ಮದ್ಯ ಹಗರಣ: ಛತ್ತೀಸ್‌ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಚೈತನ್ಯ ಬಂಧನ

ಹಗರಣದ ಆದಾಯವನ್ನು ಪಡೆದವರಲ್ಲಿ ಚೈತನ್ಯರ ಹೆಸರು ಕೇಳಿಬಂದಿತ್ತು ಮತ್ತು ನಂತರ ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳು ದೊರಕಿವೆ ಎಂದು ಇಡಿ ಮೂಲಗಳು ತಿಳಿಸಿವೆ.;

Update: 2025-07-18 11:45 GMT

ಬಹುಕೋಟಿ ರೂಪಾಯಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಾಘೇಲ್ ಅವರನ್ನು ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ದುರ್ಗಾ ಜಿಲ್ಲೆಯ ಭಿಲೈನಲ್ಲಿರುವ ಚೈತನ್ಯ ಬಘೇಲ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಹಗರಣದ ಆದಾಯವನ್ನು ಪಡೆದವರಲ್ಲಿ ಚೈತನ್ಯರ ಹೆಸರು ಕೇಳಿಬಂದಿತ್ತು ಮತ್ತು ನಂತರ ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳು ದೊರಕಿವೆ ಎಂದು ಇಡಿ ಮೂಲಗಳು ತಿಳಿಸಿವೆ. ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.

ಇಡಿ ದಾಳಿ ಮತ್ತು ರಾಜಕೀಯ ಆರೋಪ

ಹೊಸ ಪುರಾವೆಗಳು ದೊರೆತ ಹಿನ್ನೆಲೆಯಲ್ಲಿ ಭಿಲಾಯಿ ಪಟ್ಟಣದಲ್ಲಿರುವ ಚೈತನ್ಯ ಬಾಘೇಲ್ ಅವರ ಮನೆಯಲ್ಲಿ ಇಡಿ ಶೋಧ ನಡೆಸಿತ್ತು. ಛತ್ತೀಸ್‌ಗಢದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಶುಕ್ರವಾರ ಕೊನೆಯ ದಿನವಾಗಿತ್ತು. ಇದೇ ವೇಳೆ ಇಡಿ ದಾಳಿ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, "ತಮ್ಮ ಯಜಮಾನನನ್ನು (ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ) ಮೆಚ್ಚಿಸಲು ಇಡಿ ಅಧಿಕಾರಿಗಳನ್ನು ನನ್ನ ಮನೆಗೆ ಕಳುಹಿಸಿದ್ದಾರೆ" ಎಂದು ಆರೋಪಿಸಿದ್ದಾರೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಹೇಳಿರುವ ಬಘೇಲ್, ಇದು ತಮ್ಮ ಮಗನಿಗೆ ನೀಡಿದ 'ಹುಟ್ಟುಹಬ್ಬದ ಉಡುಗೊರೆ' ಎಂದು ಬೇಸರ ಹೊರಹಾಕಿದ್ದಾರೆ.

ಮದ್ಯ ಹಗರಣದ ವಿವರಗಳು

ಭೂಪೇಶ್ ಬಘೇಲ್ ಅವರು ಐದು ವರ್ಷಗಳ ಕಾಲ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಬಹುಕೋಟಿ ರೂಪಾಯಿ ಮೊತ್ತದ ಮದ್ಯ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ. ಇದರಿಂದ ಸರ್ಕಾರದ ಖಜಾನೆಗೆ ಭಾರಿ ನಷ್ಟ ಉಂಟಾಗಿದೆ ಎಂದು ಇಡಿ ಹೇಳಿದೆ. ಈ ಹಗರಣದಿಂದಾಗಿ ಮದ್ಯದ ಸಿಂಡಿಕೇಟ್‌ನ ಫಲಾನುಭವಿಗಳ ಜೇಬಿಗೆ ಬರೋಬ್ಬರಿ 2,100 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ಆದಾಯ ಬಂದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಇದಕ್ಕೂ ಮುನ್ನ, ಇತ್ತೀಚೆಗೆ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡರ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. ಈ ಪ್ರಕರಣಗಳು ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ. 

Tags:    

Similar News