ಸುಪ್ರಿಂಕೋರ್ಟ್ ವಿಸ್ತೃತ ಪೀಠಕ್ಕೆ ಬಿಎಸ್ ವೈ ಡಿನೋಟಿಫಿಕೇಶನ್ ಪ್ರಕರಣ
ಪ್ರಕರಣವನ್ನು ವಜಾಗೊಳಿಸುವಂತೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಕೋರ್ಟ್, ಕೆಲವೊಂದು ಕಾನೂನು ಪ್ರಶ್ನೆಗಳಿರುವ ಕಾರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.;
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ತಮ್ಮ ವಿರುದ್ದ ದಾಖಲಾಗಿದ್ದ ಡಿನೋಟಿಫಿಕೇಶನ್ ಪ್ರಕರಣ ರದ್ದುಪಡಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿದೆ. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯಲ್ಲಿ ವಿಸ್ತೃತ ಪೀಠ ಪರಿಗಣಿಸಬೇಕಾದ ಕೆಲ ಕಾನೂನು ಪ್ರಶ್ನೆಗಳನ್ನು ಒಳಗೊಂಡಿರುವುದರಿಂದ ಪ್ರಕರಣದ ತೀರ್ಪನ್ನು ವಿಭಾಗೀಯ ಪೀಠ ಮುಂದೂಡಿದೆ.
2011ರಲ್ಲಿ ಬಿ. ಎಸ್. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾಗಿದ್ದಾಗ ಭೂ ಡಿನೋಟಿಫಿಕೇಶನ್ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣವು ಕಾನೂನು ಬದ್ಧವಾಗಿದೆಯೇ ಎಂಬುದರ ಕುರಿತು ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದಿವಾಲ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ತೀರ್ಪು ನೀಡಬೇಕಿತ್ತು. ಆದರೆ, ಸೂಕ್ತ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವಂತೆ ರಿಜಿಸ್ಟ್ರರ್ ಅವರಿಗೆ ನ್ಯಾಯಮೂರ್ತಿಗಳು ಆದೇಶಿಸಿದರು.
"ನಾವು (ತೀರ್ಪಿನ ಮೇಲೆ) ಕೆಲಸ ಮಾಡಲು ಪ್ರಾರಂಭಿಸಿದಾಗ, ಏಪ್ರಿಲ್ 16, 2024 ರಂದು ಸಮನ್ವಯ ಪೀಠ ಶಮಿನ್ ಖಾನ್ ಮತ್ತು ದೇಬಶಿಶ್ ಚಕ್ರವರ್ತಿ ಇನ್ನಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆದೇಶವನ್ನು ಹೊರಡಿಸಿದೆ ಎಂಬುದನ್ನು ಅರಿತೆವು. ಅದನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಲಾಗಿದೆ. ನಾವು (ಈ ಪ್ರಕರಣವನ್ನು ಸಹ ಅದೇ ಪೀಠಕ್ಕೆ ಉಲ್ಲೇಖಿಸಬೇಕು ಎಂಬ) ಔಚಿತ್ಯದ ಬೇಡಿಕೆಗಳನ್ನು ಕಂಡುಕೊಂಡಿದ್ದೇವೆ. ಈ ಆದೇಶದಲ್ಲಿಯೂ ತೀರ್ಪನ್ನು ಸಿದ್ಧಪಡಿಸುವಾಗ ನಾವು ವಿಚಾರಗಳನ್ನು ರೂಪಿಸಿದ್ದೇವೆ. ಏಪ್ರಿಲ್ 16, 2024ರಂದು ಸಮನ್ವಯ ಪೀಠ ನೀಡಿದ ಆದೇಶವನ್ನು ನಾವು ನೋಡಿದ್ದೇವೆ . ಈ ಅರ್ಜಿಗಳನ್ನು ಉಲ್ಲೇಖಿತ ಪ್ರಕರಣಕ್ಕೆ ಸೇರಿಸುವುದು ಸೂಕ್ತವೆಂದು ನಾವು ಪರಿಗಣಿಸುತ್ತೇವೆ" ಎಂದು ಪೀಠ ಹೇಳಿದೆ.
ಕೈಗಾರಿಕಾ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದ್ದು, ಇದರಿಂದಾಗಿ ರಾಜ್ಯ ಬೊಕ್ಕಸಕ್ಕೆ ಗಣನೀಯ ನಷ್ಟವಾಗಿದೆ ಎಂಬ ಆರೋಪವನ್ನು ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾಡಲಾಗಿತ್ತು. 2006ರಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಕೆಲ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಭೂಮಿಯನ್ನು ಹೂವಿನನಾಯಕನಹಳ್ಳಿಯಲ್ಲಿ ಹಾರ್ಡ್‌ವೇರ್ ಪಾರ್ಕ್ ಸ್ಥಾಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಂಡಿತ್ತು.
ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ಸೇವಾ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಸಹ ಮನ್ನಾ ಮಾಡಲಾಗಿದ್ದರಿಂದ ರಾಜ್ಯ ಬೊಕ್ಕಸಕ್ಕೆ ಗಮನಾರ್ಹ ನಷ್ಟವಾಗಿದೆ ಎಂದು ದೂರುದಾರ, ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಆರೋಪಿಸಿದ್ದರು.
ಒಂಬತ್ತು ಆರೋಪಿಗಳ ವಿರುದ್ಧದ ಆರೋಪಗಳನ್ನು2012ರಲ್ಲಿ ಕೈಬಿಟ್ಟ ಪೊಲೀಸರು, ಯಡಿಯೂರಪ್ಪ ಮತ್ತು ಆಗಿನ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಆರೋಪಿಗಳೆಂದು ಹೆಸರಿಸಿದ್ದರು. ಆದರೆ, ಯಡಿಯೂರಪ್ಪ ಮತ್ತು ನಾಯ್ಡು ಅವರನ್ನು ದೋಷಾರೋಪಣೆ ಮಾಡಲು ಯಾವುದೇ ಪುರಾವೆಗಳಿಲ್ಲ ಎಂದು ತೋರುತ್ತಿರುವುದರಿಂದ ಅವರ ವಿರುದ್ಧದ ದೂರನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತು.
