ಗುಜರಾತ್‌ನಲ್ಲಿ ಸೇತುವೆ ಕುಸಿತ: ಒಂಭತ್ತು ಮಂದಿ ಸಾವು, ಹಲವರಿಗೆ ಗಾಯ

ಸೇತುವೆಯ ಮೇಲಿದ್ದ ಐದು ವಾಹನಗಳು ನದಿಗೆ ಬಿದ್ದಿದ್ದು, ಅವುಗಳಲ್ಲಿ ಎರಡು ಟ್ರಕ್‌ಗಳು ಸಂಪೂರ್ಣವಾಗಿ ಮುಳುಗಿದ್ದರೆ, ಒಂದು ಟ್ಯಾಂಕರ್ ಅರ್ಧದಷ್ಟು ನೇತಾಡುವ ಸ್ಥಿತಿಯಲ್ಲಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.;

Update: 2025-07-09 06:56 GMT

ಸೇತುವೆ ಕುಸಿದು ಎರಡು ಟ್ರಕ್‌ಗಳು, ಒಂದು ಪಿಕಪ್ ವ್ಯಾನ್ ಮತ್ತು ಒಂದು ಮೋಟಾರ್ ಸೈಕಲ್ ನದಿಗೆ ಬಿದ್ದವು.

ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ಆನಂದ್ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಗಂಭೀರಾ ಸೇತುವೆ (Gambhira Bridge) ಕುಸಿದು ಭಾರಿ ದುರಂತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಒಂಭತ್ತು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸೇತುವೆಯ ಮೇಲಿದ್ದ ಐದು ವಾಹನಗಳು ನದಿಗೆ ಬಿದ್ದಿದ್ದು, ಅವುಗಳಲ್ಲಿ ಎರಡು ಟ್ರಕ್‌ಗಳು ಸಂಪೂರ್ಣವಾಗಿ ಮುಳುಗಿವೆ. ಒಂದು ಟ್ಯಾಂಕರ್ ಅರ್ಧದಷ್ಟು ನೇತಾಡುವ ಸ್ಥಿತಿಯಲ್ಲಿದೆ. ಈ ಘಟನೆ ಬುಧವಾರ ಬೆಳಿಗ್ಗೆ 7.30ಕ್ಕೆ ಪಾದ್ರಾ ತಾಲೂಕಿನ ಮುಜ್ಪುರ್ ಗ್ರಾಮದ ಬಳಿ ನಡೆದಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಅವರು ದುರಂತಕ್ಕೆ ಕಳವಲ ವ್ಯಕ್ತಪಡಿಸಿದ್ದಾರೆ.  ಇದು "ದುರದೃಷ್ಟಕರ".ಘಟನೆಯಲ್ಲಿ  ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಲು ವಡೋದರಾ ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ .

"ಆನಂದ್ ಮತ್ತು ವಡೋದರಾವನ್ನು ಸಂಪರ್ಕಿಸುವ ಗಂಭೀರಾ ಸೇತುವೆಯ 23 ಸ್ಪ್ಯಾನ್‌ಗಳಲ್ಲಿ ಒಂದು ಕುಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ  ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಲವರ ರಕ್ಷಣೆ

ಪಾದ್ರಾ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಚರಣ್ ಅವರು ಮಾಹಿತಿ ನೀಡಿ, ಇದುವರೆಗೆ ನಾಲ್ವರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಗುಜರಾತ್ ಮತ್ತು ಸೌರಾಷ್ಟ್ರದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಈ ಸೇತುವೆಯ ಕುಸಿತದಿಂದಾಗಿ ವಾಹನ ಸಂಚಾರಕ್ಕೆ ಭಾರಿ ಅಡಚಣೆಯುಂಟಾಗಿದೆ.

"ಮಹಿಸಾಗರ್ ನದಿಯ ಮೇಲಿನ ಸೇತುವೆಯ ಒಂದು ಭಾಗವು ಬೆಳಿಗ್ಗೆ 7.30ರ ಸುಮಾರಿಗೆ ಕುಸಿದು ಎರಡು ಟ್ರಕ್‌ಗಳು ಮತ್ತು ಎರಡು ವ್ಯಾನ್‌ಗಳು ಸೇರಿದಂತೆ ವಾಹನಗಳು ನದಿಗೆ ಬಿದ್ದವು. ನಾವು ಇದುವರೆಗೆ ನಾಲ್ಕು ಜನರನ್ನು ರಕ್ಷಿಸಿದ್ದೇವೆ" ಎಂದು ಚರಣ್ ಸ್ಪಷ್ಟಪಡಿಸಿದ್ದಾರೆ.


ಸ್ಥಳೀಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನದಿಯಲ್ಲಿ ಮುಳುಗಿರುವ ವಾಹನಗಳನ್ನು ಹೊರತೆಗೆಯುವ ಮತ್ತು ವಾಹನದ ಒಳಗೆ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿವೆ.

ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಹಾಜರಿದ್ದು, ಸೇತುವೆ ಕುಸಿತಕ್ಕೆ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಸೇತುವೆಯು ರಚನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿತ್ತು ಮತ್ತು ಮಳೆಗಾಲದಲ್ಲಿ ಹೊಂಡಗಳು ರೂಪುಗೊಂಡಿದ್ದವು. ಇವುಗಳನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಲಾಗುತ್ತಿತ್ತು ಎನ್ನಲಾಗಿದೆ. 

ಗಂಭೀರಾ ಸೇತುವೆ ಆನಂದ್ ಮತ್ತು ವಡೋದರಾ ನಡುವೆ ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ಸಹಾಯ ಮಾಡುವ ಪ್ರಮುಖ ಸೇತುವೆಯಾಗಿತ್ತು. ಈ ದುರ್ಘಟನೆ ಜೀವಹಾನಿಗೆ ಕಾರಣವಾಗುವುದಲ್ಲದೆ,  ಸಂಚಾರ ಅಡೆತಡೆಗಳಿಗೂ ಕಾರಣವಾಗಿದೆ.

Tags:    

Similar News