ಬಣ್ಣ ಬಣ್ಣದ ಜಿಲೇಬಿ, ಶರಬತ್ಗಳಲ್ಲಿದೆ ಕ್ಯಾನ್ಸರ್ಕಾರಕ ರಾಸಾಯನಿಕ; ಕಡಿವಾಣ ಹಾಕಲು ಸರ್ಕಾರದ ನಿರ್ಧಾರ
ಬಣ್ಣ ಬಣ್ಣದ ಜಿಲೇಬಿ, ಶರಬತ್ಗಳಿಗೆ ಕಡಿವಾಣ ಹಾಕಲು ಸರ್ಕಾರದ ನಿರ್ಧಾರರಾಜ್ಯದ ಬೇಕರಿ ಹಾಗೂ ಫುಡ್ ಸ್ಟ್ರೀಟ್‌ಗಳಲ್ಲಿ ಮಾರಾಟವಾಗುವ ವಿವಿಧ ಬಣ್ಣಗಳ ಜಿಲೇಬಿ ಮತ್ತು ಜಹಾಂಗೀರ್ ಮತ್ತು ಬೇಸಿಗೆ ಪಾನೀಯ ಶರಬತ್ತುಗಳಲ್ಲಿ ಕೃತಕ ಬಣ್ಣಗಳ ಬಳಕೆ ವ್ಯಾಪಕವಾಗಿ ನಡೆಯುತ್ತಿರುವುದು ಪತ್ತೆಯಾಗಿದೆ. ಕ್ಯಾನ್ಸರ್ಕಾರಕ ಅಂಶಗಳನ್ನು ಹೊಂದಿರುವ ಈ ಆಹಾರ ಪದಾರ್ಥಗಳು ಸೇವನೆಗೆ ಸೂಕ್ತವಲ್ಲ ಎಂಬ ಕಾಳಜಿ ವ್ಯಕ್ತಗೊಂಡ ಬೆನ್ನಲ್ಲೇ ಸರ್ಕಾರವೂ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯಾದ್ಯಂತ ಸ್ಯಾಂಪಲ್ ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿ ಬಣ್ಣಗಳ ಬಳಕೆ ನಿಷೇಧಿಸಲು ಮುಂದಾಗಿದೆ.
ಈ ಕೃತಕ ಬಣ್ಣಗಳು ಕ್ಯಾನ್ಸರ್ ಸೇರಿದಂತೆ ಮಕ್ಕಳ ಪೋಷಣೆಯ ಮೇಲೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಾದ್ಯಂತ ಜಿಲೇಬಿ ಮತ್ತು ಶರಬತ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಆಹಾರ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಸ್ಯಾಂಪಲ್ಗಳನ್ನು ಸಂಗ್ರಹ ಮಾಡಿದೆ. ಮುಂದಿನ 14 ದಿನಗಳಲ್ಲಿ ಅದರ ವರದಿ ಬರಲಿದ್ದು, ವಿಷಕಾರಿ ಅಂಶವೇನಾದರೂ ಕಂಡು ಬಂದರೆ ರಾಜ್ಯ ಮಟ್ಟದಲ್ಲಿ ಬಳಕೆ ನಿಷೇಧಕ್ಕೆ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಜಿಲೇಜಿಯ ಹಳದಿ ಬಣ್ಣ ಮತ್ತು ಜಹಾಂಗೀರ್ನಲ್ಲಿ ಕೆಂಪು ಬಣ್ಣವನ್ನು ಹೆಚ್ಚಾಗಿ ಬಳಸಲಾಗುತ್ತದೆ. ನೋಡಲು ಆಕರ್ಷಕವಾಗಿದ್ದರೂ ಇದು ಆರೋಗ್ಯಕ್ಕೆ ಹಾನಿಕಾರಕ. ಅದೇ ರೀತಿ ಜಿಲೇಜಿಯನ್ನು ಕರಿಯವುದಕ್ಕೆ ಕಳಪೆ ಗುಣಮಟ್ಟದ ಎಣ್ಣೆಯನ್ನೂ ಬಳಸಲಾಗುತ್ತದೆ. ಹಲವಾರು ಬಾರಿ ಬೇಯಿಸಿದ ಎಣ್ಣೆಯಲ್ಲೇ ಮತ್ತೆ ಮತ್ತೆ ಕರಿಯಲಾಗುತ್ತದೆ. ಇದು ಕೂಡ ಅಪಾಯಕಾರಿ. ಗುಲಾಬಿ, ಹಸಿರು, ನೀಲಿ ಸೇರಿದಂತೆ ಬಣ್ಣ ಬಣ್ಣದ ಶರಬತ್ಗಳನ್ನು ತಯಾರಿಸಿ ರಸ್ತೆ ಬದಿ ಸೇರಿದಂತೆ ಎಲ್ಲೆಡೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲೂ ಯಥೇಚ್ಛ ಪ್ರಮಾಣದ ಬಣ್ಣಗಳ ಎಸೆನ್ಸ್ ಬಳಸಲಾಗುತ್ತದೆ. ಈ ಮೂಲಕ ವಿಷಕಾರು ರಾಸಾಯನಿಕಗಳು ಗ್ರಾಹಕರ ಹೊಟ್ಟೆ ಸೇರಿ ಹಾನಿ ಮಾಡುತ್ತಿದೆ.
