ಅಸ್ಸಾಂ: ಅದಾನಿ ವಿದ್ಯುತ್ ಯೋಜನೆಗೆಗಾಗಿ ಭರ್ಜರಿ ಕಾರ್ಯಾಚರಣೆ: 1600 ಕುಟುಂಬಗಳು ನಿರಾಶ್ರಿತ

ಪ್ರತಿ ಕುಟುಂಬಕ್ಕೆ ತಲಾ 5000 ರೂ. ನೀಡಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ ವಾಸ್ತವವಾಗಿ ಅಂತಹ ಪರಿಹಾರ ಕೊಟ್ಟಿರುವುದು ಬೆರಳೆಣಿಕೆ ಕುಟುಂಬಗಳಿಗೆ ಮಾತ್ರ ಎಂಬುದು ವಿರೋಧ ಪಕ್ಷಗಳ ಆರೋಪ;

Update: 2025-07-10 14:16 GMT
ಅಸ್ಸಾಂನ ಧುಬ್ರಿ ಜಿಲ್ಲೆಯ ಕಂದಾಯ ಗ್ರಾಮಗಳಾದ ಸಂತೋಷಪುರ, ಚರೌಬಾಖ್ರಾ ಮತ್ತು ಚಿರಕೂಟದಲ್ಲಿ ಸುಮಾರು 3500 ಬಿಗಾಸ್ ಭೂಮಿಯನ್ನು ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಗಿದೆ.

ಅಸ್ಸಾಂನ ಬಿಲಾಸಿಪಾರದಲ್ಲಿ ಮಂಗಳವಾರ ಬೆಳಗಿನ ಜಾವವೇ ಬುಲ್ಡೋಜರ್ ಗಳು ಏಕಾಏಕಿ ಕಾರ್ಯಾಚರಣೆ ನಡೆಸಿ 1600ಕ್ಕೂ ಹೆಚ್ಚಿನ ಕುಟುಂಬಗಳನ್ನು ಎತ್ತಂಗಡಿಮಾಡಿವೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಬೃಹತ್ ತೆರವು ಕಾರ್ಯಾಚರಣೆ ಇದಾಗಿದ್ದು ನಿರಾಶ್ರಿತರಾದ ಬಹುತೇಕ ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವು. ಹೀಗೆ ತೆರವುಗೊಳಿಸಿದ ಭೂಮಿಯಲ್ಲಿ ಅದಾನಿ ಸಮೂಹಕ್ಕೆ ಸೇರಿದ ಪ್ರಸ್ತಾಪಿತ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿದುಬಂದಿದೆ.

ಸುಮಾರು 2170 ಎಕರೆ (3500 ಬಿಗಾಸ್ ಭೂಮಿ) ಸರ್ಕಾರಿ ಭೂಮಿಯನ್ನು ಈ ಮೂಲಕ ತೆರವುಗೊಳಿಸಲಾಗಿದೆ. ಧುಬ್ರಿ ಜಿಲ್ಲೆಯ ಕಂದಾಯ ಗ್ರಾಮಗಳಾದ ಸಂತೋಷ್ ಪುರ, ಚರೌಬಾಖ್ರಾ ಮತ್ತು ಚಿರಕೂಟ ಭಾಗ-1 ಮತ್ತು ಭಾಗ-2ರಲ್ಲಿ ಈ ಭಾರೀ ಕಾರ್ಯಾಚರಣೆ ನಡೆದಿದ್ದು ಪೊಲೀಸರು ಮತ್ತು ಅರೆಸೇನಾ ಪಡೆ ಸರ್ಪಗಾವಲು ಹಾಕಿತ್ತು.

ಈ ಭೂಮಿಯನ್ನು ತೆರವುಗೊಳಿಸಲಾಗುವುದು ಎಂದು ಈಗಾಗಲೇ ಅಧಿಕೃತ ನೋಟಿಸ್ ನೀಡಲಾಗಿತ್ತು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಶೇ.95ರಷ್ಟು ಕುಟುಂಬಗಳನ್ನು ಈಗಾಗಲೇ ಆ ಪ್ರದೇಶವನ್ನು ತೊರೆದು ಹೋಗಿದ್ದಾರೆ ಎಂದು ಅದು ಹೇಳಿದೆ.

