ದೆಹಲಿ ಚುನಾವಣೆ: 60,000 ಸಿಬ್ಬಂದಿ ನಿಯೋಜನೆ

ದೆಹಲಿಯ ಎಲ್ಲ ಏಳು ಲೋಕಸಭೆ ಕ್ಷೇತ್ರಗಳಿಗೆ ಮೇ 25 ರಂದು ಮತದಾನ ನಡೆಯಲಿದೆ. ಪೂರ್ವ ದೆಹಲಿ, ನವದೆಹಲಿ, ಈಶಾನ್ಯ ದೆಹಲಿ, ವಾಯವ್ಯ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ಚಾಂದನಿ ಚೌಕ್ ಕ್ಷೇತ್ರಗಳಲ್ಲಿ ಒಟ್ಟು 1.52 ಕೋಟಿ ಮತದಾರರಿದ್ದಾರೆ.;

Update: 2024-05-23 13:07 GMT

ನವದೆಹಲಿ, ಮೇ 23- ದೆಹಲಿ ಪೊಲೀಸರು ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆಯನ್ನು ಶಾಂತಿಯುತ ವಾಗಿ ನಡೆಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಚುನಾವಣಾ ಕೋಶ) ಸಂಜಯ್ ಸೆಹ್ರಾವತ್ ತಿಳಿಸಿದ್ದಾರೆ. 

ಉತ್ತರಾಖಂಡ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ 51 ಕಂಪನಿ ಅರೆಸೇನಾ ಪಡೆ, 13,500 ಹೋಮ್ ಗಾರ್ಡ್‌ಗಳು, ಡ್ರೋನ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ 60,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದೆಹಲಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಿಗೆ ಮೇ 25 ರಂದು ಮತದಾನ ನಿಗದಿಯಾಗಿದೆ. ಪೂರ್ವ ದೆಹಲಿ, ನವದೆಹಲಿ, ಈಶಾನ್ಯ ದೆಹಲಿ, ವಾಯವ್ಯ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ಚಾಂದನಿ ಚೌಕ್ ಈ ಕ್ಷೇತ್ರಗಳು. ದೆಹಲಿಯಲ್ಲಿ 1.52 ಕೋಟಿ ಮತದಾರರಿದ್ದಾರೆ. 

ಮತದಾನದ ದಿನದಂದು ದೆಹಲಿಯಲ್ಲಿ 60,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಮತ್ತು ಅವರಲ್ಲಿ ಕನಿಷ್ಠ 33,000 ಮಂದಿ ಮತಗಟ್ಟೆಗಳ ರಕ್ಷಣೆಯಲ್ಲಿರುತ್ತಾರೆ. 2,628 ಮತಗಟ್ಟೆಗಳಿದ್ದು, ಅವುಗಳಲ್ಲಿ 429 ಸೂಕ್ಷ್ಮ. ಸೂಕ್ಷ್ಮ ಮತಗಟ್ಟೆಗಳಲ್ಲಿ ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾದೊಂದಿಗೆ ಹೆಚ್ಚುವರಿ ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿದರು. 

ಮತದಾನದ ದಿನ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಿಂದ ಸುಮಾರು 13,500 ಮತ್ತು ದೆಹಲಿಯಿಂದ 4,000 ಗೃಹರಕ್ಷಕ ರನ್ನು ನಿಯೋಜಿಸಲಾಗುತ್ತದೆ. ಜೊತೆಗೆ, ಸಂಚಾರ ಪೊಲೀಸರು, ದೆಹಲಿ ಪೊಲೀಸರ ಪಿಸಿಆರ್ ಘಟಕಗಳು ತಮ್ಮ ಪ್ರದೇಶಗಳಲ್ಲಿ ನಿಗಾ ಇಡುತ್ತವೆ. 

ಮತದಾನಕ್ಕೆ ಒಂದು ದಿನ ಮೊದಲೇ ದೆಹಲಿ ಗಡಿಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗುವುದು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದರು. ʻದೆಹಲಿಯು ಉತ್ತರ ಪ್ರದೇಶ ಮತ್ತು ಹರಿಯಾಣದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕಾನೂನುಬಾಹಿರ ಚಟುವಟಿಕೆಯನ್ನು ತಡೆಗಟ್ಟಲು ಅಧಿಕಾರಿಗಳು ಎರಡೂ ರಾಜ್ಯಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆʼ ಎಂದು ಅವರು ಹೇಳಿದರು.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ದೆಹಲಿ ಪೊಲೀಸರು ಧ್ವಜ ಮೆರವಣಿಗೆ, ಪಾದಯಾತ್ರೆ ನಡೆಸಿದ್ದಾರೆ. ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ, ವಲಯ 2) ಮಧುಪ್ ತಿವಾರಿ ಅವರು ಮೇ 22 ಮತ್ತು 23 ರಂದು ಆಗ್ನೇಯ ಮತ್ತು ದಕ್ಷಿಣ ಜಿಲ್ಲೆಯ ಜಾಮಿಯಾ, ಶಾಹೀನ್ ಬಾಗ್, ಓಖ್ಲಾ ಕೈಗಾರಿಕಾ ಪ್ರದೇಶ, ಅಂಬೇಡ್ಕರ್ ನಗರ, ಸಂಗಮ್ ವಿಹಾರ್, ಮಾಳವೀಯ ನಗರ ಮತ್ತು ತಿಗ್ರಿಯಲ್ಲಿ ಧ್ವಜ ಮೆರವಣಿಗೆ ನಡೆಸಿದರು.

ʻಎಲ್ಲ ಮತದಾರರಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಸೃಷ್ಟಿಸುವುದು ನಮ್ಮ ಆದ್ಯತೆ. ಯಾವುದೇ ಅಹಿತಕರ ಘಟನೆ ತಡೆಗಟ್ಟಲು ಮತ್ತು ಜನತೆಯಲ್ಲಿ ವಿಶ್ವಾಸ ಮೂಡಿಸಲು ಧ್ವಜ ಮೆರವಣಿಗೆ ನಡೆಸುವುದು ಸಮಗ್ರ ಕಾರ್ಯತಂತ್ರದ ಭಾಗʼ ಎಂದು ಎಸ್‌ಸಿಪಿ ತಿವಾರಿ ಹೇಳಿದರು.

ಜಂಟಿ ಪೊಲೀಸ್ ಕಮಿಷನರ್ (ದಕ್ಷಿಣ ವ್ಯಾಪ್ತಿ) ಎಸ್‌.ಕೆ .ಜೈನ್ ಮಾತನಾಡಿ, ʻಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಶಾಂತಿಯುತ ಮತ್ತು ಘಟನೆ ಮುಕ್ತ ಚುನಾವಣೆ ನಡೆಸಲು ಪೊಲೀಸ್‌ ತಂಡಗಳು ಶ್ರಮಿಸುತ್ತಿವೆ. ಚುನಾವಣೆ ಅವ್ಯವಹಾರ, ಪ್ರಚೋದನೆ ಅಥವಾ ಅನುಮಾನಾಸ್ಪದ ಅಥವಾ ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ 112ಕ್ಕೆ ಮಾಹಿತಿ ನೀಡಬಹುದು,ʼ ಎಂದು ತಿಳಿಸಿದರು.

Tags:    

Similar News