ಆರ್‌ಎಸ್‌ಎಸ್‌ ಸಂವಿಧಾನ ಒಪ್ಪುವುದಿಲ್ಲ ಎಂಬುದಕ್ಕೆ ಭಾಗವತ್ ಭಾಷಣವೇ ಸಾಕ್ಷಿ

ಈ ಹೇಳಿಕೆಯು ಆಗಸ್ಟ್ 1947ರಲ್ಲಿ ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರಿಂದ ಮಾತ್ರವಲ್ಲದೆ, ಸಹಸ್ರಮಾನಗಳ ಕಾಲ ಬ್ರಾಹ್ಮಣ ಮತ್ತು ಕ್ಷತ್ರಿಯ ಪ್ರಾಬಲ್ಯ ಹಾಗೂ ಸಾಮಾಜಿಕ- ಆಧ್ಯಾತ್ಮಿಕ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಶೂದ್ರರು, ದಲಿತರು ಮತ್ತು ಆದಿವಾಸಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.;

Update: 2025-01-29 01:30 GMT
ಪ್ರಾತಿನಿಧಿಕ ಚಿತ್ರ

ಜನವರಿ 14ರಂದು ಮಕರ ಸಂಕ್ರಾಂತಿ ಪ್ರಯಕ್ತ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ “1947ರ ಆಗಸ್ಟ್ 15ರಂದು ನಮಗೆ ಕೇವಲ ರಾಜಕೀಯ ಸ್ವಾತಂತ್ರ್ಯ ಲಭಿಸಿತ್ತು ಹಾಗೂ ನೈಜ ಸ್ವಾತಂತ್ರ್ಯ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ದಿನವೇ ದೊರಕಿತು ” ಎಂದು ಹೇಳಿದ್ದಾರೆ.

1992ರಲ್ಲಿ ಬಾಬರಿ ಮಸೀದಿ ನೆಲಸಮಗೊಳಿ ಬಳಿಕ ನಿರ್ಮಾಣ ಮಾಡಿರುವ ರಾಮ ಮಂದಿರ 2024ರ ಜನವರಿ 22ರಂದು ಉದ್ಘಾಟನೆಗೊಂಡ ದಿನವು. 1947ರಲ್ಲಿ ದೊರಕಿದ ಸ್ವಾತಂತ್ರ್ಯಕ್ಕಿಂತ ಹೆಚ್ಚು ಮಹತ್ವದ್ದು ಎಂಬುದು ಅವರ ಮಾತಿನ ಅರ್ಥ.

ಈ ಹೇಳಿಕೆಯು ಆಗಸ್ಟ್ 1947ರಲ್ಲಿ ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರಿಂದ ಮಾತ್ರವಲ್ಲದೆ, ಸಹಸ್ರಮಾನಗಳ ಕಾಲ ಬ್ರಾಹ್ಮಣ ಮತ್ತು ಕ್ಷತ್ರಿಯ ಪ್ರಾಬಲ್ಯ ಹಾಗೂ ಸಾಮಾಜಿಕ- ಆಧ್ಯಾತ್ಮಿಕ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಶೂದ್ರರು, ದಲಿತರು ಮತ್ತು ಆದಿವಾಸಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಅಂಬೇಡ್ಕರ್ ಅವರ ವಿಶ್ವ ದೃಷ್ಟಿಕೋನ

ಆಧುನಿಕ ಭಾರತದ ತುಳಿತಕ್ಕೊಳಗಾದ ಜನ ಸಮುದಾಯಕ್ಕೆ ನಿಜವಾದ ವಿಮೋಚನಾ ಸಿದ್ಧಾಂತ ರಚಿಸಿಕೊಟ್ಟಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, ಜಾತಿ ಮತ್ತು ವರ್ಣ ಧರ್ಮ ರಚನೆಗಳು ದೇಶದಲ್ಲಿ ಹೆಚ್ಚು ಕಾಲ ಉಳಿಯದಂತೆ ನೋಡಿಕೊಂಡಿದ್ದರು.

