ರಾಜ್ಯ ಸ್ಥಾನಮಾನ ವಿಳಂಬ | ಕೇಂದ್ರದಿಂದ ಜಮ್ಮುಕಾಶ್ಮೀರ, ಲಡಾಖ್‌ಗೆ ದ್ರೋಹ- ಒಮರ್ ಅಬ್ದುಲ್ಲಾ ಕಿಡಿ
ಹಿರಿಯ ಪತ್ರಕರ್ತ ಮತ್ತು ಲೇಖಕ ಹರಿಂದರ್ ಬವೇಜಾ ಅವರ ಇತ್ತೀಚಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಒಮರ್ ಅಬ್ದುಲ್ಲಾ ಮಾತನಾಡುತ್ತಿದ್ದರು.
ಲಡಾಖ್‌ನಲ್ಲಿ ರಾಜ್ಯದ ಸ್ಥಾನಮಾನ ಹಾಗೂ ಸ್ವಾಯತ್ತೆಗಾಗಿ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಜಮ್ಮುಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಸ್ಥಾಪನೆ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮುಕಾಶ್ಮೀರ ಹಾಗೂ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವ ಕುರಿತು ನೀಡಿದ್ದ ಭರವಸೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರದ ಧೋರಣೆಯಿಂದ ಅಪನಂಬಿಕೆ ಹೆಚ್ಚುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಿರಿಯ ಪತ್ರಕರ್ತ ಮತ್ತು ಲೇಖಕ ಹರಿಂದರ್ ಬವೇಜಾ ಅವರ ಕೃತಿ "ದೇ ವಿಲ್ ಶೂಟ್ ಯು, ಮೇಡಂ: ಮೈ ಲೈಫ್ ಥ್ರೂ ಕಾನ್‌ಫ್ಲಿಕ್ಟ್ " ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಸರ್ಕಾರವು ಸ್ವಯಂ ಮಾರ್ಗಸೂಚಿ ಅನುಸರಿಸಲು ಆಗದಂತಾಗಿದೆ. ಕೇಂದ್ರವು "ಅಸಾಧ್ಯ" ಭರವಸೆ ನೀಡಿ ದಾರಿ ತಪ್ಪಿಸಿದೆ ಎಂದು ದೂರಿದ್ದಾರೆ.
ಲಡಾಖ್‌ಗೆ 'ಅಸಾಧ್ಯ' ಭರವಸೆ
ಲಡಾಖ್‌ಗೆ ನೀಡಿದ ಭರವಸೆಗಳ ಬಗ್ಗೆ ಅಬ್ದುಲ್ಲಾ ನಿರ್ದಿಷ್ಟವಾಗಿ ಗಮನ ಸೆಳೆದರು. ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಲು ಗಿರಿಶಿಖರದ ಜನರಿಗೆ ಸಂವಿಧಾನದ ಆರನೇ ಪರಿಚ್ಛೇಧದ ಭರವಸೆ ನೀಡಲಾಗಿತ್ತು. ಆದರೆ, ಅದು ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಒಂದು ಕಡೆ ಚೀನಾ ಮತ್ತು ಇನ್ನೊಂದು ಕಡೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಳ್ಳುವ ಪ್ರದೇಶಕ್ಕೆ ಗಣನೀಯ ರಕ್ಷಣಾ ಉಪಸ್ಥಿತಿ ಅಗತ್ಯವಿರುತ್ತದೆ. ಹೀಗಿರುವಾಗ ಲಡಾಖ್‌ಗೆ ಸಂವಿಧಾನದ ಆರನೇ ಪರಿಚ್ಛೇಧದಲ್ಲಿ ಸ್ವಾಯತ್ತತೆ ನೀಡುವ ಭರವಸೆ ಕೇವಲ ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ್ದಾರೆ.
ಸೋನಮ್ ವಾಂಗ್‌ಚುಕ್ ನಿಲುವು ಬದಲು ; ಟೀಕೆ
ಲಡಾಖ್‌ಗೆ ಸ್ವಾಯತ್ತ ಮತ್ತು ರಾಜ್ಯ ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಹೋರಾಟದ ಮುಂಚೂಣಿ ನಾಯಕರಾಗಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ದಿಢೀರ್ ತಮ್ಮ ನಿಲುವು ಬದಲಿಸಿರುವುದಕ್ಕೆ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.
