ಔಷಧ ತಪಾಸಣೆಗೆ ಅಧಿಕಾರಿಗಳೇ ಇಲ್ಲ: ಕೆಮ್ಮಿನ ಸಿರಪ್ ದುರಂತದಿಂದ ಬಯಲಾದ ಔಷಧ ನಿಯಂತ್ರಣ ಬಿಕ್ಕಟ್ಟು

ರಾಜ್ಯ ಔಷಧ ನಿಯಂತ್ರಣ ಇಲಾಖೆಗಳು ಮತ್ತು ಸಿ.ಡಿ..ಎಸ್.ಸಿ.ಓ ದಶಕಗಳಿಂದ ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಭ್ರಷ್ಟಾಚಾರ, ಕಳಪೆ ಮೂಲಸೌಕರ್ಯದಿಂದ ತುಂಬಿ ತುಳುಕುತ್ತಿದೆ; ಇಲ್ಲಿ ಖಾಲಿ ಇರುವ ಔಷಧ ನಿಯಂತ್ರಕರ ಹುದ್ದೆಗಳೇ ಶೇ.60ಕ್ಕೂ ಅಧಿಕ.

Update: 2025-10-10 00:30 GMT
ಅಕ್ಟೋಬರ್ ತಿಂಗಳ ಮೊದಲ ವಾರ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಕೋಲ್ಡರಿಫ್ ಕೆಮ್ಮಿನ ಸಿರಪ್ ಸರಬರಾಜು ಮಾಡಿದ ಆರೋಪದ ಮೇರೆಗೆ ಸಂಸ್ಥೆಯ ಕಚೇರಿಗೆ ಬೀಗ ಜಡಿಯುತ್ತಿರುವ ಅಧಿಕಾರಿಗಳು. ವಿಷಪೂರಿತ ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಛಿಂದ್ವಾರದಲ್ಲಿ 14 ಮಕ್ಕಳು ಮೂತ್ರಪಿಂಡದ ವೈಫಲ್ಯದಿಂದ ಮೃತಪಟ್ಟಿರುವ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಸಲು ಮಧ್ಯ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ.
Click the Play button to listen to article

ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಹದಿನೇಳು ಮಂದಿ ಮಕ್ಕಳು ತಮಿಳು ನಾಡಿನಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್ ಕುಡಿದು ಮೃತಪಟ್ಟಿರುವುದು ಕೇವಲ ಒಂದು ಪ್ರತ್ಯೇಕ ಪ್ರಕರಣವೆಂದು ಭಾವಿಸಬೇಕಾಗಿಲ್ಲ. ಬದಲಾಗಿ ಅದು ಭಾರತದ ದುರ್ಬಲ ಔಷಧ ನಿಯಂತ್ರಣ ವ್ಯವಸ್ಥೆಯ ಒಂದು ಉದಾಹರಣೆ ಮಾತ್ರ.

ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿ.ಡಿ.ಎಸ್.ಸಿ.ಓ) ಮತ್ತು ಭಾರತದಾದ್ಯಂತ ಇರುವ ಔಷಧ ನಿಯಂತ್ರಣ ಇಲಾಖೆಗಳು ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ. ಅಲ್ಲಿ ಸಿಬ್ಬಂದಿ ಇಲ್ಲ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಔಷಧ ತಪಾಸಣೆ ಮಾಡುವ ಮೂಲಸೌಕರ್ಯಗಳು ಅನೇಕ ವರ್ಷಗಳಿಂದ ಬಳಕೆಯಾಗಿಲ್ಲ, ಕೆಲವಂತೂ ಕಾಲಕ್ಕೆ ತಕ್ಕಂತೆ ನವೀಕರಣ ಹೊಂದಿಲ್ಲ.

