ಬೀದಿ ನಾಯಿಗಳನ್ನು ಹಿಡಿಯುವವರಿಗೆ ಅಡ್ಡಿಪಡಿಸಿದರೆ ಕ್ರಮ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ

ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು ಆದೇಶ ಹೊರಡಿಸಿದೆ.;

Update: 2025-08-11 10:44 GMT

ಸಾಂದರ್ಭಿಕ ಚಿತ್ರ

ಆರಂಭಿಕ ಹಂತದಲ್ಲಿ ಸುಮಾರು 5,000 ಬೀದಿನಾಯಿಗಳಿಗೆ ಆಶ್ರಯ ನೀಡುವಷ್ಟು ಸಾಮರ್ಥ್ಯವಿರುವ ಶೆಲ್ಟರ್‌ಗಳನ್ನು ನಿರ್ಮಿಸಬೇಕು ಎಂದು ಕೋರ್ಟ್​ ಆದೇಶಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬೀದಿನಾಯಿಗಳ ಸಮಸ್ಯೆ "ಅತ್ಯಂತ ಗಂಭೀರ" ಸ್ವರೂಪ ಪಡೆದಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ದೆಹಲಿಯ ಎಲ್ಲಾ ಪ್ರದೇಶಗಳಿಂದ ಬೀದಿನಾಯಿಗಳನ್ನು ತಕ್ಷಣವೇ ತೆರವುಗೊಳಿಸಿ, ಅವುಗಳನ್ನು ಶ್ವಾನ ಆಶ್ರಯ ತಾಣಗಳಿಗೆ (Dog Shelters) ಸ್ಥಳಾಂತರಿಸಬೇಕೆಂದು ಸೋಮವಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು, ಈ ಪ್ರಕ್ರಿಯೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

"ಸಾರ್ವಜನಿಕರ, ವಿಶೇಷವಾಗಿ ಶಿಶುಗಳು ಮತ್ತು ಚಿಕ್ಕ ಮಕ್ಕಳ ಹಿತದೃಷ್ಟಿಯಿಂದ ನಾವು ಈ ನಿರ್ದೇಶನಗಳನ್ನು ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಮಕ್ಕಳು ನಾಯಿ ಕಡಿತಕ್ಕೆ ತುತ್ತಾಗಿ ರೇಬೀಸ್‌ನಂತಹ ಮಾರಕ ಕಾಯಿಲೆಗೆ ಬಲಿಯಾಗಬಾರದು" ಎಂದು ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ನಾಯಿ ಕಡಿತದಿಂದ ವ್ಯಕ್ತಿಯೊಬ್ಬರಿಗೆ ರೇಬೀಸ್ ಬಂದಿರುವ ಕುರಿತ ಮಾಧ್ಯಮ ವರದಿಯನ್ನು ಆಧರಿಸಿ, ಸುಪ್ರೀಂ ಕೋರ್ಟ್ ಜುಲೈ 28ರಂದು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.

ಸುಪ್ರೀಂ ಕೋರ್ಟ್‌ನ ಪ್ರಮುಖ ನಿರ್ದೇಶನಗಳು

ಆರಂಭಿಕ ಹಂತದಲ್ಲಿ ಸುಮಾರು 5,000 ಬೀದಿನಾಯಿಗಳಿಗೆ ಆಶ್ರಯ ನೀಡುವಷ್ಟು ಸಾಮರ್ಥ್ಯವಿರುವ ಶೆಲ್ಟರ್‌ಗಳನ್ನು ನಿರ್ಮಿಸಬೇಕು. ಈ ಆಶ್ರಯ ತಾಣಗಳಲ್ಲಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ರೇಬೀಸ್ ವಿರುದ್ಧದ ಲಸಿಕೆಗಳನ್ನು ನೀಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಶೆಲ್ಟರ್‌ಗಳಿಗೆ ಸ್ಥಳಾಂತರಿಸಿದ ನಾಯಿಗಳನ್ನು ಯಾವುದೇ ಕಾರಣಕ್ಕೂ ಮರಳಿ ಬೀದಿ, ಕಾಲೋನಿ ಅಥವಾ ಸಾರ್ವಜನಿಕ ಸ್ಥಳಗಳಿಗೆ ಬಿಡಬಾರದು. ನಾಯಿ ಕಡಿತ ಪ್ರಕರಣಗಳ ಬಗ್ಗೆ ದೂರು ನೀಡಲು, ಒಂದು ವಾರದೊಳಗೆ ಒಂದು ಸಹಾಯವಾಣಿಯನ್ನು (helpline) ಸ್ಥಾಪಿಸಬೇಕು ಎಂದು ಕೋರ್ಟ್​ ಹೇಳಿದೆ.  

Tags:    

Similar News