ಅಪರಾಧಗಳಿಗೆ 'ಜಾಮೀನು ನೀಡಿಕೆ ನಿಯಮ' ಆಗಿರಬೇಕು: ಸುಪ್ರೀಂ ಕೋರ್ಟ್

Update: 2024-08-13 08:15 GMT

ಹೊಸದಿಲ್ಲಿ: ಯುಎಪಿಎ(ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಂತಹ ವಿಶೇಷ ಕಾಯಿದೆಗಳ ಅಡಿಯಲ್ಲಿರುವ ಅಪರಾಧಗಳಿಗೂ ‘ಜಾಮೀನು ನೀಡಿಕೆ ನಿಯಮ, ವಿಶೇಷ ಪ್ರಸಂಗಗಳಲ್ಲಿ ಮಾತ್ರ ಸೆರೆಮನೆ’ ಎಂಬ ತತ್ವ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಭಯೋತ್ಪಾದನೆ ವಿರೋಧಿ ಕಾನೂನಿನಡಿಯಲ್ಲಿ ಆರೋಪಿಯೊಬ್ಬರಿಗೆ ಜಾಮೀನು ನೀಡಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಅರ್ಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ನಿರಾಕರಿಸಿದರೆ, ಅದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ. 

ಜಲಾಲುದ್ದೀನ್ ಖಾನ್ ಎಂಬುವರು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಿಗೆ ಮನೆ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿದ್ದರು ಎಂದು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 

ಭಯೋತ್ಪಾದನೆ ಮತ್ತು ಹಿಂಸಾಚಾರದ ಉದ್ದೇಶದಿಂದ ಕ್ರಿಮಿನಲ್ ಸಂಚು ರೂಪಿಸಲಾಗಿದೆ. ಇದರಿಂದ ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುತ್ತದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿತ್ತು.

ʻಪ್ರಾಸಿಕ್ಯೂಷನ್‌ನ ಆರೋಪಗಳು ತುಂಬಾ ಗಂಭೀರವಾಗಿರಬಹುದು. ಆದರೆ, ಕಾನೂನಿನ ಪ್ರಕಾರ ಜಾಮೀನು ನೀಡಿಕೆಯನ್ನು ಪರಿಗಣಿಸು ವುದು ನ್ಯಾಯಾಲಯದ ಕರ್ತವ್ಯ. ಜಾಮೀನು ನೀಡಿಕೆ ಒಂದು ನಿಯಮ; ಸೆರೆಮನೆ ಒಂದು ಅಪವಾದ ಎನ್ನುವುದು ವಿಶೇಷ ಕಾನೂನುಗಳಿಗೂ ಅನ್ವಯಿಸುತ್ತದೆ. ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿದರೆ, ಅದು ವಿಧಿ 21 ರ ಅಡಿಯಲ್ಲಿ ಖಾತರಿಪಡಿಸಿದ ಹಕ್ಕುಗಳ ಉಲ್ಲಂಘನೆ ಆಗುತ್ತದೆ,ʼ ಎಂದು ಪೀಠ ಹೇಳಿದೆ.

2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಂದರ್ಭದಲ್ಲಿ ಗೊಂದಲ ಉಂಟುಮಾಡುವ ಆರೋಪಿಗಳ ಯೋಜನೆ ಬಗ್ಗೆ ಬಿಹಾರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.ಆರೋಪಿಗಳು ಪಟ್ನಾದ ಫುಲ್ವಾರಿ ಶರೀಫ್ ನಲ್ಲಿರುವ ಅಹ್ಮದ್ ಪ್ಯಾಲೇಸಿನಲ್ಲಿ ಬಾಡಿಗೆಗೆ ವಸತಿ ಪಡೆದು, ತರಬೇತಿ ನೀಡಲು ಮತ್ತು ಕ್ರಿಮಿನಲ್ ಪಿತೂರಿ ಸಭೆ ನಡೆಸಲು ಬಳಸಿಕೊಂಡರು ಎಂದು ಎನ್‌ಐಎ ದೂರಿತ್ತು. ಖಾನ್‌ ಅವರನ್ನು ಪೊಲೀಸರು ಜುಲೈ 11, 2022 ರಂದು ಬಂಧಿಸಿದ್ದರು. 

Tags:    

Similar News