'ದುಬಾರಿ, ಅನಗತ್ಯ' ಔಷಧಗಳ ಅನುಮೋದನೆ: ಐಎಂಎ ಮೇಲೆ ಸುಪ್ರೀಂ ಕಿಡಿ
ಏಪ್ರಿಲ್ 23: ಸಂಘದ ಸದಸ್ಯರು ʻದುಬಾರಿ ಮತ್ತು ಅನಗತ್ಯʼ ಅಲೋಪಥಿ ಔಷಧಗಳನ್ನು ಅನುಮೋದಿಸುವುದಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದ ಮೇಲೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು.
ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಣೆ ಪ್ರಕರಣದ ವಿಚಾರಣೆ ಸಂದರ್ಭ ದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಐಎಂಎಗೆ ಪ್ರಶ್ನೆ: ʻನಿಮ್ಮ ವೈದ್ಯರು ಕೂಡ ಅಲೋಪಥಿ ಔಷಧಗಳನ್ನು ಅನುಮೋದಿಸುತ್ತಿದ್ದಾರೆ. ಅದು ನಡೆಯುತ್ತಿದ್ದಲ್ಲಿ, ನಾವು ನಮ್ಮ ಗಮನವನ್ನು ನಿಮ್ಮ ಮೇಲೆ ಏಕೆ ತಿರುಗಿಸಬಾರದು?ʼ ಎಂದು ಪೀಠ ಕೇಳಿತು.
ರೋಗಿಗಳಿಗೆ ಔಷಧ ಶಿಫಾರಸು ಮಾಡುವಾಗ ನಡೆಯುವ ʻಅನೈತಿಕ ಕೃತ್ಯʼಗಳ ಬಗ್ಗೆ ಐಎಂಎ ಎಚ್ಚರ ವಹಿಸಬೇಕು ಎಂದು ಐಎಂಎಗೆ ಹೇಳಿತು. ʻಐಎಂಎ ಅನೈತಿಕ ವರ್ತನೆಗೆ ಸಂಬಂಧಿಸಿದಂತೆ ಹಲವಾರು ದೂರುಗಳಿವೆʼ ಎಂದು ನ್ಯಾಯಾಲಯ ಹೇಳಿತು.
ಪರವಾನಗಿ ನೀಡುವ ಅಧಿಕಾರಿಗಳು: ಶಿಶುಗಳು, ಶಾಲೆಗೆ ಹೋಗುವ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಉತ್ಪನ್ನಗಳ ಜಾಹೀರಾತು ಗಳನ್ನು ಪ್ರಕಟಿಸುವ ಮೂಲಕ ಎಫ್‌ಎಂಸಿಜಿ ಕಂಪನಿಗಳು ಸಾರ್ವಜನಿಕರನ್ನು ವಂಚಿಸುತ್ತಿವೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾನಗಿ ಅಧಿಕಾರಿಗಳನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ತಪ್ಪು ದಾರಿಗೆಳೆಯುವ ಜಾಹೀರಾತುಗಳು: ಕಳೆದ ಮೂರು ವರ್ಷಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತು ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸಚಿವಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಕಂಪನಿಗಳು ಮತ್ತು ವೈದ್ಯರ ತಪ್ಪಿನ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಹೇಳಿದೆ.