"ಸಂತೋಷದ ದಿನ ದುರಂತವಾಯಿತು": ಆರ್‌ಸಿಬಿ ದುರಂತದ ಬಗ್ಗೆ ಕೊಹ್ಲಿ ಮೊದಲ ಪ್ರತಿಕ್ರಿಯೆ

ಆರ್‌ಸಿಬಿ ತಂಡವು 2025ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಸಂಭ್ರಮವನ್ನು ಆಚರಿಸಲು, ಜೂನ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು.;

Update: 2025-09-03 07:59 GMT

ವಿರಾಟ್ ಕೊಹ್ಲಿ

Click the Play button to listen to article

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025ರ ಚೊಚ್ಚಲ ಪ್ರಶಸ್ತಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ, ಭಾರತ ಮತ್ತು ಆರ್‌ಸಿಬಿಯ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. "ಜೂನ್ 4 ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲೇ ಅತ್ಯಂತ ಸಂತೋಷದ ದಿನವಾಗಬೇಕಿತ್ತು, ಆದರೆ ಅದು ದುರಂತವಾಗಿ ಮಾರ್ಪಟ್ಟಿತು" ಎಂದು ಅವರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ತಂಡವು 2025ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಸಂಭ್ರಮವನ್ನು ಆಚರಿಸಲು, ಜೂನ್ 4ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಕೊಹ್ಲಿಯ ಭಾವನಾತ್ಮಕ ಹೇಳಿಕೆ

ಆರ್‌ಸಿಬಿ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, ಕೊಹ್ಲಿ ಈ ರೀತಿ ಹೇಳಿದ್ದಾರೆ

"ಜೂನ್ 4ರ ದುರಂತದಂತಹ ಅನಿರೀಕ್ಷಿತ ಹೃದಯ ವಿದ್ರಾವಕ ಘಟನೆಯನ್ನು ಎದುರಿಸಲು ಬದುಕು ನಮ್ಮನ್ನು ಸಜ್ಜಾಗಿರಿಸಿರುವುದಿಲ್ಲ . ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದ ಕ್ಷಣವಾಗಬೇಕಿದ್ದ ದಿನ, ದುರಂತವಾಗಿ ಬದಲಾಯಿತು. ಆ ದಿನ ನಾವು ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟ ಈಗ ನಮ್ಮ ಕಥೆಯ ಭಾಗವಾಗಿದೆ. ನಾವೆಲ್ಲರೂ ಒಟ್ಟಾಗಿ ಕಾಳಜಿ, ಗೌರವ ಮತ್ತು ಜವಾಬ್ದಾರಿಯಿಂದ ಮುನ್ನಡೆಯುತ್ತೇವೆ". ಎಂದು ಬರೆದುಕೊಂಡಿದ್ದಾರೆ.

ತನಿಖೆ ಮತ್ತು ಆರ್‌ಸಿಬಿಯ ಕ್ರಮ

ಈ ದುರಂತದ ಬಗ್ಗೆ ತನಿಖೆ ನಡೆಸಿದ ಅಧಿಕೃತ ಸಮಿತಿಯು, ಸರಿಯಾದ ಅನುಮತಿಗಳಿಲ್ಲದೆ ಮತ್ತು ಆರ್‌ಸಿಬಿಯ ಸಾಮಾಜಿಕ ಮಾಧ್ಯಮದ ಆಹ್ವಾನದಿಂದಾಗಿ ವಿಪರೀತ ಜನಸಂದಣಿ ಸೇರಿದ್ದೇ ಈ ಅವಘಡಕ್ಕೆ ಕಾರಣ ಎಂದು ವರದಿ ನೀಡಿತ್ತು. ಪೊಲೀಸರು ಸಹ ತಮ್ಮ ಸಂಖ್ಯೆಗಿಂತ ಹೆಚ್ಚು ಜನರಿದ್ದರು ಎಂದು ಒಪ್ಪಿಕೊಂಡಿದ್ದಾರೆ.

ಆರ್‌ಸಿಬಿ ಫ್ರಾಂಚೈಸಿಯು ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಿಸಿದೆ. ಅಲ್ಲದೆ, "ಅರ್ಥಪೂರ್ಣ ಕ್ರಮ" ಕೈಗೊಳ್ಳುವ ಭರವಸೆ ನೀಡಿದೆ. 'ಆರ್‌ಸಿಬಿ ಕೇರ್ಸ್' ಎಂಬ ಪ್ರತಿಷ್ಠಾನ ಸ್ಥಾಪಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜನಸಂದಣಿ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲು ಕ್ರೀಡಾಂಗಣ ಪ್ರಾಧಿಕಾರ, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ.

Tags:    

Similar News