ನಂತರ ಪಾಷಾ ಪರಿಹಾರ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು. 2021ರಲ್ಲಿ, ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿ, ಯಡಿಯೂರಪ್ಪ ಮತ್ತು ನಾಯ್ಡು ವಿರುದ್ಧದ ಆರೋಪಗಳನ್ನು ಗಣನೆಗೆ ತೆಗೆದುಕೊಂಡು ವಿಚಾರಣೆಯನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಇದನ್ನು ಯಡಿಯೂರಪ್ಪ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ವಿಚಾರಣೆಯ ಸಮಯದಲ್ಲಿ, 2018ರಲ್ಲಿ ಮಾಡಲಾದ ತಿದ್ದುಪಡಿಯ ನಂತರ, ಯಡಿಯೂರಪ್ಪ ಅವರು ಸಾರ್ವಜನಿಕ ಹುದ್ದೆಯಿಂದ ಕೆಳಗಿಳಿದ ಕಾರಣ, ಭ್ರಷ್ಟಾಚಾರ ನಿಗ್ರಹ ಕಾಯಿದೆ- 1988 ರ ಅಡಿಯಲ್ಲಿ ಆರೋಪಗಳ ತನಿಖೆ ನಡೆಸಲು ಈ ಪ್ರಕರಣದಲ್ಲಿ ಪೂರ್ವಾನುಮತಿ ಅಗತ್ಯವಿದೆಯೇ ಎಂಬುದು ಮುಖ್ಯ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸಾರ್ವಜನಿಕ ಹುದ್ದೆಯಲ್ಲಿದ್ದವರು ಸೇವೆಯಲ್ಲಿಲ್ಲದಿದ್ದರೂ ಸಹ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಅಗತ್ಯವಿದೆ ಎಂದು ತಿದ್ದುಪಡಿ ಹೇಳುತ್ತಿತ್ತು.
ಹಿಂದಿನ ದೂರನ್ನು ವಜಾಗೊಳಿಸಿದ ಎಂಟು ದಿನಗಳ ಅಂತರದಲ್ಲಿಯೇ ಯಡಿಯೂರಪ್ಪ ವಿರುದ್ಧ ಸಲ್ಲಿಸಲಾದ ಎರಡನೇ ದೂರನ್ನು, ಅದಕ್ಕೆ ಪೂರ್ವಾನುಮತಿ ಇದೆ ಎಂಬ ಕಾರಣಕ್ಕಾಗಿ ಉಳಿಸಿಕೊಳ್ಳಲು ಸಾಧ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.
ಯಡಿಯೂರಪ್ಪ ಅವರ ಪರ ವಕೀಲರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಈ ಹಿಂದೆ ಎರಡು ದೂರುಗಳಲ್ಲಿ ಉಲ್ಲೇಖಿಸಲಾದ ಸಂಗತಿಗಳು ಮತ್ತು ಪುರಾವೆಗಳು ಹೆಚ್ಚಾಗಿ ಒಂದೇ ಆಗಿವೆ ಎಂದು ವಾದಿಸಿದ್ದರು. ಕರ್ನಾಟಕ ಹೈಕೋರ್ಟ್ 2015ರ ಸಂಬಂಧಿತ ಪ್ರಕರಣವನ್ನು ಅದರ ಅರ್ಹತೆಯನ್ನು ಪರಿಶೀಲಿಸದೆ ತಾಂತ್ರಿಕ ಆಧಾರದ ಮೇಲೆ ಮಾತ್ರ ರದ್ದುಗೊಳಿಸಿ ತಪ್ಪು ಮಾಡಿದೆ ಎಂದು ಅವರು ಹೇಳಿದ್ದರು.
ಗಮನಾರ್ಹ ಅಂಶವೆಂದರೆ, 2015ರಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಮತ್ತೊಂದು ಪ್ರಕರಣವನ್ನು 2023 ರಲ್ಲಿ, ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತು. ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಅಕ್ರಮವಾಗಿ ಡಿನೋಟಿಫೈ ಮಾಡಲು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ಈ ಪ್ರಕರಣದಲ್ಲಿ ಸೇರಿತ್ತು. 2015ರ ಈ ಪ್ರಕರಣವನ್ನು ಭಾರತದ ಮಹಾಲೇಖಪಾಲರ (ಸಿಎಜಿ) ವರದಿಯ ಆಧಾರದ ಮೇಲೆ ದಾಖಲಿಸಲಾಗಿತ್ತು.
ನ್ಯಾಯಾಲಯದ ಸಮನ್ವಯ ಪೀಠ ಈಗಾಗಲೇ ಸಂಬಂಧಿತ ಆರೋಪಗಳನ್ನು ಪರಿಹರಿಸಿದ್ದು ಸಿಎಜಿ ವರದಿ ಕ್ರಿಮಿನಲ್ ಪ್ರಕರಣಕ್ಕೆ ಆಧಾರವಾಗಲು ಸಾಧ್ಯವಿಲ್ಲ ಎಂಬುದಾಗಿ ತೀರ್ಪು ನೀಡಿದೆ ಎಂಬ ವಾದದಲ್ಲಿ ಹುರುಳಿದೆ ಎಂದು ಹೈಕೋರ್ಟ್ ಪ್ರಕರಣ ರದ್ದುಗೊಳಿಸಿತ್ತು.