"ನಿನ್ನೆಯವರೆಗೆ ಪ್ರಧಾನಿಯನ್ನು ಪರಿಸರ ಯೋಧ ಎಂದು ಹೊಗಳುತ್ತಿದ್ದ ಒಬ್ಬ ಮಹಾಶಯ ಇಂದು ದಿಢೀರನೇ ಲಡಾಖ್ ಹೋರಾಟಕ್ಕೆ ಪಾಕಿಸ್ತಾನದ ನಂಟಿದೆ ಎಂದು ಹೇಳುತ್ತಿರುವುದು ಸರಿಯಲ್ಲ, ಎರಡು ದಿನಗಳ ಹಿಂದೆ ಅದೇನೂ ಇರಲಿಲ್ಲ. ಈಗ ದಿಢೀರ್ ನಿಲುವು ಬದಲಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇಧದಲ್ಲಿ ಸ್ವಾಯತ್ತತೆ ಒದಗಿಸಲು ಆಗ್ರಹಿಸಿ ನಡೆದ ಪ್ರತಿಭಟನೆಗಳು ಸೆ.24 ರಂದು ಹಿಂಸಾತ್ಮಕ ರೂಪ ಪಡೆದಿದ್ದವು. ಘಟನೆಯಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಇದಾದ ಬಳಿಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಾಂಗ್‌ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಬಂಧಿಸಲಾಗಿತ್ತು.
ಜಮ್ಮುಕಾಶ್ಮೀರದಲ್ಲಿ ವಿಶ್ವಾಸದ ಕೊರತೆ
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಬೇಡಿಕೆ ಕುರಿತು ಒಮರ್ ಅಬ್ದುಲ್ಲಾ ಅವರು ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ರಾಜ್ಯ ಸ್ಥಾನಮಾನ ನೀಡುವ ಮೊದಲು ಗಡಿ ನಿರ್ಣಯ ಆಗಬೇಕು, ಚುನಾವಣೆಗಳು ನಡೆಯಬೇಕು. ಅಂತಿಮವಾಗಿ ರಾಜ್ಯ ಸ್ಥಾನಮಾನ ಒಸಗಿಸಲಾಗುವುದು ಎಂದು ಹೇಳಿತ್ತು. ಈಗ ಮೊದಲ ಎರಡು ಪ್ರಕ್ರಿಯೆಗಳು ಪೂರ್ಣಗೊಂಡಿವೆ, ಆದರೆ, ಮೂರನೆಯದು ಆಗಿಲ್ಲ. ಇದು ಕೇಂದ್ರದ ಬಗ್ಗೆ ಅಪನಂಬಿಕೆ ಮೂಡಿಸುತ್ತಿದೆ ಎಂದು ದೂರಿದ್ದಾರೆ.
ಇತ್ತೀಚಿನ ಚುನಾವಣೆಯ ಅಭೂತಪೂರ್ವ ಯಶಸ್ಸಿನ ಹೊರತಾಗಿಯೂ, ಕೇಂದ್ರದ ವಿರುದ್ಧ ಸಾರ್ವಜನಿಕ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ಎಚ್ಚರಿಸಿದ್ದಾರೆ.
ತೀವ್ರ ದುಃಖಕರ
ರಾಜ್ಯ ಸ್ಥಾನಮಾನದ ಕುರಿತು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ಆದೇಶ ಉಲ್ಲೇಖಿಸಿದ ಅವರು, ಜಮ್ಮು ಕಾಶ್ಮೀರದ ಸ್ಥಾನಮಾನ ಪುನಃಸ್ಥಾಪಿಸುವ ಭರವಸೆಯನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸುವ ಅರ್ಜಿದಾರರಿಗೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಉಲ್ಲೇಖಿಸಿರುವುದು ಬೇಸರ ತರಿಸಿದೆ. ಈ ವಿಷಯವು ಗಡಿಯಾಚೆಗಿನ ಘಟನೆಗಳಿಗೆ ಸಂಬಂಧಿಸಿದಂತೆ ಕಾಣುತ್ತಿರುವುದು ತೀವ್ರ ದುಃಖಕರ ಸಂಗತಿ. ಪಾಕಿಸ್ತಾನವು ಜಮ್ಮುಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಕುರಿತು ನಿರ್ಧರಿಸಬೇಕೇ ಎಂದು ಪ್ರಶ್ನಿಸಿದ್ದಾರೆ.
ಪ್ರತಿ ಬಾರಿ ರಾಜ್ಯ ಸ್ಥಾನಮಾನ ವಿಷಯ ಬಂದಾಗ ಪಹಲ್ಗಾಮ್‌ನಂತಹ ಘಟನೆ ಸಂಭವಿಸಿದರೆ ಏನೂ ಮಾಡಬೇಕು ಎಂದು ಪ್ರಸ್ತಾಪಿಸುತ್ತಿರುವುದು ನಮ್ಮನ್ನು ಇನ್ನಷ್ಟು ಹಿಂದುಳಿಯುವಂತೆ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸ್ಥಾನಮಾನ ವಿಚಾರವು ಕಾಶ್ಮೀರ ಭೂಮಿಯ ಬಗ್ಗೆ ಅಲ್ಲ, ಕಾಶ್ಮೀರ ಜನರ ಅಭ್ಯುದಯಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.