ದೇಶದ್ರೋಹಿಗಳು ಸಮಾಜ ವಿಘಟಿಸುತ್ತಿದ್ದಾರೆ; ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷ ಟೀಕೆ
ವಡ್ಟಾಲ್ಡ್‌ನಲ್ಲಿ ಶ್ರೀ ಸ್ವಾಮಿನಾರಾಯಣ ದೇವಾಲಯದ 200 ನೇ ವಾರ್ಷಿಕೋತ್ಸವದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಏಕತೆ ಮತ್ತು ಸಮಗ್ರತೆ ಮುಖ್ಯ ಎಂದು ಹೇಳಿದರು.;
ಕೆಲವು ದೇಶವಿರೋಧಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಜನರು ಅವರ ಉದ್ದೇಶಗಳನ್ನು ಅರ್ಥಮಾಡಿಕೊಂಡು ಅವರನ್ನು ಸೋಲಿಸಲು ಒಗ್ಗೂಡುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ (ನವೆಂಬರ್ 11) ಹೇಳಿದರು.
ಗುಜರಾತ್‌ನ ಖೇಡಾ ಜಿಲ್ಲೆಯ ವಡ್ಟಾಲ್ಡ್‌ನಲ್ಲಿ ಶ್ರೀ ಸ್ವಾಮಿನಾರಾಯಣ ದೇವಾಲಯದ 200 ನೇ ವಾರ್ಷಿಕೋತ್ಸವದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಅವರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಏಕತೆ ಮತ್ತು ಸಮಗ್ರತೆ ಮುಖ್ಯ ಎಂದು ಹೇಳಿದರು.
"2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ನಾಗರಿಕರೊಳಗೆ ಏಕತೆ ಮತ್ತು ರಾಷ್ಟ್ರದ ಸಮಗ್ರತೆ ಮುಖ್ಯ. ದುರದೃಷ್ಟವಶಾತ್ ಕೆಲವರು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ಅಥವಾ ಅವರ ಸಂಕುಚಿತ ಮನೋಭಾವದಿಂದಾಗಿ ನಮ್ಮ ಸಮಾಜವನ್ನು ಜಾತಿ, ಧಾರ್ಮಿಕ, ಭಾಷಾ, ಪುರುಷರು-ಮಹಿಳೆಯರು, ಗ್ರಾಮ-ನಗರ ಎಂಬು ವ್ಯತ್ಯಾಸದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಪ್ರಧಾನಿ ಪ್ರತಿಪಕ್ಷಗಳಿಗೆ ಪರೋಕ್ಷ ಟೀಕೆ ಮಾಡಿದರು.
"ಈ ರಾಷ್ಟ್ರ ವಿರೋಧಿಗಳ ಉದ್ದೇಶಗಳ ಗಂಭೀರತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರನ್ನು ಸೋಲಿಸಲು ಒಗ್ಗೂಡಬೇಕಾಗಿದೆ" ಎಂದು ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಭಾಷಣದಲ್ಲಿ ಹೇಳಿದರು.
ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮೊದಲ ಪ್ರಮುಖ ಹೆಜ್ಜೆ ಆತ್ಮನಿರ್ಭರ (ಸ್ವಾವಲಂಬನೆ) ಎಂದು ಮೋದಿ ಹೇಳಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಜತೆಯಾಗುವಂತೆ ಸ್ವಾಮಿನಾರಾಯಣ ಪಂಥದ ಎಲ್ಲಾ ಸಂತರನ್ನು ಅವರು ವಿನಂತಿಸಿದರು.