ಅಂಬೇಡ್ಕರ್ ಅವರು ಬುದ್ಧರಾಜ್ಯ ಮತ್ತು ರಾಮರಾಜ್ಯದ ನಡುವೆ ಸ್ಪಷ್ಟ ರೇಖೆ ಎಳೆದಿದ್ದರು. ರಾಮ ಕೇವಲ ರಾಮಾಯಣ ಗ್ರಂಥದಿಂದ ಪರಿಚಿತನಾದ ಕ್ಷತ್ರಿಯ ರಾಜ. ರಾಮಾಯಣದ ಪ್ರಕಾರ ಕ್ಷತ್ರಿಯ ರಾಜನಾಗಿ, ವನವಾಸ ಮುಗಿಸಿ ಪಟ್ಟಾಭಿಷೇಕದ ದಿನದಂದು ವರ್ಣಧರ್ಮ ಪ್ರೇರಿತ ರಾಜ್ಯವನ್ನು ಸ್ಥಾಪಿಸಿದವನು.

ಕ್ಷತ್ರಿಯರು ಬ್ರಾಹ್ಮಣ ಗುರುವಿನ ಆರೈಕೆ ಮತ್ತು ಆಧ್ಯಾತ್ಮಿಕ ಮೇಲ್ವಿಚಾರಣೆಯಲ್ಲಿ ರಾಜ್ಯವನ್ನಾಳಬೇಕು ಎಂದು ರಾಮನ ಗುರು ವಸಿಷ್ಠ ಪದೇ ಪದೇ ಹೇಳಿದ್ದಾನೆ. ಆತನ ಪ್ರಕಾರ ಶೂದ್ರರು ಮತ್ತು ಚಂಡಾಲರಿಗೆ ಮೂರು ಮೇಲ್ವರ್ಗಕ್ಕೆ ಸೇವೆ ಸಲ್ಲಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಅವಕಾಶವಿಲ್ಲ.ಗ್ರಂಥದಲ್ಲಿ ವೈಶ್ಯರ ಪಾತ್ರ ಹೆಚ್ಚಾಗಿ ಗೋಚರಿಸುವುದಿಲ್ಲ. ಆದರೂ ಅವರು ಮೇಲ್ವರ್ಗದ ಭಾಗವಾಗಿದ್ದರು.

ಬುದ್ಧ ಮತ್ತು ರಾಮ

ರಾಮನಿಗೆ ತದ್ವಿರುದ್ಧವಾಗಿ, ಬುಡಕಟ್ಟು ಆಡಳಿತಗಾರ ಕುಟುಂಬಕ್ಕೆ ಸೇರಿದ ಗೌತಮ್ ಬುದ್ಧ ರಾಜತ್ವ ತ್ಯಜಿಸಿ ಸಮ ಸಮಾಜವನ್ನು ಸ್ಥಾಪಿಸಿದ ಮೊದಲ ಭಾರತೀಯ ದೈವಿಕ ವ್ಯಕ್ತಿ. ಆತನ ತನ್ನ ಜೀವನದುದ್ದಕ್ಕೂ ಭಾರತದಲ್ಲಿ ಜಾತಿರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದ.

ಭಾರತದಲ್ಲಿ ಬುದ್ಧರಾಜ್ಯ ನಿರ್ಮಾಣಕ್ಕಾಗಿ ಅಂಬೇಡ್ಕರ್ ಕೈಗೊಂಡ ಆಂದೋಲನವು ಶೂದ್ರರು, ದಲಿತರು ಮತ್ತು ಆದಿವಾಸಿಗಳ ಮೇಲೆ ಸಕರಾತ್ಮಕ ಪರಿಣಾಮ ಬೀರಿದೆ. ಆದರೆ, ಭಾಗವತ್ ಅವರಿಗೆ 1947ರಲ್ಲಿ ಭಾರತ ತೊರೆದ ಬ್ರಿಟಿಷರು ಸಮಸ್ಯೆಯಲ್ಲ, ಮುಸ್ಲಿಮರು.

ರಾಮ ಮಂದಿರ ಉದ್ಘಾಟನೆಯೇ ನಿಜವಾದ ಸ್ವಾತಂತ್ರ್ಯ ದಿನ ಎಂದು ಹೇಳುವುದಾದರೆ, ಭವಿಷ್ಯದ ಭಾರತದ ಆಧ್ಯಾತ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯು 'ರಾಮರಾಜ್ಯ'ದ ಸಮಯದಲ್ಲಿ ಇದ್ದಂತೆ ಬ್ರಾಹ್ಮಣರು ಮತ್ತು ಕ್ಷತ್ರಿಯರ ನಿಯಂತ್ರಣದಲ್ಲಿರಲಿದೆ.

