ಬಾಬಾ ಸಿದ್ದೀಕ್ ಹತ್ಯೆ ಪ್ರಕರಣ: ಮಹಾರಾಷ್ಟ್ರದ ಅಕೋಲಾದಲ್ಲಿ ಗುಜರಾತ್ ವ್ಯಕ್ತಿ ಬಂಧನ

ಬಂಧನಕ್ಕೆ ಒಳಗಾಗಿರುವ ವೋಹ್ರಾ ಬ್ಯಾಂಕ್ ಖಾತೆಯನ್ನು ತೆರೆದು , ಬಂಧಿತ ಆರೋಪಿಗಳಾದ ಗುರ್ಮೈಲ್ ಸಿಂಗ್, ರೂಪೇಶ್ ಮೊಹೋಲ್ ಮತ್ತು ಹರೀಶ್ ಕುಮಾರ್ ಅವರ ಸಹೋದರ ನರೇಶ್ ಕುಮಾರ್ ಸಿಂಗ್‌ಗೆ ಹಣ ಕಳುಹಿಸುತ್ತಿದ್ದ.;

Update: 2024-11-17 13:25 GMT
ಪ್ರಾತಿನಿಧಿಕ ಚಿತ್ರ

ಬಾಬಾ ಸಿದ್ದಿಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಅಕೋಲಾ ಮೂಲದ ಗುಜರಾತ್ ನಿವಾಸಿಯನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಗುಜರಾತ್‌ನ ಆನಂದ್ ಜಿಲ್ಲೆಯ ಪೆಟ್ಲಾಡ್ ನಿವಾಸಿ ಸಲ್ಮಾನ್‌ಬಾಯ್‌ ಇಕ್ಬಾಲ್ಭಾಯ್ ವೋಹ್ರಾ ಎಂಬಾತನನ್ನು ಮಹಾನಗರದಿಂದ ಸುಮಾರು 565 ಕಿಲೋಮೀಟರ್ ದೂರದಲ್ಲಿರುವ ಅಕೋಲಾದ ಬಾಲಾಪುರದಿಂದ ಅಲ್ಲಿನ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

66 ವರ್ಷದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಅಕ್ಟೋಬರ್ 12ರಂದು ಬಾಂದ್ರಾ ಪೂರ್ವದ ನಿರ್ಮಲ್ ನಗರ ಪ್ರದೇಶದ ಅವರ ಪುತ್ರ ಶಾಸಕ ಜೀಶಾನ್ ಸಿದ್ದಿಕಿ ಕಚೇರಿ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪ್ರಕರಣದಲ್ಲಿ ಇದೀಗ ಬಂಧನಕ್ಕೆ ಒಳಗಾಗಿರುವ ವೋಹ್ರಾ ಬ್ಯಾಂಕ್ ಖಾತೆಯನ್ನು ತೆರೆದು , ಬಂಧಿತ ಆರೋಪಿಗಳಾದ ಗುರ್ಮೈಲ್ ಸಿಂಗ್, ರೂಪೇಶ್ ಮೊಹೋಲ್ ಮತ್ತು ಹರೀಶ್ ಕುಮಾರ್ ಅವರ ಸಹೋದರ ನರೇಶ್ ಕುಮಾರ್ ಸಿಂಗ್‌ಗೆ ಹಣ ಕಳುಹಿಸುತ್ತಿದ್ದ. ಅಪರಾಧಕ್ಕೆ ಸಂಬಂಧಿಸಿದ ಇತರರಿಗೂ ಆತ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹರಿಯಾಣದ ಗುರ್ಮೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಅವರನ್ನು ಕೊಲೆ ನಡೆದ ಕೂಡಲೇ ಸ್ಥಳದಿಂದ ಬಂಧಿಸಲಾಗಿತ್ತು. ಪೊಲೀಸರು ಇತ್ತೀಚೆಗೆ ಉತ್ತರ ಪ್ರದೇಶದ ಬಹ್ರೇಚ್‌ನಿಂದ ಶೂಟರ್ ಶಿವಕುಮಾರ್ ಗೌತಮ್ ಎಂಬುವನನ್ನು ಬಂಧಿಸಿದ ಬಳಿಕ ಪ್ರಕರಣದಲ್ಲಿ ಪೊಲೀಸರಿಗೆ ಹೆಚ್ಚಿನ ಮುನ್ನಡೆ ದೊರಕಿತ್ತು. ಅಕ್ಟೋಬರ್ 12ರಿಂದ ತಲೆಮರೆಸಿಕೊಂಡಿದ್ದ ಗೌತಮ್ ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

Tags:    

Similar News