ವಡ್ಡಲ್ ಸ್ವಾಮಿನಾರಾಯಣ ದೇವಸ್ಥಾನದೊಂದಿಗಿನ ತಮ್ಮ ಸಂಪರ್ಕ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಇದೆ ಎಂದು ಮೋದಿ ಈ ಸಂದರ್ಭದಲ್ಲಿ ಭಕ್ತರಿಗೆ ಮಾಹಿತಿ ನೀಡಿದರು. ವಡ್ಟಲ್‌ನ ಸ್ವಾಮಿನಾರಾಯಣ ದೇವಾಲಯದ 200 ವರ್ಷಗಳ ನೆನಪಿಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ನಾಣ್ಯ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
ಗುಲಾಮಗಿರಿಯಿಂದ ಮುಕ್ತಿ ಕೊಟ್ಟ ನಾರಾಯಣಸ್ವಾಮಿ
"ಗುಲಾಮಗಿರಿಯಿಂದಾಗಿ ನಮ್ಮ ದೇಶ ದುರ್ಬಲಗೊಂಡಾಗ ಮತ್ತು ಜನರು ಪರಿಸ್ಥಿತಿಗೆ ತಮ್ಮನ್ನು ತಾವೇ ದೂಷಿಸುತ್ತಿದ್ದ ಸಮಯದಲ್ಲಿ ಸ್ವಾಮಿನಾರಾಯಣ್ ಅಭಯ ನೀಡಿದರು. ಭಗವಾನ್ ಸ್ವಾಮಿನಾರಾಯಣ ಮತ್ತು ಇತರ ಸಂತರು ನಮ್ಮ ಸ್ವಾಭಿಮಾನ ಜಾಗೃತಗೊಳಿಸಿದರು, ನಮಗೆ ಹೊಸ ಆಧ್ಯಾತ್ಮಿಕ ಶಕ್ತಿ ನೀಡಿದರು," ಎಂದು ಮೋದಿ ಹೇಳಿದರು.
"ನಾನು ಭೇಟಿಯಾಗುವ ಹೆಚ್ಚಿನ ವಿಶ್ವ ನಾಯಕರು. ಭಾರತೀಯ ಯುವಕರು ತಮ್ಮ ದೇಶಗಳಿಗೆ ಬಂದು ಕೆಲಸ ಮಾಡಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ನಮ್ಮ ಯುವಕರು ಭಾರತ ಮತ್ತು ವಿಶ್ವದ ಅಗತ್ಯಗಳನ್ನು ಪೂರೈಸಲು ಸಮರ್ಥರಾಗಿದ್ದಾರೆ" ಎಂದು ಮೋದಿ ಹೇಳಿದರು.
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ತಮ್ಮ ಸರ್ಕಾರವು "ವಿಕಾಸ್ ಭಿ ವಿರಾಸತ್ ಭಿ" (ಪರಂಪರೆಯ ಸಂರಕ್ಷಣೆಯೊಂದಿಗೆ ಅಭಿವೃದ್ಧಿ) ಮಂತ್ರವನ್ನು ನಂಬುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮುಂದಿನ ವರ್ಷ ಜನವರಿ ಮತ್ತು ಫೆಬ್ರವರಿ ನಡುವೆ ನಡೆಯಲಿರುವ ಕುಂಭಮೇಳವು "ಪೂರ್ಣ ಕುಂಭ" ಆಗಿದ್ದು, ಇದನ್ನು 12 ವರ್ಷಗಳ ಅಂತರದ ನಂತರ ಆಚರಿಸಲಾಗುವುದು ಎಂದು ಅವರು ಹೇಳಿದರು.
"ನಿಮ್ಮ ದೇವಾಲಯಗಳು ಪ್ರಪಂಚದಾದ್ಯಂತ ಇವೆ. ನಿಮ್ಮ ದೇವಾಲಯಗಳ ಮೂಲಕ ಈ ಕುಂಭಮೇಳದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಕುಂಭಮೇಳದ ಮಹತ್ವ ಮತ್ತು ಅದನ್ನು ಏಕೆ ಆಚರಿಸಲಾಗುತ್ತಿದೆ ಎಂಬುದನ್ನು ನೀವು ವಿದೇಶಿಯರಿಗೆ ಅರ್ಥಮಾಡಿಕೊಳ್ಳಬೇಕು. ವಿಶ್ವದ ಪ್ರತಿಯೊಂದು ದೇವಾಲಯವು ಕುಂಭಮೇಳಕ್ಕೆ ಕನಿಷ್ಠ 100 ವಿದೇಶಿಯರನ್ನು ಕರೆತರಲು ಪ್ರಯತ್ನಿಸಬೇಕು. " ಎಂದು ಮೋದಿ ಕರೆ ಕೊಟ್ಟರು.