ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ: ಮಾಜಿ ಸಿಜೆಐ ಗವಾಯಿ
ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಗವಾಯಿ, ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿದ್ದು, ಸರ್ಕಾರದ ಒತ್ತಡಕ್ಕೆ ಮಣಿಯುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ನಿವೃತ್ತಿ ಸಿಜೆಐ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ
ತಮ್ಮ ಅಧಿಕಾರಾವಧಿಯಲ್ಲಿ ನಡೆದ ಚಪ್ಪಲಿ ಎಸೆತದ ಘಟನೆ ಮತ್ತು 'ಹಿಂದೂ ವಿರೋಧಿ' ಎಂಬ ಗಂಭೀರ ಆರೋಪಗಳ ಕುರಿತು ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ.
"ನಾನು ಯಾವತ್ತೂ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ನನ್ನ ಮನಸ್ಸಾಕ್ಷಿ ಸ್ಪಷ್ಟವಾಗಿದೆ. ದೇವಾಲಯ, ಮಸೀದಿ, ಚರ್ಚ್ ಮತ್ತು ಗುರುದ್ವಾರಗಳಿಗೆ ಭೇಟಿ ನೀಡಿದ್ದೇನೆ. ನನ್ನ ವಿರುದ್ಧದ ಆರೋಪಗಳು ಆಧಾರರಹಿತ," ಎಂದು ಅವರು 'ಇಂಡಿಯಾ ಟುಡೇ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕ್ಷಮೆ ಎಂಬುದು ಶ್ರೇಷ್ಠ ಗುಣ
ಕಳೆದ ಅಕ್ಟೋಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕಲಾಪದ ವೇಳೆ ವಕೀಲರೊಬ್ಬರು "ಸನಾತನ ಧರ್ಮಕ್ಕೆ ಅವಮಾನ ಮಾಡುವುದನ್ನು ಸಹಿಸಲ್ಲ" ಎಂದು ಕೂಗುತ್ತಾ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆಯಲು ಯತ್ನಿಸಿದ ನಾಟಕೀಯ ಘಟನೆ ನಡೆದಿತ್ತು. ಈ ಬಗ್ಗೆ ಮಾತನಾಡಿದ ಗವಾಯಿ, "ಆ ಘಟನೆ ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಾನೂನಿನ ಘನತೆ ಇರುವುದು ಶಿಕ್ಷಿಸುವುದರಲ್ಲಿ ಅಲ್ಲ, ಕ್ಷಮಿಸುವುದರಲ್ಲಿ ಎಂದು ನಾನು ನಂಬಿದ್ದೇನೆ. ನನ್ನ ಕುಟುಂಬದ ಮೌಲ್ಯಗಳಂತೆ ನಾನು ನಡೆದುಕೊಂಡೆ," ಎಂದು ತಿಳಿಸಿದ್ದಾರೆ. ತಮಗೆ ಚಪ್ಪಲಿ ಎಸೆದ ವ್ಯಕ್ತಿಯ ಕೋಪವು 'ವಿಷ್ಣು ವಿಗ್ರಹ' ಪ್ರಕರಣದ ತಮ್ಮ ಹೇಳಿಕೆಗೆ ಸಂಬಂಧಿಸಿದ್ದು ಎಂಬುದು ಆ ಕ್ಷಣದಲ್ಲಿ ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ.
ವಿಗ್ರಹದ ಕುರಿತಾದ ವಿವಾದಾತ್ಮಕ ಹೇಳಿಕೆ
ಮಧ್ಯಪ್ರದೇಶದ ಹಾನಿಗೊಳಗಾದ ವಿಷ್ಣು ವಿಗ್ರಹದ ಮರುಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಗವಾಯಿ ಅವರು "ವಿಗ್ರಹವನ್ನೇ ಹೋಗಿ ಕೇಳಿ" ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, "ಕೆಲವೊಮ್ಮೆ ಹಗುರಾದ ಧಾಟಿಯಲ್ಲಿ ಅಥವಾ ಸಹಜವಾಗಿ ಆಡಿದ ಮಾತುಗಳು ತಪ್ಪಾಗಿ ಅರ್ಥೈಸಲ್ಪಡುತ್ತವೆ. ಈ ಘಟನೆಯ ನಂತರ ನಾನು ಸಾರ್ವಜನಿಕವಾಗಿ ಮಾತನಾಡುವಾಗ ಹೆಚ್ಚು ಜಾಗರೂಕತೆ ಮತ್ತು ಸಂಯಮ ವಹಿಸಿದ್ದೇನೆ," ಎಂದು ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಯನ್ನು ತಿರುಚಲಾಗಿತ್ತು ಮತ್ತು ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಲಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬುಲ್ಡೋಜರ್ ನ್ಯಾಯ
ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಗವಾಯಿ, ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿದ್ದು, ಸರ್ಕಾರದ ಒತ್ತಡಕ್ಕೆ ಮಣಿಯುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ. ಇದೇ ವೇಳೆ 'ಬುಲ್ಡೋಜರ್ ನ್ಯಾಯ'ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾನೂನಿನ ಆಳ್ವಿಕೆಯೇ ಅಂತಿಮವೇ ಹೊರತು ಕಾರ್ಯಾಂಗವು ನ್ಯಾಯಾಂಗದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ನಿಷ್ಪಕ್ಷಪಾತ ನಿಲುವನ್ನು ಸಾಬೀತುಪಡಿಸಲು, ನಿವೃತ್ತಿಯ ನಂತರ ರಾಜ್ಯಪಾಲ ಹುದ್ದೆಯಾಗಲಿ ಅಥವಾ ರಾಜ್ಯಸಭೆ ಸದಸ್ಯತ್ವವನ್ನಾಗಲಿ ತಾವು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.