ಆಹಾರದಲ್ಲಿ ಬಳಸುವ ಅಪಾಯಕಾರಿ ಕೃತಕ ಬಣ್ಣಗಳು ಯಾವುವು?
ಜಿಲೇಬಿ ಮತ್ತು ಶರಬತ್ತುಗಳಲ್ಲಿ ಸಾಮಾನ್ಯವಾಗಿ ಟಾರ್ಟ್ರಾಜಿನ್ (ಹಳದಿ), ಸನ್‌ಸೆಟ್ ಯೆಲ್ಲೋ (ಕಿತ್ತಳೆ-ಕೆಂಪು), ಕಾರ್ಮೊಯಿಸಿನ್ (ಕೆಂಪು), ಬ್ರಿಲಿಯಂಟ್ ಬ್ಲೂ (ನೀಲಿ) ಮತ್ತು ಪೊನ್ಸಿಯೊ 4ಆರ್ (ಕೆಂಪು) ನಂತಹ ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಈ ಬಣ್ಣಗಳು ಅಲರ್ಜಿ, ಆಸ್ತಮಾ, ಮಕ್ಕಳಲ್ಲಿ ಹೈಪರ್‌ಆಕ್ಟಿವಿಟಿ, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ಕೆಲವು ಮಿತಿಗಳಲ್ಲಿ ಈ ಬಣ್ಣಗಳ ಬಳಕೆಗೆ ಅನುಮತಿ ಇದ್ದರೂ, ಅನೇಕ ಮಾರಾಟಗಾರರು ನಿಯಮ ಉಲ್ಲಂಘಿಸಿ ಹೆಚ್ಚಿನ ಪ್ರಮಾಣದಲ್ಲಿ ಅಥವಾ ನಿಷಿದ್ಧ ಬಣ್ಣಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪಗಳಿವೆ.
ಜಿಲೇಜಿ ಮಾಡುವ ವೇಳೆ ಬಳಸುವ ಸಿಹಿಯ ಬಗ್ಗೆಯೂ ಅನುಮಾನ ವ್ಯಕ್ತಗೊಂಡಿದೆ. ಗುಣಮಟ್ಟದ ಸಕ್ಕರೆಯ ಬದಲಿಗೆ ಕಳಪೆ ಗುಣಮಟ್ಟದ ಹಾಗೂ ರಾಸಾಯನಿಕ ಯುಕ್ತವಾಗಿರುವಂಥ ಸಿಹಿಯನ್ನು ಬಳಸಲಾಗುತ್ತಿದೆಯೇ ಎಂಬ ಅನುಮಾನವೂ ಇದೆ. ಈ ಕುರಿತೂ ಸ್ಯಾಂಪಲ್ ಟೆಸ್ಟ್ ನಡೆಯಲಿದೆ.
ಆರೋಗ್ಯ ಇಲಾಖೆಯ ಕಠಿಣ ಕ್ರಮ
ರಾಜ್ಯದಲ್ಲಿ ವ್ಯಾಪಕವಾಗಿ ಮಾರಾಟವಾಗುವ ಜಿಲೇಬಿ ಮತ್ತು ಶರಬತ್ತುಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆಯು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಅದಕ್ಕಾಗಿ ಆದೇಶ ಹೊರಡಿಸಿ ಸ್ಯಾಂಪಲ್ ಸಂಗ್ರಹಕ್ಕೆ ಮುಂದಾಗಿದೆ.
ರಾಜ್ಯದಾದ್ಯಂತ ಸಂಗ್ರಹಿಸಲಾಗುವ ಮಾದರಿಗಳನ್ನು ಸರ್ಕಾರಿ ಆಹಾರ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುವುದು. ಪರೀಕ್ಷೆಯಲ್ಲಿ ಕೃತಕ ಬಣ್ಣಗಳ ಬಳಕೆ ದೃಢಪಟ್ಟರೆ, ಸಂಬಂಧಪಟ್ಟ ಮಾರಾಟಗಾರರು ಮತ್ತು ತಯಾರಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದರ ಜೊತೆಗೆ, ಹಾನಿಕಾರಕ ಬಣ್ಣಗಳ ಬಳಕೆಯನ್ನು ನಿಷೇಧಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರಿಗೆ ಆರೋಗ್ಯ ತಜ್ಞರ ಸಲಹೆ
ಆರೋಗ್ಯ ತಜ್ಞರು ಕೂಡ ಗ್ರಾಹಕರಿಗೆ ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಜಿಲೇಬಿ ಮತ್ತು ಶರಬತ್ತುಗಳಂತಹ ಆಹಾರ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳ ಬಣ್ಣ ಮತ್ತು ತಯಾರಿಕೆ ಗಮನ ಇರಲಿ ಎಂದು ಹೇಳುತ್ತಾರೆ. ಅತಿಯಾದ ಬಣ್ಣವಿರುವ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ, ಸ್ವಾಭಾವಿಕವಾಗಿ ತಯಾರಿಸಿದ ಮತ್ತು ಸುರಕ್ಷಿತ ಆಹಾರ ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.