ಅಹಮದಾಬಾದ್ ವಿಮಾನ ದುರಂತ: ಬೋಯಿಂಗ್ 787 ಡ್ರೀಮ್ಲೈನರ್ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು
ಡ್ರೀಮ್ಲೈನರ್ಗಳಲ್ಲಿ ಹೈಡ್ರಾಲಿಕ್ ಸೋರಿಕೆಗಳು ಮತ್ತು ಫ್ಲಾಪ್ ದೋಷಗಳಿಂದಾಗಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮತ್ತು ವಿಮಾನ ಯಾನ ರದ್ದಾಗಿದ್ದವು.;
ಗುರುವಾರ (ಜೂನ್ 12) ಅಹಮದಾಬಾದ್ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಪತನಗೊಂಡ ಬಳಿಕ ವಿಮಾನಯಾನದ ಸುರಕ್ಷತೆಯ ಬಗ್ಗೆ ಮಾತುಗಳು ಕೇಳಿ ಬಂದಿವೆ. ಈ ವಿಮಾನ ದೂರ ಪ್ರಯಾಣಕ್ಕೆ ಸೂಕ್ತವೇ ಎಂಬ ಚರ್ಚೆಗೆಳು ನಡೆಯುತ್ತಿವೆ. ಆದರೆ, ಈ ಅವಘಡವು ಈ ವಿಮಾನ ಮಾದರಿಯ ಮೊದಲ ಭೀಕರ ದುರಂತ ಎಂಬುದಾಗಿ ವರದಿಯಾಗಿದೆ. ಆದಾಗ್ಯೂ ,ಈ ಘಟನೆಯು ಬೋಯಿಂಗ್ 787 ಡ್ರೀಮ್ಲೈನರ್ ವಿಮಾನಗಳ ತಾಂತ್ರಿಕ ದೋಷಗಳು ಮತ್ತು ಸುರಕ್ಷತಾ ಸಮಸ್ಯೆಗಳ ಬಗ್ಗೆ ಗತಕಾಲದಲ್ಲಿ ಕೇಳಿಬಂದಿದ್ದ ಹಲವು ಎಚ್ಚರಿಕೆಗಳನ್ನು ಮತ್ತೆ ಮುನ್ನಲೆಗೆ ತಂದಿದೆ.
ಡ್ರೀಮ್ಲೈನರ್ನ ಹಿಂದಿನ ತಾಂತ್ರಿಕ ಸಮಸ್ಯೆಗಳು
ಕಳೆದ ವರ್ಷ, ಅಂದರೆ ಜನವರಿ 2024 ರಲ್ಲಿ, ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಡೋರ್ ಪ್ಲಗ್ ಒಂದು ಹಾರಾಟದ ಮಧ್ಯದಲ್ಲಿ ಕಳಚಿ ಬಿದ್ದ ಘಟನೆ ನಡೆದಿತ್ತು. ಇದಲ್ಲದೆ, ಡ್ರೀಮ್ಲೈನರ್ಗಳಲ್ಲಿ ಹೈಡ್ರಾಲಿಕ್ ಸೋರಿಕೆಗಳು ಮತ್ತು ಫ್ಲಾಪ್ ದೋಷಗಳಿಂದಾಗಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮತ್ತು ವಿಮಾನ ಯಾನ ರದ್ದಾಗಿದ್ದವು. . ಎಲ್ಲದಕ್ಕಿಂತ ಮಿಗಿಲಾಗಿ 900ಕ್ಕೂ ಹೆಚ್ಚು ಫಾಸ್ಟೆನರ್ಗಳನ್ನು ಫ್ಯೂಸ್ಲೇಜ್ನಲ್ಲಿ ತಪ್ಪಾಗಿ ಜೋಡಿಸಿದ್ದ ಪ್ರಕರಣವೂ ನಡೆದಿತ್ತು.
