ನವದೆಹಲಿ, ಮಾ.27- ಹದಿನೇಳನೇ ಲೋಕಸಭೆಯು 222 ಮಸೂದೆಗಳನ್ನು ಅಂಗೀಕರಿಸಿದೆ. ಇದರಲ್ಲಿ 45 ಮಸೂದೆಗಳನ್ನು ಸದನದಲ್ಲಿ ಮಂಡಿಸಿದ ಒಂದೇ ದಿನದಲ್ಲಿ ಅಂಗೀಕರಿಸಲಾಗಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ನಡೆಸಿದ ವಿಶ್ಲೇಷಣೆಯ ವರದಿ ಮಂಗಳವಾರ ಬಿಡುಗಡೆಯಾಗಿದೆ. 17 ನೇ ಲೋಕಸಭೆ ಮತ್ತು ಅದರ ಸದಸ್ಯರ ಕಾರ್ಯಕ್ಷಮತೆ ಮೇಲೆ ವರದಿ ಬೆಳಕು ಚೆಲ್ಲುತ್ತದೆ. ಮಸೂದೆಗಳಲ್ಲಿ ಕೆಲವು ವಿನಿಯೋಗ (ಖಾತೆ ಮೇಲಿನ ಮತ) ಮಸೂದೆ, ವಿನಿಯೋಗ ಮಸೂದೆ, ಜಮ್ಮು ಮತ್ತು ಕಾಶ್ಮೀರ ಉಪಯೋಜನೆ (ಸಂ.2) ಮಸೂದೆ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023 ಮತ್ತು ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ 2021 ಸೇರಿವೆ.
ವರದಿ ಪ್ರಕಾರ, 17 ನೇ ಲೋಕಸಭೆಯಲ್ಲಿ 240 ಮಸೂದೆಗಳನ್ನು ಮಂಡಿಸಲಾಗಿದ್ದು, ಅವುಗಳಲ್ಲಿ 222 ಅಂಗೀಕೃತ, 11ನ್ನು ಹಿಂಪಡೆಯಲಾಗಿದೆ ಮತ್ತು ಆರು ಬಾಕಿ ಉಳಿದಿವೆ. ಒಂದು ಮಸೂದೆಗೆ ಮಾತ್ರ ರಾಷ್ಟ್ರಪತಿಯವರ ಒಪ್ಪಿಗೆ ಸಿಕ್ಕಿದೆ. ಸದನದಲ್ಲಿ ಮಂಡಿಸಿದ ಒಂದೇ ದಿನದಲ್ಲಿ 45 ಮಸೂದೆಗಳನ್ನು ಅಂಗೀಕರಿ ಸಲಾಗಿದೆ.
273 ದಿನ ಅಧಿವೇಶನ ನಡೆದಿದ್ದು, ಸರಾಸರಿ 189 ರಲ್ಲಿ ಹಾಜರಾಗಿದ್ದಾರೆ. ಛತ್ತೀಸ್‌ಗಢದ ಸಂಸದರು ಅತ್ಯಧಿಕ ಸರಾಸರಿ ಹಾಜರಿ ಹೊಂದಿದ್ದು,11 ಸಂಸದರು 216 ದಿನ ಹಾಜರಾಗಿದ್ದರು. ವ್ಯತಿರಿಕ್ತವಾಗಿ, ಅರುಣಾಚಲ ಪ್ರದೇಶವು ಕಡಿಮೆ ಸರಾಸರಿ ಹಾಜರಿಯನ್ನು ಹೊಂದಿದೆ. ಅದರ ಇಬ್ಬರು ಸಂಸದರು ಕೇವಲ 127 ದಿನ ಹಾಜರಾಗಿದ್ದರು. ತೆಲುಗು ದೇಶಂ ಪಕ್ಷ (ಟಿಡಿಪಿ)ದ ಸದಸ್ಯರು 229 ದಿನ ಹಾಜರಾಗಿದ್ದರು. ಎಎಪಿ ಸದಸ್ಯರು ಕಡಿಮೆ ಹಾಜರಿ ಅಂದರೆ, ಸರಾಸರಿ 57 ದಿನ ಮಾತ್ರ ಪಾಲ್ಗೊಂಡಿದ್ದರು.
ಸಂಸದರು ಸರಾಸರಿ 165 ಪ್ರಶ್ನೆ ಕೇಳಿದ್ದಾರೆ. ಮಹಾರಾಷ್ಟ್ರದ ಸಂಸದರು ಸರಾಸರಿ ತಲಾ 315 ಪ್ರಶ್ನೆಗಳನ್ನು ಕೇಳಿದ್ದಾರೆ. ವ್ಯತಿರಿಕ್ತವಾಗಿ, ಮಣಿಪುರದ ಸಂಸದರು 25 ಪ್ರಶ್ನೆಗಳನ್ನು ಕೇಳಿದ್ದಾರೆ. ಎನ್‌ಸಿಪಿಯ ಐವರು ಸಂಸದರು ಸರಾಸರಿ 410 ಪ್ರಶ್ನೆ ಹಾಗೂ ಅಪ್ನಾ ದಳ (ಸೋನಿಲಾಲ್ ಬಣ) ಸರಾಸರಿ ತಲಾ ಐದು ಪ್ರಶ್ನೆ ಮಾತ್ರ ಕೇಳಿದ್ದಾರೆ. ಸಕ್ರಿಯವಾಗಿ ಭಾಗ ವಹಿಸಿದ 10 ಸಂಸದರನ್ನು ವರದಿ ಹೆಸರಿಸಿದೆ. 596 ಪ್ರಶ್ನೆಗಳನ್ನುಕೇಳಿದ ಬಿಜೆಪಿಯ ಬಾಳೂರುಘಟ್ಟ ಸಂಸದ ಸುಕಾಂತ ಮಜುಂದಾರ್ ಅಗ್ರಸ್ಥಾನದಲ್ಲಿದ್ದಾರೆ. ಹೆಚ್ಚಿನ ಪ್ರಶ್ನೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ ಮತ್ತು ರೈತರ ಕಲ್ಯಾಣ ಮತ್ತು ರೈಲ್ವೆ ಕುರಿತು ಇವೆ.