ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾಧ್ವಜ ಹಾರಿಸಿದ ಪ್ರಧಾನಿ ಮೋದಿ
10 ಅಡಿ ಎತ್ತರ ಮತ್ತು 20 ಅಡಿ ಉದ್ದದ ಈ ಬಲಕೋನೀಯ ತ್ರಿಕೋನಾಕೃತಿಯ ಭಗವಾಧ್ವಜವು ರಾಮನ ಪ್ರಕಾಶಮಾನತೆ ಮತ್ತು ಪರಾಕ್ರಮವನ್ನು ಸಂಕೇತಿಸುವ ಪ್ರಜ್ವಲಿಸುವ ಸೂರ್ಯನ ಚಿತ್ರ ಹೊಂದಿದೆ.
ಅಯೋಧ್ಯ ರಾಮಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶ್ರೀ ರಾಮ ಜನ್ಮಭೂಮಿ ಮಂದಿರದ ನಿರ್ಮಾಣ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ (ನವೆಂಬರ್ 25) ಮಂದಿರದ ಪ್ರಧಾನ ಗೋಪುರದ ಮೇಲೆ ಭಗವಾಧ್ವಜವನ್ನು ವಿಧಿವತ್ತಾಗಿ ಹಾರಿಸಿದರು. ಈ ಐತಿಹಾಸಿಕ 'ಧ್ವಜಾರೋಹಣ' ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಮಂತ್ರಿ ಜೊತೆಯಿದ್ದರು.
10 ಅಡಿ ಎತ್ತರ ಮತ್ತು 20 ಅಡಿ ಉದ್ದದ ಈ ಬಲಕೋನೀಯ ತ್ರಿಕೋನಾಕೃತಿಯ ಭಗವಾಧ್ವಜವು ರಾಮನ ಪ್ರಕಾಶಮಾನತೆ ಮತ್ತು ಪರಾಕ್ರಮವನ್ನು ಸಂಕೇತಿಸುವ ಪ್ರಜ್ವಲಿಸುವ ಸೂರ್ಯನ ಚಿತ್ರ ಹೊಂದಿದೆ. ಇದರಲ್ಲಿ 'ಓಂ' ಚಿಹ್ನೆ ಮತ್ತು ಕೋವಿದಾರ (ಕಂಚನಾರ) ವೃಕ್ಷದ ಚಿತ್ರವನ್ನು ಚಿತ್ರಿಸಲಾಗಿದೆ. ಅಹಮದಾಬಾದನ ತಜ್ಞರೊಬ್ಬರು ರಕ್ಷಣಾ ಸಚಿವಾಲಯದ ನಿಯಮಗಳಿಗನುಸಾರ ವಿನ್ಯಾಸಗೊಳಿಸಿದ ಈ ವಿಶೇಷ ಧ್ವಜವು ಎರಡರಿಂದ ಮೂರು ಕಿಲೋಗ್ರಾಂ ತೂಕವನ್ನು ಹೊಂದಿದ್ದು, 161 ಅಡಿ ಎತ್ತರದ ಮಂದಿರ ಗೋಪುರಕ್ಕೆ ಮತ್ತು 42 ಅಡಿ ಧ್ವಜಸ್ತಂಭಕ್ಕೆ ಸೂಕ್ತವಾಗಿ ತಯಾರಿಸಲಾಗಿದೆ.
ಶತಮಾನಗಳ ನೋವು ವಿಶ್ರಾಂತಿ ಪಡೆಯುತ್ತಿದೆ
ಸಮಾರಂಭದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಶತಮಾನಗಳ ನೋವಿಗೆ ವಿಶ್ರಾಂತಿ ಸಿಕ್ಕಿದೆ ಎಂದು ಹೇಳಿದರು. "ಇಂದು ಇಡೀ ಭಾರತ ಮತ್ತು ಪ್ರಪಂಚವೇ ರಾಮಮಯವಾಗಿದೆ. ಪ್ರತಿಯೊಬ್ಬ ರಾಮಭಕ್ತನ ಹೃದಯದಲ್ಲಿ ಅಸಾಧಾರಣ ತೃಪ್ತಿ ಇದೆ. ಅಪಾರ ಕೃತಜ್ಞತೆ ಇದೆ. ಅಪರಿಮಿತ ಅಲೌಕಿಕ ಆನಂದವಿದೆ. ಶತಮಾನಗಳ ಗಾಯಗಳು ವಾಸಿಯಾಗುತ್ತಿವೆ. ಶತಮಾನಗಳ ನೋವು ಇಂದು ವಿಶ್ರಾಂತಿ ಪಡೆಯುತ್ತಿದೆ. ಶತಮಾನಗಳ ಸಂಕಲ್ಪ ಇಂದು ಪೂರೈಸಲ್ಪಡುತ್ತಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥರು ಏನಂದರು?
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್, ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಹಾರಿದ ಮತ್ತು ಲೋಕಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ಹರಡುತ್ತಿದ್ದ ರಾಮರಾಜ್ಯದ ಧ್ವಜವು ಈಗ ಪುನಃ ತನ್ನ ಶಿಖರದಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು. "ಧ್ವಜವೇ ಒಂದು ಸಂಕೇತ... ಮಂದಿರ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯಿತು. 500 ವರ್ಷಗಳನ್ನು ಪಕ್ಕಕ್ಕಿಟ್ಟರೂ, 30 ವರ್ಷಗಳು ಹಿಡಿಯಿತು" ಎಂದು ಅವರು ಹೇಳಿದರು.
ಸ್ಥಳದಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶವಿದ್ದುದರಿಂದ, ಅಯೋಧ್ಯೆಯ ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ಎಲ್‌ಇಡಿ ಪರದೆಗಳನ್ನು ಸ್ಥಾಪಿಸಿ ಜನರಿಗೆ ನೇರ ಪ್ರಸಾರವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಮಾಹಿತಿ ಅಧಿಕಾರಿ ಸಂತೋಷ್ ದ್ವಿವೇದಿ ತಿಳಿಸಿದರು. 2020ರ ಆಗಸ್ಟ್ 5ರಂದು ಶಿಲಾನ್ಯಾಸ ಮತ್ತು 2024ರ ಜನವರಿ 22ರಂದು ಪ್ರಾಣ ಪ್ರತಿಷ್ಠೆಯ ನಂತರ, ಈಗ ಮಂದಿರದ ಎಲ್ಲಾ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಧ್ವಜಾರೋಹಣವು ಅದರ ಔಪಚಾರಿಕ ಪೂರ್ಣತೆಯ ಸಂಕೇತವಾಗಿದೆ