ಸಂಸದೀಯ ಸಮಿತಿಗಳ ನಿರಂತರ ಎಚ್ಚರಿಕೆಗಳ ನಡುವೆಯೂ ಶೇ.60ರಷ್ಟು ಔಷಧ ನಿಯಂತ್ರಕರ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ನೂರಾರು ಜಿಲ್ಲೆಗಳಲ್ಲಿ ಸರಿಯಾದ ಕಣ್ಗಾವಲು ಇಡಲು ಸಾಧ್ಯವಾಗುತ್ತಿಲ್ಲ.

ದಶಕ ಕಳೆದರೂ ಭರ್ತಿಯಾಗದ ಹುದ್ದೆಗಳು

“ಕಳೆದ ಹಲವು ವರ್ಷಗಳಿಂದೀಚೆಗೆ ಭಾರತದಾದ್ಯಂತ ಔಷಧ ನಿಯಂತ್ರಕರ ಸಂಖ್ಯೆ ತೀರಾ ಕಡಿಮೆ. ಕೇಂದ್ರ ಮತ್ತು ರಾಜ್ಯ ಮಟ್ಟದ ಮೂಲ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಮಾಷೇಲ್ಕರ್ ಸಮಿತಿ 2003ರಲ್ಲಿ ಶಿಫಾರಸು ಮಾಡಿದ್ದರೂ ಹೆಚ್ಚಿನ ರಾಜ್ಯಗಳು ಈಗಲೂ ಆ ವಿಚಾರದಲ್ಲಿ ಹಿಂದಕ್ಕೆ ಬಿದ್ದಿವೆ. ಬಿಕ್ಕಟ್ಟು ತೀವ್ರವಾಗಿದ್ದರೂ ಕೂಡ ದಶಕಗಳ ನಂತರವೂ ನಾವು ಸ್ಪಂದಿಸುವಲ್ಲಿ ವಿಫಲರಾಗಿದ್ದೇವೆ,” ಎಂದು ಭಾರತದ ಮಾಜಿ ಉಪ ಔಷಧ ನಿಯಂತ್ರಕ ಡಾ.ಡಿ.ರಾಯ್ ಅವರು ‘ಫೆಡರಲ್’ಗೆ ತಿಳಿಸಿದ್ದಾರೆ.

ದೇಶದ ಅತ್ಯುನ್ನತ ಔಷಧ ನಿಯಂತ್ರಣ ಸಂಸ್ಥೆಯಾಗಿರುವ ಸಿ.ಡಿ.ಎಸ್.ಸಿ.ಓ ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ ತನಗೆ ಮಂಜೂರು ಮಾಡಿದ ಔಷಧ ನಿಯಂತ್ರಕರ ಹುದ್ದೆಗಳ ಪೈಕಿ ಶೇ.40ರಷ್ಟು ಖಾಲಿ ಇದ್ದರೂ ಅದೇ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ ಎಂದು ಮೂಲಗಳು ‘ದಿ ಫೆಡರಲ್’ಗೆ ತಿಳಿಸಿವೆ.

ಈ ಸಂಬಂಧ ರಾಸಾಯನಿಕ ಮತ್ತು ರಸಗೊಬ್ಬರಗಳ ಸಂಸದೀಯ ಸ್ಥಾಯಿ ಸಮಿತಿ ಸದಸ್ಯ ಎಂ.ಎಸ್.ತರಣಿವೆಂಡನ್ ಅವರು ಪದೇ ಪದೇ ಎಚ್ಚರಿಕೆ ನೀಡಿದರೂ ಕೇಂದ್ರ ಸರ್ಕಾರ ಖಾಲಿ ಇರುವ ನೂರಾರು ಹುದ್ದೆಗಳನ್ನು ಭರ್ತಿ ಮಾಡಲು ತಲೆಯೇ ಕೆಡಿಸಿಕೊಳ್ಳುತ್ತಿಲ್ಲ ಎಂದು ಈ ಮೂಲಗಳು ಹೇಳಿವೆ.