ಪ್ರತಿಯೊಂದು ಕುಟುಂಬಕ್ಕೂ ಪುನರ್ವಸತಿಗಾಗಿ ತಲಾ 50000 ರೂ. ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಂತಾನಾ ಬೋರಾ ದೃಢಪಡಿಸಿದ್ದಾರೆ. ಆದರೆ ಕೆಲವೇ ಕೆಲವು ಕುಟುಂಬಗಳು ಈ ಪರಿಹಾರ ಮೊತ್ತವನ್ನು ಪಡೆದಿವೆ ಎಂಬುದು ಅಲ್ಲಿನ ನಿವಾಸಿಗಳು ಮತ್ತು ವಿರೋಧ ಪಕ್ಷದ ನಾಯಕರ ವಾದವಾಗಿದೆ.

10000 ಮಂದಿಗೆ ಕಾಯಂ ಉದ್ಯೋಗ: ಬಿಲಾಸಿಪಾರಾದ ಈ ಭೂಪ್ರದೇಶವು ಗೌರಂಗ್ ನದಿಗೆ ಹತ್ತಿರದಲ್ಲಿದೆ ಮತ್ತು ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿ ಯೋಜನೆಗಾಗಿ ಕಾಮಗಾರಿ ಕೆಲಸ ಆರಂಭವಾದರೆ 25,000 ಜನರಿಗೆ ಉದ್ಯೋಗ ಸಿಗಲಿದೆ ಮತ್ತು ಬಳಿಕ ಯೋಜನೆ ಆರಂಭದಿಂದ 10 ಸಾವಿರ ಮಂದಿಗೆ ಕಾಯಂ ಉದ್ಯೋಗ ಲಭ್ಯವಾಗುತ್ತದೆ ಎಂದು ಅಂದಾಜುಮಾಡಲಾಗಿದೆ.

ರಾಜ್ಯದಲ್ಲಿ 50000 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶದಿಂದ ಅದಾನಿ ಸಮೂಹದ ನಿರ್ದೇಶಕ ಜೀತ್ ಅದಾನಿ ಅವರು ಕಳೆದ ತಿಂಗಳು ಅಸ್ಸಾಂನ ಬಿಲಾಸಿಪಾರ ಮತ್ತು ಕೊಕ್ರಝಾರ್ ನ ಬಸ್ಬಾರಿಯಲ್ಲಿ ಎರಡು ನಿವೇಶನಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.

ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಅಡ್ವಾಂಟೇಜ್ ಅಸ್ಸಾಂ-2.0 ಸಮಾವೇಶದಲ್ಲಿ ಮುಖ್ಯಮಂತ್ರಿ ಹಿಮಂತಾ ಬಿಸ್ವಾಸ್ ಅವರ ಜೊತೆ ಉನ್ನತ ಮಟ್ಟದ ಚರ್ಚೆ ನಡೆದ ಫಲವಾಗಿ ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ.

ನಿರಾಶ್ರಿತರ ನಿರಾಶ ನೋಟ: ತೆರವು ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ನೋಟಿಸ್ ಗಳನ್ನು ನೀಡಲಾಗಿದ್ದರೂ ಸ್ಥಳದಲ್ಲಿ ಕೂಗಾಟ, ಪ್ರತಿರೋಧ, ರೋದನದ ದೃಶ್ಯ ಸಾಮಾನ್ಯವಾಗಿತ್ತು. ಹಿರಿಯ ಸದಸ್ಯರು ಮತ್ತು ಮಕ್ಕಳನ್ನು ಒಳಗೊಂಡ ಕುಟುಂಬಗಳು ಕೊನೆಯ ಕ್ಷಣದ ವರೆಗೂ ತಮ್ಮ ಮನೆಗಳಿಗೆ ಅಂಟಿಕೊಂಡಿದ್ದವು. ಅಂತಿಮವಾಗಿ ಯಾರಾದರೂ ಮಧ್ಯಪ್ರವೇಶ ಮಾಡುತ್ತಾರೆ, ತಮ್ಮ ಗುಡಿಸಲು ಉಳಿಯುತ್ತವೆ ಎಂಬುದು ಅವರ ಆಸೆಗೆ ಬೃಹತ್ ಗಾತ್ರದ ಬುಲ್ಡೋಜರ್ ಗಳು ತಣ್ಣೀರು ಎರೆಚಿದವು.

