ಬದ್ಲಾಪುರ್ ಹಿಂಸಾಚಾರ| ಇಂಟರ್ನೆಟ್ ಸ್ಥಗಿತ, ಶಾಲೆಗಳು ಬಂದ್
ಐಪಿಎಸ್ ಅಧಿಕಾರಿ ಆರ್ತಿ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಆದೇಶಿಸಿರುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಹಿರಿಯ ವಕೀಲ ಉಜ್ವಲ್ ನಿಕಮ್ ನೇಮಕಗೊಂಡಿದ್ದಾರೆ.;
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಶಿಶುವಿಹಾರದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿಭಟನೆ ನಂತರ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಬಹುತೇಕ ಶಾಲೆಗಳನ್ನು ಮುಚ್ಚಲಾಗಿದೆ.
ಮಂಗಳವಾರ ಪ್ರತಿಭಟನೆ ವೇಳೆ ಬದ್ಲಾಪುರ ರೈಲು ನಿಲ್ದಾಣ ಮತ್ತು ಪಟ್ಟಣದ ಇತರ ಭಾಗಗಳಲ್ಲಿ ಕಲ್ಲುತೂರಾಟ ನಡೆದಿದ್ದು, ಕನಿಷ್ಠ 17 ಪೊಲೀಸರು ಮತ್ತು ಎಂಟು ರೈಲ್ವೆ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಹಿಂಸಾಚಾರ: ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕಳೆದ ವಾರ ಶೌಚಾಲಯದಲ್ಲಿ ಶಾಲೆಯ ಶುಚೀಕರಣ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ ನಡೆದಿದೆ ಎಂಬ ಸುದ್ದಿಯಿಂದ ಕೆರಳಿದ ಸಾವಿರಾರು ಜನರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟಿಸಿದರು. ಬದ್ಲಾಪುರ ಮಂಗಳವಾರ ಅಕ್ಷರಶಃ ಸ್ತಬ್ಧವಾಯಿತು.
ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ, ಶಾಲೆ ಕಟ್ಟಡವನ್ನು ಧ್ವಂಸಗೊಳಿಸಿದರು. ಶಾಲೆ ಬದ್ಲಾಪುರದ ಬಿಜೆಪಿ ಮುಖಂಡರೊಬ್ಬರ ಸಂಬಂಧಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ರೈಲು ಸಂಚಾರಕ್ಕೆ ಹಳಿಗಳನ್ನು ತೆರವುಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಇಂಟರ್ನೆಟ್ ಸೇವೆ ಸ್ಥಗಿತ: ಪಟ್ಟಣದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ತಹಬದಿಗೆ ಬಂದ ಬಳಿಕ ಸಂಪರ್ಕ ಮರುಸ್ಥಾಪಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಸುಧಾಕರ ಪತ್ತಾರೆ ಬುಧವಾರ ತಿಳಿಸಿದ್ದಾರೆ. ಪಟ್ಟಣದ ಬಹುತೇಕ ಶಾಲೆಗಳು ಬುಧವಾರ ಮುಚ್ಚಿದ್ದವು.
ರೈಲ್ವೆ ನಿಲ್ದಾಣದಲ್ಲಿ ಹಿಂಸಾಚಾರದ ನಂತರ 32 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಆಯುಕ್ತ ರವೀಂದ್ರ ಶಿಶ್ವೆ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ಆಗಸ್ಟ್ 17 ರಂದು ಬಂಧಿಸಿದ್ದರು. ಶಾಲೆಯ ಆಡಳಿತ ಮಂಡಳಿಯು ಪ್ರಾಂಶುಪಾಲರು, ಶಿಕ್ಷಕಿ ಹಾಗೂ ಮಹಿಳಾ ಅಟೆಂಡರ್‌ನ್ನು ಅಮಾನತುಗೊಳಿಸಿದೆ. ಲೈಂಗಿಕ ದೌರ್ಜನ್ಯದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ತನಿಖೆಗೆ ಎಸ್‌ಐಟಿ: ಐಪಿಎಸ್ ಅಧಿಕಾರಿ ಆರ್ತಿ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಆದೇಶಿಸಿರುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ಹಿರಿಯ ವಕೀಲ ಉಜ್ವಲ್ ನಿಕಮ್, ಲೈಂಗಿಕ ದೌರ್ಜನ್ಯದ ನಂತರ ಎಫ್‌ಐಆರ್ ದಾಖಲಿಸುವಲ್ಲಿ ಪೊಲೀಸರ ಅತಿಯಾದ ವಿಳಂಬವನ್ನು ಖಂಡಿಸಿದ್ದಾರೆ.