ಗುಜರಾತ್‌ನಲ್ಲಿ ನಡೆದ 7 ಪ್ರಮುಖ ವಿಮಾನ ದುರಂತಗಳು

ಮುಂಬೈಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಬೋಯಿಂಗ್ 737-200 ವಿಮಾನವು ಲ್ಯಾಂಡಿಗ್‌ ಆಗುವ ವೇಳೆ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 135 ಜನರಲ್ಲಿ 133 ಜನರು ಮೃತಪಟ್ಟಿದ್ದರು.;

Update: 2025-06-12 12:34 GMT

ಅಹ್ಮದಾಬಾದ್ ವಿಮಾನ ದುರಂತ 

ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಪ್ರಯಾಣಿಕರನ್ನು ಹೊತ್ತು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ.

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಿದ ತಕ್ಷಣ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿ 12 ಸಿಬ್ಬಂದಿ (ಇಬ್ಬರು ಪೈಲಟ್‌ಗಳು ಸೇರಿದಂತೆ) ಮತ್ತು 230 ಪ್ರಯಾಣಿಕರು ಸೇರಿದಂತೆ ಒಟ್ಟು 242 ಜನರಿದ್ದರು. ಗುರುರಾತ್‌ನಲ್ಲಿ ಈವರೆಗೆ ಸಂಭವಿಸಿದ ಪ್ರಮುಖ ಏರ್ ಕ್ರ್ಯಾಶ್‌ಗಳ ಪೈಕಿ ಏಳು ಪ್ರಮುಖ ಘಟನೆಗಳು ಇಲ್ಲಿವೆ. 

ಏರ್ ಇಂಡಿಯಾ ಫ್ಲೈಟ್ 171 ಕ್ರ್ಯಾಶ್ – ಅಹಮದಾಬಾದ್ (ಜೂನ್ 12, 2025)

ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನಿಂದ ಲಂಡನ್ ಗ್ವಾಟಿಕ್‌ ಹೊರಟಿತ್ತು. ಆದರೆ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೆಘಾನಿ ನಗರದ ವಸತಿ ಪ್ರದೇಶದಲ್ಲಿ ಈ ವಿಮಾನ ನೆಲಕ್ಕುರುಳಿದೆ. ವಿಮಾನದಲ್ಲಿ 244 ಜನರು (232 ಪ್ರಯಾಣಿಕರು ಮತ್ತು 12 ಸಿಬ್ಬಂದಿ) ಇದ್ದರು. ಈ ಘಟನೆ ಬೋಯಿಂಗ್ 787 ಮಾದರಿಯ ಮೊದಲ ಕ್ರ್ಯಾಶ್ ಇದಾಗಿದೆ. 

ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 113 – ಅಹಮದಾಬಾದ್ (ಅಕ್ಟೋಬರ್ 19, 1988)

ಮುಂಬೈಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಬೋಯಿಂಗ್ 737-200 ವಿಮಾನವು ಲ್ಯಾಂಡಿಗ್‌ ಆಗುವ ವೇಳೆ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 135 ಜನರಲ್ಲಿ 133 ಜನರು ಮೃತಪಟ್ಟಿದ್ದರು. 

ಗುಜರಾತ್ ಬೀಚ್‌ಕ್ರಾಫ್ಟ್ ಘಟನೆ – ಕಚ್ಚ್ (ಸೆಪ್ಟೆಂಬರ್ 19, 1965)

1965ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ಬಲವಂತ ರೈ ಮೆಹ್ತಾ ಅವರು ಪ್ರಯಾಣಿಸುತ್ತಿದ್ದ ನಾಗರಿಕ ಬೀಚ್‌ಕ್ರಾಫ್ಟ್ ಮಾಡೆಲ್‌ 18 ವಿಮಾನವನ್ನು ಪಾಕಿಸ್ತಾನದ ವಾಯುಪಡೆಯ F-86 ಸ್ಯಾಬರ್ ಜೆಟ್‌ ಕಚ್ಚ್ ಪ್ರದೇಶದಲ್ಲಿ ಹೊಡೆದು ಉರುಳಿಸಿತ್ತು. ಈ ದಾಳಿಯಲ್ಲಿ ಮುಖ್ಯಮಂತ್ರಿ, ಪತ್ನಿ ಮತ್ತು ಇತರ ಸಿಬ್ಬಂದಿಗಳೂ ಸೇರಿ ಒಟ್ಟು ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. 