“ಇದೊಂದು ರಾಷ್ಟ್ರೀಯ ಕಳವಳದ ಸಂಗತಿ ಎಂದು ಸಮಿತಿಯು ಕಳೆದ ಡಿಸೆಂಬರ್ ತಿಂಗಳಿನಲ್ಲಿಯೇ ತಿಳಿಸಿತ್ತು. ಒಟ್ಟು ಹುದ್ದೆಗಳ ಪೈಕಿ ಕೇವಲ 504 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಅದೂ ದೇಶದ 750 ಜಿಲ್ಲೆಗಳಿಗೆ. ಅಂದರೆ ಒಂದೂವರೆ ಜಿಲ್ಲೆಗೆ ಒಂದು ಅಧಿಕಾರಿ!” ಎಂದು ತರಣೀವೆಂಡನ್ ತಿಳಿಸುತ್ತಾರೆ.

ಕೇಂದ್ರ ಸರ್ಕಾರವು ಕಳೆದ ವರ್ಷ ಭರ್ತಿ ಮಾಡಿದ್ದು ಕೇವಲ 49 ಹುದ್ದೆಗಳನ್ನು. ಉಳಿದ 200 ಹುದ್ದೆಗಳು ಇನ್ನೂ ಖಾಲಿ ಉಳಿದಿವೆ ಎಂದು ಅವರು ಹೇಳಿದರು.

ಗುಣಮಟ್ಟದೊಂದಿಗೆ ರಾಜಿ

ಇರುವ ಕೆಲವೇ ಕೆಲವು ಔಷಧ ನಿಯಂತ್ರಕರು ಸಮಯ ಮೀರಿ ಕೆಲಸ ಮಾಡಬೇಕಾಗಿದೆ. ಸಾವಿರಾರು ಔಷಧ ತಯಾರಿಕಾ ಘಟಕಗಳನ್ನು ತಪಾಸಣೆ ಮಾಡಬೇಕು. ಇದರಿಂದಾಗಿ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಇದು ನಿಶ್ಚಿತವಾಗಿ ಔಷಧಗಳ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಕಳಪೆ ಗುಣಮಟ್ಟದ ಅಥವಾ ಕಲಬೆರಕೆ ಔಷಧಿಗಳು ಸುಲಭವಾಗಿ ಪತ್ತೆಯಾಗದೆ ಸಾರ್ವಜನಿಕರನ್ನು ತಲುಪಲು ಅವಕಾಶವಾಗಬಹುದು. ಇದು ಕೆಲವೊಮ್ಮೆ ಪ್ರಾಣಾಂತಿಕವೂ ಆಗಬಹುದು ಎಂದು ತಜ್ಞರು ಹೇಳುತ್ತಾರೆ.

ಸಿ.ಡಿ.ಎಸ್.ಸಿ.ಓ ಮಿತಿಗಳು ಏನು ಎಂಬುದು ಎಲ್ಲರಿಗೂ ತಿಳಿದಿರುವ ಕಾರಣ ಹಲವಾರು ರಾಜ್ಯಗಳಲ್ಲಿ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. ಅದರಿಂದ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುವ ಸ್ಥಿತಿ ನಿರ್ಮಾಣವಾಗಿದೆ.