ಅನೇಕ ಕುಟುಂಬಗಳು ಈಗಾಗಲೇ ತಮ್ಮ ಮನೆಗಳನ್ನು ನೆಲಸಮ ಮಾಡಿ ಹೊರಟುಹೋಗಿದ್ದವು. ಉಳಿದವರಿಗೆ ಕೊನೆಯ ಕ್ಷಣದಲ್ಲಿ ಬಚಾವಾಗುವ ಆಸೆಯಿತ್ತು. ಅವರೆಲ್ಲರೂ ಬುಲ್ಡೋಜರ್ ಗಳ ನಿರ್ದಯ ಕಾರ್ಯಾಚರಣೆಯನ್ನು ನಿರಾಶೆಯಿಂದ ನೋಡಿದರು.

ರಾಯ್ಜೋರ್ ದಳದ ಮುಖ್ಯಸ್ಥ ಹಾಗೂ ಸ್ಥಳೀಯ ಸಿವಸಾಗರ ಶಾಸಕ ಅಖಿಲ್ ಗಗೋಯ್ ಅವರು ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ಅರ್ಧದಲ್ಲೇ ತಡೆದರು. ಇದರಿಂದಾಗಿ ಪ್ರತಿಭಟನೆಗಳು ನಡೆದವು. ಈ ಗದ್ದಲ-ಗಲಾಟೆಯಲ್ಲಿ ಭೂಮಿಯನ್ನು ಅಗೆಯವ ಎರಡು ಯಂತ್ರಗಳಿಗೆ ಹಾನಿಯಾಗಿವೆ. ಪ್ರತಿಭಟನೆ ತೀವ್ರವಾದಾಗ ಪೊಲೀಸರು ಲಾಠಿ ಬೀಸಿದರು. ಇದರಲ್ಲಿ ಅನೇಕರು ಗಾಯಗೊಂಡರು.

ಕನಿಷ್ಠ ಮಾನವ ಹಕ್ಕುಗಳನ್ನು ಕೂಡ ನಿವಾಸಿಗಳಿಗೆ ನೀಡಲಾಗಿಲ್ಲ ಎಂದು ಗಗೋಯ್ ಆರೋಪಿಸಿದ್ದು, ನಿರಾಶ್ರಿತ ಕುಟುಂಬಗಳ ಪುರ್ನವಸತಿಗಾಗಿ ತೆರವುಗೊಳಿಸಿದ ಜಾಗದಲ್ಲಿ ಕನಿಷ್ಠ 500 ಬಿಗಾಸ್ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳೀಯರ ಭೂಹಕ್ಕು

ಈ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾಸ್ ಶರ್ಮಾ, ‘ಅಕ್ರಮ ಬಾಂಗ್ಲಾದೇಶಿ ನಿವಾಸಿಗಳನ್ನು’ ತೆರವುಗೊಳಿಸುವ ತಮ್ಮ ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು. ಲಕಿಂಪುರ ಮತ್ತು ಇತರ ಜಿಲ್ಲೆಗಳಲ್ಲಿ ನಡೆದ ಇದೇ ರೀತಿಯ ತೆರವು ಕಾರ್ಯಾಚರಣೆಗಳನ್ನು ಉಲ್ಲೇಖಿಸಿದ ಅವರು, ಸ್ಥಳೀಯ ಸಮುದಾಯದ ಭೂಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಇಂತಹ ತೆರವು ಕಾರ್ಯಾಚರಣೆ ಅನಿವಾರ್ಯ ಎಂದಿದ್ದಾರೆ.

“350 ಅಕ್ರಮ ಬಾಂಗ್ಲಾದೇಶಿಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅದರ ಜವಾಬ್ದಾರಿಯನ್ನು ಅವರೇ ಹೊರಬೇಕಾಗುತ್ತದೆ” ಎಂದು ಹೇಳಿರುವ ಸಿಎಂ, ಇಂತಹ ಇನ್ನಷ್ಟು ಕಾರ್ಯಾಚರಣೆಗಳು ಇತರ ಭಾಗಗಳಲ್ಲೂ ಮುಂದುವರಿಯಲಿವೆ ಎಂದರು.

