ಶಬರಿಮಲೆ ಭಕ್ತರಿಗೆ ಇನ್ಮುಂದೆ ಸಿಗಲ್ಲ 'ಪಲಾವ್-ಸಾಂಬಾರ್': ಬದಲಿಗೇನು ಗೊತ್ತೇ?
ಇದುವರೆಗೂ ಅನ್ನದಾನದಲ್ಲಿ ಭಕ್ತರಿಗೆ ಪಲಾವ್ ಮತ್ತು ಸಾಂಬಾರ್ ನೀಡಲಾಗುತ್ತಿತ್ತು. ಆದರೆ ಇದು ದೇವಸ್ಥಾನದ ಪದ್ಧತಿಗೆ ಸೂಕ್ತವಲ್ಲ ಎಂದು ಪರಿಗಣಿಸಿರುವ ಮಂಡಳಿ, ಇನ್ನು ಮುಂದೆ ಸಂಪೂರ್ಣ ಕೇರಳ ಶೈಲಿಯ ಊಟವನ್ನು ನೀಡಲು ತೀರ್ಮಾನಿಸಿದೆ.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ಮುಂದೆ ದೇವಾಲಯದಲ್ಲಿ ನಡೆಯುವ 'ಅನ್ನದಾನ' ಸೇವೆಯಲ್ಲಿ ಭಕ್ತರಿಗೆ ರುಚಿಕರವಾದ ಮತ್ತು ಸಾಂಪ್ರದಾಯಿಕ 'ಕೇರಳ ಸದ್ಯ'ವನ್ನು (ಬಾಳೆ ಎಲೆ ಊಟ) ಬಡಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ. ಮಂಗಳವಾರ ನಡೆದ ಮಂಡಳಿಯ ಸಭೆಯ ನಂತರ ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಈ ಮಹತ್ವದ ಬದಲಾವಣೆಯನ್ನು ಪ್ರಕಟಿಸಿದ್ದಾರೆ.
ಇದುವರೆಗೂ ಅನ್ನದಾನದಲ್ಲಿ ಭಕ್ತರಿಗೆ ಪಲಾವ್ ಮತ್ತು ಸಾಂಬಾರ್ ನೀಡಲಾಗುತ್ತಿತ್ತು. ಆದರೆ ಇದು ದೇವಸ್ಥಾನದ ಪದ್ಧತಿಗೆ ಸೂಕ್ತವಲ್ಲ ಎಂದು ಪರಿಗಣಿಸಿರುವ ಮಂಡಳಿ, ಇನ್ನು ಮುಂದೆ ಸಂಪೂರ್ಣ ಕೇರಳ ಶೈಲಿಯ ಊಟವನ್ನು ನೀಡಲು ತೀರ್ಮಾನಿಸಿದೆ. ಈ ಹೊಸ ಮೆನುವಿನಲ್ಲಿ ಅನ್ನ, ಸಾಂಬಾರ್ ಜೊತೆಗೆ ವಿಶೇಷವಾಗಿ 'ಪಾಯಸ' ಮತ್ತು 'ಹಪ್ಪಳ' ಕೂಡ ಇರಲಿದ್ದು, ಭಕ್ತರಿಗೆ ತೃಪ್ತಿಕರ ಭೋಜನ ಸಿಗಲಿದೆ. ಈ ಬದಲಾವಣೆಯು ಬುಧವಾರ ಅಥವಾ ಗುರುವಾರದಿಂದಲೇ ಜಾರಿಗೆ ಬರುವ ನಿರೀಕ್ಷೆಯಿದೆ.
ಭಕ್ತರ ಹಣ ಭಕ್ತರಿಗೇ ವಿನಿಯೋಗ
ಅನ್ನದಾನದ ಬಗ್ಗೆ ಸ್ಪಷ್ಟನೆ ನೀಡಿರುವ ಜಯಕುಮಾರ್, "ಅನ್ನದಾನಕ್ಕಾಗಿ ಬಳಸುವ ಹಣ ದೇವಸ್ವಂ ಮಂಡಳಿಯದ್ದಲ್ಲ. ಇದು ಭಕ್ತರು ಅಯ್ಯಪ್ಪ ಸ್ವಾಮಿಯ ಯಾತ್ರಿಕರಿಗೆ ಒಳ್ಳೆಯ ಊಟ ನೀಡಲೆಂದೇ ನಂಬಿಕೆಯಿಂದ ನೀಡಿದ ದೇಣಿಗೆ. ಹೀಗಾಗಿ ಅನ್ನದಾನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿ," ಎಂದು ಹೇಳಿದ್ದಾರೆ.
ಮುಂದಿನ ಯಾತ್ರೆಗೆ ಈಗಲೇ ಸಿದ್ಧತೆ
ಪ್ರಸ್ತುತ ನಡೆಯುತ್ತಿರುವ ಮಂಡಲ-ಮಕರವಿಳಕ್ಕು ಋತುವಿನ ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿದ್ದರೂ, ಈಗ ಎಲ್ಲವೂ ಸುಗಮವಾಗಿ ಸಾಗುತ್ತಿದೆ ಎಂದು ಅವರು ತಿಳಿಸಿದರು. ಅಲ್ಲದೆ, ಮುಂದಿನ ವರ್ಷದ ಯಾತ್ರೆಯ ತಯಾರಿಗಾಗಿ ಡಿಸೆಂಬರ್ 18 ರಂದು ಶಬರಿಮಲೆ ಮಾಸ್ಟರ್ ಪ್ಲಾನ್ ಕುರಿತು ಪರಿಶೀಲನಾ ಸಭೆ ನಡೆಸಲಾಗುವುದು ಮತ್ತು ಫೆಬ್ರವರಿ 2026 ರ ವೇಳೆಗೆ ಮುಂದಿನ ಯಾತ್ರೆಯ ಸಿದ್ಧತೆಗಳನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.