ಬೌದ್ಧ ಪರಂಪರೆ

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಆಚರಿಸುವ ಭಾರತವು ಅಂಗೀಕರಿಸಿದ ಪ್ರಸ್ತುತ ಸಂವಿಧಾನವನ್ನು ಆರ್‌ಎಸ್‌ಎಸ್‌ ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂಬುದು ಅವರ ಹೇಳಿಕೆಯ ಅರ್ಥ. ಆದರೆ, ಈ ಎಲ್ಲ ಮೌಲ್ಯಗಳು ವಿಶ್ವದ ಎಲ್ಲಾ ಪ್ರಜಾಪ್ರಭುತ್ವ ಸಂವಿಧಾನಗಳಿಗೆ ಪ್ರಮುಖ ತತ್ವ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ.

ಅಂಬೇಡ್ಕರ್‌ ಪದೇ ಪದೇ ಈ ಒಂದು ಮಾತನ್ನು ಹೇಳುತ್ತಿದ್ದರು. ತಾವೂ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಬೌದ್ಧ ಪ್ರಾಚೀನ ಪರಂಪರೆಯಿಂದ ಪಡೆದ ತತ್ವಗಳಿಂದ ಪ್ರೇರಿತರಾಗಿದ್ದಾರೆಯೇ ಹೊರತು ನಿಜವಾದ ಪ್ರಾಚೀನ ಭಾರತೀಯ ಪರಂಪರೆಯನ್ನು ಪ್ರತಿನಿಧಿಸುವ ಹೊರತು ಫ್ರೆಂಚ್ ಕ್ರಾಂತಿಯಿಂದಲ್ಲ.

ಬೌದ್ಧ ಧರ್ಮದ ಪರಂಪರೆಯನ್ನು ನಿಜವಾದ ಭಾರತೀಯವೆಂದು ಆರ್‌ಎಸ್‌ಎಸ್‌ ಎಂದಿಗೂ ಒಪ್ಪಿಕೊಂಡಿಲ್ಲ. ಈಗ, ಭಾರತದ ಸ್ವಾತಂತ್ರ್ಯ ದಿನವು ರಾಮ ಮಂದಿರಕ್ಕೆ ಸಂಬಂಧಿಸಿದೆ ಮತ್ತು ಆ ದೇವಾಲಯವನ್ನು ನೆಲಸಮಗೊಳಿಸಿದ ಮುಸ್ಲಿಮರು ಮುಖ್ಯ ಶತ್ರುಗಳು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಇದರರ್ಥ 1950ರಲ್ಲಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಸ್ವೀಕಾರಾರ್ಹವಲ್ಲ. ಯಾಕೆಂದರೆ ಅದು ಮಾನವ ಸಾರ್ವತ್ರಿಕ ಸಮಾನತೆ ಮತ್ತು ಬುದ್ಧ ರಾಜ್ಯ ಸಿದ್ಧಾಂತದ ತತ್ವ ಆಧರಿಸಿದ್ದು.

ಹೊಸ ಸಮತಾವಾದಿ ಯುಗ

ರಾಮರಾಜ್ಯ ಸಿದ್ಧಾಂತವು ಮನು ಧರ್ಮ ಶಾಸ್ತ್ರದ ಸಂಹಿತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂಹಿತೆಯನ್ನು ಅಂಬೇಡ್ಕರ್ ಅವರು ಹೊಸ ಸಮಾನತೆಯ ಯುಗದ ಜನನದ ಸಂಕೇತವಾಗಿ ಸುಟ್ಟುಹಾಕಿದ್ದರು . ಜಾತಿ, ಮತ ಮತ್ತು ಜನಾಂಗವಿಲ್ಲದೆ ಮಾನವ ಸಮಾನತೆಯ ಕಲ್ಪನೆಯನ್ನು ಅವರು ಇನ್ನೂ ಜೀರ್ಣಿಸಿಕೊಳ್ಳುತ್ತಿಲ್ಲ.

2024 ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಎಲ್ಲಾ ವಿರೋಧ ಪಕ್ಷಗಳು ಈ ಭಯ ವ್ಯಕ್ತಪಡಿಸಿದವು. ಸಂವಿಧಾನಕ್ಕೆ ಅಪಾಯದ ಜೊತೆಗೆ ಒಬಿಸಿ / ಎಸ್ಸಿ / ಎಸ್ಟಿ ಮೀಸಲಾತಿಗೆ ರಕ್ಷಣೆಯ ಕಳವಳ ವ್ಯಕ್ತಪಡಿಸಿದ್ದವು.