ತೆರವು ಕಾರ್ಯಾಚರಣೆಯನ್ನು ವಿರೋಧ ಪಕ್ಷಗಳ ನಾಯಕರು ಮತ್ತು ಬಲಪಂಥೀಯ ಗುಂಪುಗಳು ತೀವ್ರವಾಗಿ ಟೀಕಿಸಿವೆ. ಎಐಯುಡಿಎಫ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಮೌಲಾನಾ ಬದ್ರುದ್ದಿನ್ ಅಜ್ಮಲ್ ಅವರು ಇದನ್ನು ‘ಜನಾಂಗೀಯ ಮತ್ತು ಅಮಾನವೀಯ’ ಎಂದು ವಿಶ್ಲೇಷಿಸಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲಮಾಡುವ ದೃಷ್ಟಿಯಿಂದ ಅಲ್ಪಸಂಖ್ಯಾತ ಸಮುದಾಯಗಳನ್ನು ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದರು.

ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಬಲಿಪಶುಮಾಡಿದೆ ಎಂದು ಬಿಲಾಸಪಾರ ಪಶ್ಚಿಮ ಕ್ಷೇತ್ರದ ಶಾಸಕ ಸಮ್ಸುಲ್ ಹುದಾ ಅವರು ಆರೋಪಿಸಿದ್ದಾರೆ. “ತೆರವುಗೊಳಿಸುವ ವಿಚಾರದಲ್ಲಿ ಗುವಾಹಟಿ ಹೈಕೋರ್ಟ್ ಆದೇಶವಿದೆ. ಸರ್ಕಾರ ಅದನ್ನು ಪಾಲಿಸುತ್ತಿಲ್ಲ. ಕಾರ್ಯಾಚರಣೆಗೂ ಮೊದಲು ಡ್ರೋನ್ ಸಮೀಕ್ಷೆಯನ್ನು ನಡೆಸಲಾಗಿತ್ತು. ಹಾಗಿದ್ದೂ ಕಾನೂನಾತ್ಮಕ ದಾಖಲೆಗಳನ್ನು ಹೊಂದಿರುವ ಜನರನ್ನು ಬಲವಂತವಾಗಿ ತೆರವುಮಾಡಲಾಗಿದೆ” ಎಂದು ಅವರು ಟೀಕಿಸಿದರು.

ಕೇವಲ ಬೆರಳಣಿಕೆ ಕುಟುಂಬಗಳಿಗೆ ಮಾತ್ರ 50 ಸಾವಿರ ರೂ. ಪರಿಹಾರವನ್ನು ವಿತರಿಸಲಾಗಿದೆ. ಉಳಿದವರಿಗೆ ಯಾವ ನೆರವನ್ನೂ ಒದಗಿಸಲಾಗಿಲ್ಲ. ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ; ಇದು ಕೇವಲ ತೆರವು ಕಾರ್ಯಾಚರಣೆಯಲ್ಲ, ಅಲ್ಪಸಂಖ್ಯಾತರನ್ನು ಒಕ್ಕಲೆಬ್ಬಿಸುವ ಯೋಜಿತ ಕಾರ್ಯ ಎಂದು ಹುದಾ ಆರೋಪಿಸಿದ್ದಾರೆ.

ಕೈಗಾರಿಕೆಗಳಿಗಾಗಿ ಬುಲ್ಡೋಜರ್ ಗಳು ಭೂಮಿಯನ್ನು ತೆರವುಗೊಳಿಸುತ್ತಿದ್ದಂತೆ ಅಸ್ಸಾಂನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮಾನವೀಯತೆಯನ್ನು ಬಲಿಕೊಟ್ಟಿರುವುದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಬಿಲಾಸಿಪಾರ ಕಾರ್ಯಾಚರಣೆಯು ಬಲಪ್ರಯೋಗ ಮತ್ತು ಕ್ಷಿಪ್ರತೆಗೆ ಸಾಕ್ಷಿಯಾಗಿದೆ. ಇದು ಸಾವಿರಾರು ಜನರನ್ನು ಅನಿಶ್ಚಿತತೆಗೆ ದೂಡಿದೆ. ಅವರಿಗೀಗ ಸೂರಿಲ್ಲ. ಬಹುತೇಕರ ಪ್ರಶ್ನೆಗಳ ಉತ್ತರವೂ ಇಲ್ಲ.


Tags:    

Similar News