತ್ರಿ ಶರ್ಮಾ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷ ಒತ್ತಾಯಿಸಿದೆ. ಶರ್ಮಾ ಅವರು ರೆಂಗಾಖರ್ ಪ್ರದೇಶವನ್ನು ಒಳಗೊಂಡ ಕವರ್ಧಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

Tags:    

Similar News