ಭಾರತೀಯ ವಾಯುಪಡೆಯ AN-32 ಕಣ್ಮರೆ - ಅರೇಬಿಯನ್ ಸಮುದ್ರ (ಮಾರ್ಚ್ 25, 1986)

1986ರ ಮಾರ್ಚ್ 25ರಂದು, ಇಂಡಿಯನ್ ಎರ್‌ಫೋರ್ಸ್‌ನ ಆಂಟೋನೋವ್ An-32 ವಿಮಾನವು ಒಮಾನ್‌ನ ಮುಸ್ಕಟ್‌ನಿಂದ ಗುಜರಾತ್‌ನ ಜಾಮ್ನಗರ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಅರೆಬಿಯನ್ ಸಮುದ್ರದ ಮೇಲ್ಭಾಗದಲ್ಲಿ ಕಣ್ಮರೆಯಾಯಿತು. ಈ ವಿಮಾನದಲ್ಲಿ ಒಟ್ಟು ಏಳು ಸಿಬ್ಬಂದಿ ಇದ್ದರು. ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ವಿಮಾನ ಅಥವಾ ಅದರ ಅವಶೇಷಗಳು ಇಂದಿಗೂ ಪತ್ತೆಯಾಗಿಲ್ಲ.

ಜಾಗ್ವಾರ್ ಫೈಟರ್ ಜೆಟ್ ಅಪಘಾತ - ಜಾಮ್‌ನಗರ (ಏಪ್ರಿಲ್ 2, 2025)

ಭಾರತೀಯ ವಾಯುಪಡೆಯ ಜಾಗ್ವಾರ್ ಫೈಟರ್ ಜೆಟ್ ನಿಯಮಿತ ತರಬೇತಿ ಹಾಗೂ ಹಾರಾಟದ ಸಮಯದಲ್ಲಿ ಜಾಮ್‌ನಗರದಲ್ಲಿ ಪತನಗೊಂಡಿತ್ತು. ಈ ಘಟನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಪ್ರಾಣ ಕಳೆದುಕೊಂಡಿದ್ದರು. ಆದರೆ ಅವರ ಸಹ ಪೈಲಟ್ ಸುರಕ್ಷಿತವಾಗಿ ಹೊರ ಬರುವಲ್ಲಿ ಯಶಸ್ವಿಯಾಗಿದ್ದರು.

ಪತನ- ಅಮರೇಲಿ (ಏಪ್ರಿಲ್ 22, 2025)

ಅಮರೇಲಿ ಜಿಲ್ಲೆಯ ಶಾಸ್ತ್ರಿನಗರದ ವಸತಿ ಪ್ರದೇಶದಲ್ಲಿ ಎಪ್ರಿಲ್‌22 ರಂದು ಖಾಸಗಿ ಏವಿಯೇಷನ್ ಸಂಸ್ಥೆಯ ಒಂದು ತರಬೇತಿ ವಿಮಾನ ಪತನವಾಗಿತ್ತು.  ಪೈಲಟ್ ಮಾತ್ರವಿದ್ದ ಈ ವಿಮಾನವು  ವಸತಿ ಪ್ರದೇಶದ ಭೂಮಿಗೆ ಬಿದ್ದಿತ್ತು. ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದರು. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೆಹ್ಸಾಣಾ ಜಿಲ್ಲೆಯಲ್ಲಿ ತರಬೇತಿ ವಿಮಾನ ಅಪಘಾತ (ಮಾರ್ಚ್ 31, 2025)

2025ರ ಮಾರ್ಚ್ 31ರಂದು ಗುಜರಾತ್‌ನ ಮೆಹ್ಸಾಣಾ ಜಿಲ್ಲೆಯ ಉಚರ್ಪಿ ಗ್ರಾಮದ ಬಳಿ ಖಾಸಗಿ ಏವಿಯೇಷನ್ ಅಕಾಡೆಮಿಯೊಂದರ ತರಬೇತಿ ವಿಮಾನವು ತಾಂತ್ರಿಕ ದೋಷದಿಂದಾಗಿ ಖಾಲಿ ಮೈದಾನದಲ್ಲಿ ಬಿದ್ದಿತ್ತು. ಈ ಅಪಘಾತದಲ್ಲಿ ತರಬೇತಿ ಪೈಲಟ್‌ಗೆ ಗಾಯವಾಗಿದೆ. ಅಪಘಾತಕ್ಕೆ ತಾಂತ್ರಿಕ ಸಮಸ್ಯೆಗಳೇ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News