ಜೈಪುರದಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಗೆ ಟ್ರಕ್ ಡಿಕ್ಕಿ: 5 ಸಾವು, 37 ಮಂದಿಗೆ ಗಾಯ
ಟ್ಯಾಂಕರ್ ಅನ್ನು ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಲಾಗಿತ್ತು. ಹೀಗಾಗಿ ಆ ಸ್ಥಳದಲ್ಲಿ ನಿಲ್ಲಿಸಿದ್ದ ಹಲವಾರು ಟ್ರಕ್ಗಳಿಗೆ ಬೆಂಕಿ ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ
ರಾಜಸ್ಥಾನದ ಜೈಪುರ-ಅಜ್ಮೀರ್ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ರಾಸಾಯನಿಕ ತುಂಬಿದ ಟ್ಯಾಂಕರ್ಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಬೆಂಕಿಯಲ್ಲಿ ಕನಿಷ್ಠ ಐದು ಜನರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 37 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ (ಡಿಸೆಂಬರ್ 20) ತಿಳಿಸಿದ್ದಾರೆ.
ಸುಮಾರು 30 ಟ್ರಕ್ಗಳು ಮತ್ತು ಇತರ ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಸಿಎಂ ಭೇಟಿ
ಘಟನೆಯಲ್ಲಿ ಐವರು ಮೃತಪಟ್ಟಿದ್ದು, 37 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಗಾಯಾಳುಗಳನ್ನು ದಾಖಲಿಸಿರುವ ಎಸ್ಎಂಎಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಸರಿಯಾದ ಚಿಕಿತ್ಸೆ ಮತ್ತು ಇತರ ವ್ಯವಸ್ಥೆಗಳನ್ನು ನೀಡಲು ಅವರು ಅಧಿಕಾರಿಗಳು ಮತ್ತು ವೈದ್ಯರಿಗೆ ಸೂಚಿಸಿದ್ದಾರೆ.
"ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಬೆಂಕಿ ಘಟನೆಯಲ್ಲಿ ಸಾವುನೋವುಗಳ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ನಾನು ಎಸ್ಎಂಎಸ್ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರಿಗೆ ತಕ್ಷಣ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಗಾಯಗೊಂಡವರನ್ನು ಸರಿಯಾಗಿ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದ್ದೇನೆ" ಎಂದು ಅವರು ಹೇಳಿದರು.
ಭಾರೀ ಸ್ಫೋಟ; ಆರೋಗ್ಯ ಸಚಿವ ಖಿಮ್ಸರ್
ಗಂಭೀರ ಸುಟ್ಟಗಾಯ ರೋಗಿಗಳಿಗಾಗಿ ಆಸ್ಪತ್ರೆಯು 40 ಹಾಸಿಗೆಗಳ ಮತ್ತೊಂದು ವಾರ್ಡ್ ಅನ್ನು ಸಿದ್ಧಪಡಿಸಿದೆ. ಗಾಯಗೊಂಡವರಲ್ಲಿ ಹೆಚ್ಚಿನವರನ್ನು ಈಗಾಗಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಹೇಳಿದ್ದಾರೆ.
"ಗಂಭೀರ ಸುಟ್ಟಗಾಯಗಳ ವಾರ್ಡ್ನಲ್ಲಿ ಸುಮಾರು 5 ಹಾಸಿಗೆಗಳು ಉಳಿದಿವೆ. ನಾವು 40 ಹಾಸಿಗೆಗಳ ಮತ್ತೊಂದು ವಾರ್ಡ್ ಅನ್ನು ಸಿದ್ಧಪಡಿಸಿದ್ದೇವೆ. ಪೊಲೀಸ್ ತಂಡ ಮತ್ತು ಆಡಳಿತ ತಂಡ ಅಲ್ಲಿ ಸಕ್ರಿಯವಾಗಿದೆ. ಗಾಯಗೊಂಡವರು ಎಸ್ಎಂಎಸ್ ಆಸ್ಪತ್ರೆಗೆ ಬರಲು ಸಂಚಾರ ಕಾರಿಡಾರ್ ಸಂಪೂರ್ಣವಾಗಿ ತೆರೆದಿದೆ. ಪೊಲೀಸರು ಮತ್ತು ಆಡಳಿತದ ಪ್ರಕಾರ, ಗರಿಷ್ಠ ಜನರು ಈಗಾಗಲೇ ಆಸ್ಪತ್ರೆಗೆ ತಲುಪಿದ್ದಾರೆ. ಎಲ್ಪಿಜಿ ಕಂಟೇನರ್ನಲ್ಲಿ ಸ್ಫೋಟವು ಭಾರಿ ಪ್ರಮಾಣದಲ್ಲಿತ್ತು. ಪೆಟ್ರೋಲ್ ಪಂಪ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆಯೇ ಅಥವಾ ಇಲ್ಲವೇ ಎಂದು ನಮಗೆ ಖಚಿತವಿಲ್ಲ.
ಪ್ರದೇಶವೆಲ್ಲ ವ್ಯಾಪಿಸಿದ ಬೆಂಕಿ
ಭಂಕ್ರೋಟಾದ ಸ್ಟೇಷನ್ ಹೌಸ್ ಅಧಿಕಾರಿ ಮನೀಶ್ ಗುಪ್ತಾ ಮಾತನಾಡಿ, "ಬೆಂಕಿ ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿತ್ತು. ಅಗ್ನಿಶಾಮಕ ದಳದ ತಂಡಗಳಿಗೆ ಉರಿಯುತ್ತಿರುವ ವಾಹನಗಳ ಸಮೀಪ ಹೋಗಲು ಸಾಧ್ಯವಾಗಲಿಲ್ಲ. ಆ ಮೂರು ಪೆಟ್ರೋಲ್ ಪಂಪ್ಗಳು ಇದ್ದವು ಆದರೆ ಅದೃಷ್ಟವಶಾತ್ ಅವು ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.
25 ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. .
ಅಪಘಾತದಿಂದ ಸುಮಾರು 300 ಮೀಟರ್ ಹೆದ್ದಾರಿಯ ಮೇಲೆ ಪರಿಣಾಮ ಬೀರಿತು. ವಾಹನ ಸಂಚಾರ ನಿಲ್ಲಿಸಲಾಯಿತು. ಹೀಗಾಗಿ ವಾಹನ ದಟ್ಟಣೆ ಉಂಟಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.