ತಮಿಳು ನಾಡಿನಲ್ಲಿ ಕಳೆದ ವರ್ಷದ ಜೂನ್ ತಿಂಗಳಿನಿಂದ ಔಷಧ ನಿಯಂತ್ರಣ ಕೇಂದ್ರಕ್ಕೆ ಮುಖ್ಯಸ್ಥರೇ ಇಲ್ಲ. ಅಷ್ಟಾದರೂ ಅದು 365 ಔಷಧ ತಯಾರಿಕಾ ಘಟಕಗಳ ಮೇಲ್ವಿಚಾರಣೆ ನಡೆಸಬೇಕು. ಸಾವಿರಾರು ಫಾರ್ಮಸಿಗಳು, ಸಗಟು ಮಾರಾಟಗಾರರು ಮತ್ತು ರಕ್ತ ನಿಧಿಗಳ ತಪಾಸಣೆ ನಡೆಸಬೇಕು. ಅಧಿಕಾರಶಾಹಿಯ ವಿಳಂಬ ನೀತಿ, ಭ್ರಷ್ಟಾಚಾರ ಮತ್ತು ಸಮಯಕ್ಕೆ ಸರಿಯಾಗಿ ಅಧಿಕಾರಿಗಳಿಗೆ ಬಡ್ತಿ ನೀಡದೇ ಇರುವಲ್ಲಿ ಸರ್ಕಾರದ ವೈಫಲ್ಯದಿಂದಾಗಿ ಈ ಇಲಾಖೆಯು ಮುಖ್ಯಸ್ಥರಿಲ್ಲದೆ ಉಳಿದಿದೆ.

ಕೇವಲ ತಮಿಳು ನಾಡು ರಾಜ್ಯವೊಂದರಲ್ಲೇ ಮಂಜೂರಾಗಿರುವ 25 ಸಹಾಯಕ ನಿರ್ದೇಶಕರ ಹುದ್ದೆಗಳಲ್ಲಿ ಎರಡು ಖಾಲಿ ಉಳಿದಿವೆ. ಜೊತೆಗೆ ಹತ್ತು ಔಷಧ ನಿಯಂತ್ರಕರ ಹುದ್ದೆಗಳೂ ಖಾಲಿಯಾಗಿವೆ.

ಬಳಕೆಯಾಗದ ಪ್ರಯೋಗಾಲಯಗಳು

ಭಾರತದಲ್ಲಿನ ಔಷಧ ನಿಯಂತ್ರಣ ಹೇಗೆ ನಡೆಯುತ್ತಿದೆ ಎಂದು ಕಾನೂನು ಸಂಶೋಧಕರಾದ ಶ್ರೀ ಅಗ್ನಿಹೋತ್ರಿ ಮತ್ತು ಸುಮತಿ ಚಂದ್ರಶೇಖರನ್ ಅವರು 2019ರಲ್ಲಿ ಒಂದು ವರದಿಯನ್ನು ನೀಡಿದ್ದರು. ಅದರ ಪ್ರಕಾರ ಅನೇಕ ರಾಜ್ಯಗಳು ತಮ್ಮ ಪರೀಕ್ಷಾ ಪ್ರಯೋಗಾಲಯಗಳನ್ನು ಬಳಕೆಯೇ ಮಾಡುತ್ತಿಲ್ಲ. ಉತ್ತರಾಖಂಡವು ವಾರ್ಷಿಕವಾಗಿ 750 ಮಾದರಿ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿದ್ದರೂ ಏಪ್ರಿಲ್ 2015ರ ಮತ್ತು ಜನವರಿ 2019ರ ನಡುವೆ ಕೇವಲ 226 ಮಾದರಿಗಳನ್ನು ಮಾತ್ರ ಪರೀಕ್ಷಿಸಿದೆ.

ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯಂತ ಢಾಳಾಗಿ ಕಾಣಿಸಿಕೊಂಡಿರುವ ಸಾಂಸ್ಥಿಕ ದೌರ್ಬಲ್ಯದಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಭ್ರಷ್ಟಾಚಾರ, ಅಧಿಕಾರಶಾಹಿಯ ವಿಳಂಬ ನೀತಿ ಮತ್ತು ಸಿಬ್ಬಂದಿಯ ಕೊರತೆಯ ಕಾರಣದಿಂದಾಗಿ ಭಾರತದಾದ್ಯಂತ ಅಮಾಯಕರು ಬಲಿಯಾಗುತ್ತಿದ್ದಾರೆ ಮತ್ತು ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತಿದೆ.

Tags:    

Similar News