151 ಜನಪ್ರತಿನಿಧಿಗಳ ಮೇಲೆ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಎಡಿಆರ್

ಎಡಿಆರ್‌ ವರದಿ ಪ್ರಕಾರ, ಬಿಜೆಪಿಯ 54 ಸಂಸದರು/ಶಾಸಕರ ಮೇಲೆ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಿವೆ. ಕಾಂಗ್ರೆಸ್ 23 ಮತ್ತು ಟಿಡಿಪಿಯ 17 ಜನಪ್ರತಿನಿಧಿಗಳ ಮೇಲೆ ಇಂಥ ಆರೋಪವಿದೆ.

Update: 2024-08-21 12:17 GMT
ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ದೆಹಲಿಯ ಏಮ್ಸ್‌ನಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು.

ಹೊಸದಿಲ್ಲಿ: 151 ಸಂಸದರು ಮತ್ತು ಶಾಸಕರು ಚುನಾವಣೆ ಪ್ರಮಾಣಪತ್ರದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಂಥ ಪ್ರಕರಣಗಳು ಹೆಚ್ಚು ಇವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್)‌ ವರದಿ ಹೇಳಿದೆ. 

ಎಡಿಆರ್‌ 2019 ಮತ್ತು 2024 ರ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಂಸದರು ಮತ್ತು ಶಾಸಕರು ಸಲ್ಲಿಸಿದ 4,809 ಪ್ರಮಾಣಪತ್ರಗಳಲ್ಲಿ 4,693 ನ್ನು ಪರಿಶೀಲಿಸಿದೆ. ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿರುವ 16 ಸಂಸದರು ಮತ್ತು 135 ಶಾಸಕರನ್ನು ಗುರುತಿಸಿದೆ. ಆರೋಪ ಎದುರಿಸುತ್ತಿರುವ 25 ಸಂಸದರು-ಶಾಸಕರು ಇರುವ ಪಶ್ಚಿಮ ಬಂಗಾಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ 21 ಮತ್ತು ಒಡಿಶಾ 17 ಇವೆ. 

ವರದಿ ಪ್ರಕಾರ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿ ರುವ 2 ಸಂಸದರು ಮತ್ತು 14 ಶಾಸಕರಿದ್ದಾರೆ. ಈ ಸೆಕ್ಷನ್‌ ಅಡಿ ಕನಿಷ್ಠ 10 ವರ್ಷ ಶಿಕ್ಷೆ ವಿಧಿಸಬಹುದು; ಶಿಕ್ಷೆಯನ್ನು ಜೀವಾವಧಿಗೆ ವಿಸ್ತರಿಸಬಹುದು.

ಆರೋಪಗಳು ಒಂದೇ ಬಲಿಪಶುವಿನ ವಿರುದ್ಧ ಪುನರಾವರ್ತಿತ ಅಪರಾಧವನ್ನು ಒಳಗೊಂಡಿದ್ದು, ಪ್ರಕರಣಗಳ ಗಂಭೀರತೆಯನ್ನು ಒತ್ತಿಹೇಳುತ್ತವೆ.

ಪಕ್ಷಗಳಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಸ್ಥಾನದಲ್ಲಿದೆ(54 ಸಂಸದರು-ಶಾಸಕರು). ನಂತರದ ಸ್ಥಾನದಲ್ಲಿ ಕಾಂಗ್ರೆಸ್ 23 ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) 17 ಇವೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನ ತಲಾ ಐವರು ಜನಪ್ರತಿನಿಧಿಗಳು ಅತ್ಯಾಚಾರ ಆರೋಪ ಎದುರಿಸು ತ್ತಿದ್ದಾರೆ.

ಇದನ್ನು ತಡೆಯಲು ಎಡಿಆರ್‌ ಹಲವು ಶಿಫಾರಸು ಮಾಡಿದೆ; ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ, ವಿಶೇಷವಾಗಿ ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧದ ಇತರ ಅಪರಾಧಗಳ ಆರೋಪ ಹೊತ್ತಿರುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬಾರದು.ಸಂಸದರು ಮತ್ತು ಶಾಸಕರ ವಿರುದ್ಧದ ಮೊಕದ್ದಮೆಗಳನ್ನು ಪತ್ತೆಹಚ್ಚಲು ಪೊಲೀಸರು ವೃತ್ತಿಪರವಾಗಿ, ಸಂಪೂರ್ಣ ತನಿಖೆ ನಡೆಸಬೇಕು ಎಂದು ಹೇಳಿದೆ. ಮತದಾರರು ಇಂತಹ ಆರೋಪ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಾರದು ಎಂದು ಒತ್ತಾಯಿಸಿದೆ. 

Tags:    

Similar News