ಆಧುನಿಕ ರಾಷ್ಟ್ರ-ರಾಜ್ಯಾಡಳಿತವನ್ನು ಶ್ರೀ ರಾಮನ ಆದರ್ಶದೊಂದಿಗೆ ನಡೆಸಿದರೆ ಆ ದಿನ ಒಬಿಸಿಗಳು, ಎಸ್ಸಿ ಮತ್ತು ಎಸ್ಟಿಗಳು ಸಮಾನ ನಾಗರಿಕರಾಗಿ ಬದುಕುವ ಹಕ್ಕನ್ನು ತ್ಯಜಿಸಬೇಕಾಗುತ್ತದೆ. ಅವರು ಶ್ರೀ ರಾಮನ ಕಾಲದಲ್ಲಿದ್ದಂತೆ ಶಂಭುಕರು, ಏಕಲವ್ಯರು ಮತ್ತು ಶೂರ್ಪಣಕರು ಕ್ರಮವಾಗಿ ಶೂದ್ರರು, ವನವಾಸಿಗಳು ಮತ್ತು ಚಂಡಾಲರು ಎಂಬ ಪೌರಾಣಿಕ ಸ್ಥಾನಮಾನ ಪಡೆಯಲಿದ್ದಾರೆ.

ನಿಜ ರೂಪ ಬಯಲು 

ಆರ್‌ಎಸ್‌ಎಸ್‌ ಮತ್ತು ಬಿಜೆಪಿಗಾಗಿ ಒಳಗೆ ಹಾಗೂ ಹೊರಗೆ ಕೆಲಸ ಮಾಡುವ ಶೂದ್ರರು, ದಲಿತರು ಮತ್ತು ಆದಿವಾಸಿಗಳು ಭಾಗವತ್ ಹೇಳುತ್ತಿರುವ ಮಾತುಗಳು, ಸಂಘದ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಎಲ್ಲಾ ಸಂಘಟನೆಗಳಿಗೆ ನಿಜ ದಿಕ್ಸೂಚಿ ಎಂಬುದನ್ನು ಅರಿತುಕೊಳ್ಳಬೇಕು. ಅವುಗಳಲ್ಲಿ ಬಿಜೆಪಿ ಪ್ರಮಖವಾದುದು.

1999-2004 ಮತ್ತು 2014-2025ರ ಆರೆಸ್ಸೆಸ್/ಬಿಜೆಪಿ ಆಡಳಿತದ 15 ವರ್ಷಗಳಲ್ಲಿ ಅವರು ಭಾರತ ಸೈದ್ಧಾಂತಿಕ ನೋಟಗಳನ್ನು ವಿಭಿನ್ನ ರೀತಿಯಲ್ಲಿ ಬದಲಾಯಿಸಿದ್ದಾರೆ. ಅದನ್ನೇ ದೇಶದೊಳಗೆ ಹಾಗೂ ವಿದೇಶಗಳಲ್ಲೂ ಪ್ರಸ್ತುತಪಡಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅಥವಾ ಇತರ ಯಾವುದೇ ಬಿಜೆಪಿ ನಾಯಕರು ಸಂವಿಧಾನ ಮತ್ತು ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಈಗ ಹೇಳುವುದನ್ನು ನಾವು ನಂಬಬೇಕಾಗಿಲ್ಲ. ಅಂತಿಮ ಅಧಿಕಾರ. ಭಾರತದ ಭವಿಷ್ಯ ಏನಾಗಲಿದೆ ಎಂಬುದನ್ನು ಅವರು ಭಾಗವತ್‌ ದೇಶಕ್ಕೆ ಮತ್ತು ಜಗತ್ತಿಗೆ ತಿಳಿ ಹೇಳಿಯಾಗಿದೆ.