ವಿಷಲ್ ಬ್ಲೋಯರ್ಗಳು ನೀಡಿರುವ ಎಚ್ಚರಿಕೆಗಳು
ಬೋಯಿಂಗ್ನ ಮಾಜಿ ಗುಣಮಟ್ಟ ನಿಯಂತ್ರಣ ಇಂಜಿನಿಯರ್ ಜಾನ್ ಬಾರ್ನೆಟ್ ಅವರು ಈ ಹಿಂದೆ, ವಿಮಾನ ಜೋಡಣೆ ವೇಳೆ ಕಳಪೆ ಬಿಡಿ ಭಾಗಗಳನ್ನು ಬಳಸಲಾಗುತ್ತಿದೆ ಮತ್ತು ಆಕ್ಸಿಜನ್ ವ್ಯವಸ್ಥೆಯಲ್ಲಿ ದೋಷಗಳಿವೆ ಎಂದು ಆರೋಪಿಸಿದ್ದರು. ಅಲ್ಲದೆ, ನಾಲ್ಕರಲ್ಲಿ ಒಂದು ತುರ್ತು ಉಸಿರಾಟದ ಮಾಸ್ಕ್ಗಳು ವಿಮಾನದಲ್ಲಿ ವಿಫಲವಾಗಬಹುದು ಎಂದು ಅವರು ಎಚ್ಚರಿಸಿದ್ದರು. ಮತ್ತೊಬ್ಬ ವಿಷಯ ಬ್ಲೋಯರ್ ರಿಚರ್ಡ್ ಕ್ಯೂವಾಸ್ ಅವರು, 2023ರಲ್ಲಿ ಕಾನ್ಸಾಸ್ ಘಟಕದಲ್ಲಿ ನಿರ್ಮಾಣವಾಗುತ್ತಿದ್ದ 787 ವಿಮಾನಗಳ ಪ್ರೆಷರ್ ಬಲ್ಕ್ಹೆಡ್ಗಳಲ್ಲಿ ತಪ್ಪಾಗಿ ರಂಧ್ರ ಕೊರೆದಿರುವುದನ್ನು ಗುರುತಿಸಿದ್ದರು.
2024ರಲ್ಲಿ ಬೋಯಿಂಗ್ನ ಗುಣಮಟ್ಟ ಎಂಜಿನಿಯರ್ ಸಾಮ್ ಸಲೆಹ್ಪೌರ್ ಅವರು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಗೆ ದೂರು ನೀಡಿದ್ದರು. 777 ಮತ್ತು 787 ಡ್ರೀಮ್ಲೈನರ್ಗಳಲ್ಲಿ ತಯಾರಿಕೆಯ ಕಡಿಮೆ ಗುಣಮಟ್ಟದ ಕಾರಣದಿಂದ ಗಂಭೀರ ಅಪಾಯಗಳಿವೆ ಎಂದು ಅವರು ಎಚ್ಚರಿಸಿದ್ದರು. 1,000ಕ್ಕೂ ಹೆಚ್ಚು ಸೇವೆಯಲ್ಲಿರುವ 787 ವಿಮಾನಗಳ ಫ್ಯೂಸ್ಲೇಜ್ನಲ್ಲಿ ಅಂತರಗಳಿದ್ದು, ಇದು ಅಕಾಲಿಕ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದರು. ಈ ದೋಷಗಳನ್ನು ಸರಿಪಡಿಸದಿದ್ದರೆ, ವಾಣಿಜ್ಯ ವಿಮಾನದ ವಿನಾಶಕಾರಿ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಸಲೆಹ್ಪೌರ್ ಎಚ್ಚರಿಕೆ ನೀಡಿದ್ದರು.
ಬೋಯಿಂಗ್ನ ಪ್ರತಿಕ್ರಿಯೆ ಮತ್ತು ತನಿಖೆ
ಈ ಎಲ್ಲಾ ಆರೋಪಗಳನ್ನು ಬೋಯಿಂಗ್ ತಳ್ಳಿಹಾಕಿದ್ದು, ತಮ್ಮ 787 ಮತ್ತು 777 ವಿಮಾನಗಳು ಸುರಕ್ಷಿತವಾಗಿವೆ ಎಂದು ಹೇಳಿಕೆ ನೀಡಿದೆ. ಆದರೆ, ಎಫ್ಎಎ (FAA) ಈ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದೆ. ದೀರ್ಘ-ದೂರದ ಮಾರ್ಗಗಳಿಗೆ ಹೆಚ್ಚಿನ ಏರ್ಲೈನ್ಗಳು ಬೋಯಿಂಗ್ ವಿಮಾನಗಳನ್ನು ಆದ್ಯತೆ ನೀಡುತ್ತಿದ್ದರೂ, ಈ ತಾಂತ್ರಿಕ ಸಮಸ್ಯೆಗಳು ಸುರಕ್ಷತೆಯ ಬಗ್ಗೆ ಗಂಭೀರ ಕಾಳಜಿಗಳನ್ನು ಹುಟ್ಟುಹಾಕಿವೆ. ಅಹಮದಾಬಾದ್ನಲ್ಲಿ ನಡೆದ ಈ ದುರಂತವು ಬೋಯಿಂಗ್ ಡ್ರೀಮ್ಲೈನರ್ ವಿಮಾನಗಳ ಸುರಕ್ಷತಾ ಮಾನದಂಡಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.