ಜುಬೀನ್ ಗರ್ಗ್ ಸಾವು ಆಕಸ್ಮಿಕವಲ್ಲ, ಅದು 'ಕೊಲೆ': ಅಸ್ಸಾಂ ವಿಧಾನಸಭೆಯಲ್ಲಿ ಸಿಎಂ ಹೇಳಿಕೆ
ಆರೋಪಿಗಳ ಪೈಕಿ ಒಬ್ಬ ವ್ಯಕ್ತಿ ಗರ್ಗ್ ಅವರನ್ನು ಹತ್ಯೆ ಮಾಡಿದ್ದು, ಉಳಿದವರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಸ್ಸಾಂನ ಜನಪ್ರಿಯ ಗಾಯಕ ಜುಬೀನ್ ಗರ್ಗ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ (ನವೆಂಬರ್ 25) ವಿಧಾನಸಭೆಯಲ್ಲಿ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಜುಬೀನ್ ಅವರ ಸಾವು ಅಪಘಾತವೋ ಅಥವಾ ಆಕಸ್ಮಿಕ ಕೃತ್ಯವೂ ಅಲ್ಲ, ಬದಲಾಗಿ ಇದೊಂದು "ಉದ್ದೇಶಪೂರ್ವಕ ಕೊಲೆ" ಎಂದು ಮುಖ್ಯಮಂತ್ರಿಗಳು ಅಧಿಕೃತವಾಗಿ ಸದನಕ್ಕೆ ತಿಳಿಸಿದ್ದಾರೆ. ವಿರೋಧ ಪಕ್ಷಗಳು ಮಂಡಿಸಿದ ನಿಲುವಳಿ ಸೂಚನೆಯ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ, ಸಿಎಂ ಶರ್ಮಾ ಅವರು ಈ ಗಂಭೀರ ಅಂಶವನ್ನು ಬಹಿರಂಗಪಡಿಸಿದರು.
ಪೊಲೀಸರ ಪ್ರಾಥಮಿಕ ತನಿಖೆಯ ನಂತರ ಇದು ಆಕಸ್ಮಿಕವಲ್ಲ ಎಂಬುದು ದೃಢಪಟ್ಟಿದೆ ಎಂದು ಸಿಎಂ ಶರ್ಮಾ ಸದನಕ್ಕೆ ವಿವರಿಸಿದರು. ರಾಜ್ಯದ ಸಿಐಡಿ ಅಡಿಯಲ್ಲಿ ರಚಿಸಲಾದ ವಿಶೇಷ ತನಿಖಾ ತಂಡವು (SIT) ನಡೆಸಿದ ತನಿಖೆಯಲ್ಲಿ, ಇದು ನೇರ ಕೊಲೆ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಘಟನೆ ನಡೆದ ಮೂರು ದಿನಗಳ ಒಳಗಾಗಿ ಕ್ರಮ ಕೈಗೊಳ್ಳಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, 252 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ, ತನಿಖಾ ತಂಡವು 29 ಪ್ರಮುಖ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಆರೋಪಿಗಳ ಪೈಕಿ ಒಬ್ಬ ವ್ಯಕ್ತಿ ಗರ್ಗ್ ಅವರನ್ನು ಹತ್ಯೆ ಮಾಡಿದ್ದು, ಉಳಿದವರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಒಟ್ಟು ನಾಲ್ಕರಿಂದ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲಾಗುವುದು. ಈ ದೋಷಾರೋಪ ಪಟ್ಟಿಯು ಅತ್ಯಂತ ಪ್ರಬಲವಾಗಿರಲಿದ್ದು , ಕೊಲೆಯ ಹಿಂದಿನ ಉದ್ದೇಶವೇನೆಂಬುದು ಇಡೀ ರಾಜ್ಯದ ಜನತೆಯನ್ನೇ ಬೆಚ್ಚಿಬೀಳಿಸಲಿದೆ ಎಂದು ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಶರ್ಮಾ ಅವರು ಸದನದಲ್ಲಿ ಹೇಳಿದರು. ಚಾರ್ಜ್‌ಶೀಟ್ ಸಲ್ಲಿಕೆಯ ನಂತರ ನಿರ್ಲಕ್ಷ್ಯ, ನಂಬಿಕೆ ದ್ರೋಹ ಸೇರಿದಂತೆ ಇತರ ಆಯಾಮಗಳಲ್ಲಿಯೂ ತನಿಖೆಯನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗಾಯಕನ ಸಾವು
ಇದಕ್ಕೂ ಮುನ್ನ, ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಮತ್ತು ಪಕ್ಷೇತರ ಶಾಸಕ ಅಖಿಲ್ ಗೊಗೊಯ್ ಅವರು ಜುಬೀನ್ ಗರ್ಗ್ ಸಾವಿನ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದರು. ಸ್ಪೀಕರ್ ಬಿಸ್ವಜಿತ್ ದೈಮರಿ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನವೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು, ಸರ್ಕಾರ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು. ವಿರೋಧ ಪಕ್ಷಗಳ ನಿಲುವಳಿ ಸೂಚನೆಯನ್ನು ಅಂಗೀಕರಿಸುವಂತೆ ಸ್ಪೀಕರ್‌ಗೆ ಸ್ವತಃ ಮುಖ್ಯಮಂತ್ರಿಗಳೇ ಮನವಿ ಮಾಡಿದರು. ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ದಿನದ ಇತರ ಕಾರ್ಯಕಲಾಪಗಳನ್ನು ಬದಿಗಿಟ್ಟು ಚರ್ಚೆಗೆ ಅವಕಾಶ ನೀಡಲಾಯಿತು. ಆದರೆ, ತನಿಖೆಗೆ ಧಕ್ಕೆಯಾಗುವಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ಸ್ಪೀಕರ್ ಸದಸ್ಯರಿಗೆ ಎಚ್ಚರಿಕೆ ನೀಡಿದರು.
ಸಿಂಗಾಪುರದಲ್ಲಿ ನಡೆದಿದ್ದ ದುರಂತ
ಕಳೆದ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಈಜುವಾಗ ಜುಬೀನ್ ಗರ್ಗ್ ಅವರು ಮೃತಪಟ್ಟಿದ್ದರು. ಆರಂಭದಲ್ಲಿ ಇದೊಂದು ಸಹಜ ಸಾವು ಅಥವಾ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಸಾವಿನ ಸುತ್ತಲಿನ ಅನುಮಾನಗಳು ಬಲವಾಗುತ್ತಿದ್ದಂತೆ, ಅಸ್ಸಾಂ ಸರ್ಕಾರವು ಇದರ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಇದರ ಜೊತೆಗೆ, ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರ ನೇತೃತ್ವದ ಏಕಸದಸ್ಯ ಆಯೋಗವೂ ಕೂಡ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ. ಈ ಆಯೋಗವು ಸಾಕ್ಷ್ಯ ಮತ್ತು ಹೇಳಿಕೆಗಳನ್ನು ಸಲ್ಲಿಸಲು ಡಿಸೆಂಬರ್ 12ರವರೆಗೆ ಗಡುವು ವಿಸ್ತರಿಸಿದೆ. ಘಟನೆಯ ಪೂರ್ವ ಮತ್ತು ನಂತರದ ಬೆಳವಣಿಗೆಗಳನ್ನು ಮರುಸೃಷ್ಟಿಸಿ ಯಾವುದಾದರೂ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿರ್ಲಕ್ಷ್ಯವಾಗಿದೆಯೇ ಎಂಬುದನ್ನು ಆಯೋಗ ಪತ್ತೆಹಚ್ಚಲಿದೆ.