ಭಾರತೀಯ ಸಾಮಾಜಿಕ-ರಾಜಕೀಯ ವ್ಯವಸ್ಥೆಯು ಬಹುತೇಕ ಆರೆಸ್ಸೆಸ್ ಕೇಂದ್ರ ನಾಯಕತ್ವದ ಕೈಸೇರಿಯಾಗಿದೆ. ಅಲ್ಲಿ ಶೂದ್ರ, ದಲಿತ ಅಥವಾ ಆದಿವಾಸಿಯನ್ನು ರಾಮರಾಜ್ಯದ ಕಲ್ಪನೆಯ ನಿಜವಾದ ಪ್ರತಿನಿಧಿ ಎಂದು ನಂಬುವುದಿಲ್ಲ. .

ಗಾಂಧಿಯ ರಾಮರಾಜ್ಯ

ಮಹಾತ್ಮ ಗಾಂಧಿಯವರು ರಾಮರಾಜ್ಯದ ಪರಿಕಲ್ಪನೆ ಬಳಸಿದರೂ, ಅದು ವಿಭಿನ್ನವಾಗಿತ್ತು. ಹಿಂದ್ ಸ್ವರಾಜ್‌ನಲ್ಲಿ ಅದರ ಕೆಲವು ವಿವರಣೆಗಳನ್ನು ಕಂಡುಕೊಳ್ಳಬಹುದು.

ಆಧುನಿಕ ರಾಮರಾಜ್ಯದಲ್ಲಿ ಅವರು ಅಸ್ಪೃಶ್ಯತೆಯ ಪಿಡುಗನ್ನು ಪರಿಹರಿಸಲು ಪ್ರಯತ್ನಿಸಿದ್ದರು. ಆದಾಗ್ಯೂ, ವರ್ಣ ವ್ಯವಸ್ಥೆಯು ಮಾನವರ ಕರ್ಮ ಆಧಾರದಲ್ಲೇ ಮುಂದುವರಿಯಬೇಕೆಂದು ಅವರು ಬಯಸಿದ್ದರು. ಹೀಗಾಗಿಯೇ ಅಂಬೇಡ್ಕರ್ ಅವರು ಗಾಂಧಿವಾದಿ ರಾಮರಾಜ್ಯದ ಮಾದರಿಗೆ ಸಹಮತ ಕೊಟ್ಟಿರಲಿಲ್ಲ.

ಆರೆಸ್ಸೆಸ್ ಹೇಳುವ ರಾಮರಾಜ್ಯದ ಕಲ್ಪನೆಯು ಮನು ಧರ್ಮ ಶಾಸ್ತ್ರದ ಜಾತಿ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಅಡಕಗೊಳಿಸಲಾಗಿದೆ.

ಆರ್‌ಎಸ್‌ಎಸ್‌ ತನ್ನ ರಾಮರಾಜ್ಯದ ಕಲ್ಪನೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಲ್ಲ. ಆದರೆ ಅದುಕಳೆದ 40 ವರ್ಷಗಳಿಂದ ಪ್ರಚಾರದ ಮೂಲಕ ಸಾಧಿಸಿದೆ. ಈ ಪ್ರಚಾರ ಗಾಂಧಿವಾದಿ ಚಳುವಳಿಗಿಂತಲೂ ಹೆಚ್ಚು ಪರಿಣಾಮ ಬೀರಿದೆ.

ರಾಮ ಮಂದಿರ ಪ್ರತಿಷ್ಠಾಪನೆಯನ್ನು ಸ್ವಾತಂತ್ರ್ಯದ ಕಲ್ಪನೆಗೆ ಸಂಪರ್ಕಿಸುವ ಮೂಲಕ ಭಾಗವತ್ ಅವರು ಆರ್‌ಎಸ್‌ಎಸ್‌ ಮಾದರಿಯ ರಾಮರಾಜ್ಯ ಭವಿಷ್ಯದಲ್ಲಿ ಅಳವಡಿಸುವುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಬ್ರಾಹ್ಮಣ-ಕ್ಷತ್ರಿಯ ಆಡಳಿತವು ಬನಿಯಾ ಏಕಸ್ವಾಮ್ಯ ಬಂಡವಾಳದ ಬೆಂಬಲ ಪಡೆದುಕೊಂಡಿದೆ. ಕಳೆದ 10 ವರ್ಷಗಳಲ್ಲಿ ಈ ಸಂಬಂಧವು ಆಳವೂರಿ ನಿಂತಿದೆ.

ಇದು ನಿಜಕ್ಕೂ ಭಯಾನಕ ಯೋಜನೆ.

Tags:    

Similar News