Delhi Assembly : ದೆಹಲಿ ವಿಧಾನಸಭೆಯಿಂದ ಆತಿಶಿ ಸೇರಿ 15 ಆಪ್ ಶಾಸಕರ ಅಮಾನತು

Delhi Assembly : ಅಧಿವೇಶನ ಆರಂಭವಾಗುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಸದನವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಆಪ್ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.;

Update: 2025-02-25 10:04 GMT

ಆತಿಶಿ ಸೇರಿದಂತೆ ಆಪ್​ ನಾಯಕರು ಅಸೆಂಬ್ಲಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಸಿಎಜಿ(ಮಹಾಲೇಖಪಾಲ) ವರದಿ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಆಪ್ ಶಾಸಕರ ನಡುವೆ ಜಟಾಪಟಿ ನಡೆಯಿತು. ಕೊನೆಗೆ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕಿ ಆತಿಶಿ ಮರ್ಲೇನಾ ಸೇರಿದಂತೆ ಆಪ್‌ನ 12 ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ಸತತವಾಗಿ ಗಲಾಟೆ ನಡೆದ ಬಳಿಕ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು. ಅಧಿವೇಶನ ಆರಂಭವಾಗುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಸದನವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಆಪ್ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಹೀಗಾಗಿ ಸಕ್ಸೆನಾ ಅವರ ಭಾಷಣಕ್ಕೆ ಅಡ್ಡಿಯಾಯಿತು.

ಎಲ್ಲರೂ ಶಾಂತವಾಗಿರುವಂತೆ ಸ್ಪೀಕರ್ ಮನವಿ ಮಾಡಿದರೂ ಕೋಲಾಹಲ ಮುಂದುವರಿಯಿತು. ಕೊನೆಗೆ ಸ್ಪೀಕರ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಅಸೆಂಬ್ಲಿಯಿಂದ ಹೊರಕ್ಕೆ ಅಟ್ಟಿದರು.

ಅಮಾನತುಗೊಂಡ ಬಳಿಕವೂ ಆಪ್ ಶಾಸಕರು ವಿಧಾನಸಭೆ ಆವರಣದಲ್ಲಿ ಧರಣಿ ನಡೆಸಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆದುಹಾಕುವ ಮೂಲಕ ಅವರಿಗೆ ಬಿಜೆಪಿ ಅಗೌರವ ತೋರಿದೆ ಎಂದು ಆಪ್​ ನಾಯಕರು ಆರೋಪಿಸಿದರು.

" ಅಂಬೇಡ್ಕರ್ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನಿಜ ಬಣ್ಣ ಬಯಲು ಮಾಡಿದೆ. ಬಾಬಾ ಸಾಹೇಬ್ ಅವರ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡುವುದೇ ಅವರ ಪ್ರಯತ್ನ. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಯಥಾ ಸ್ಥಿತಿಯಲ್ಲಿ ಇರಿಸುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ" ಎಂದು ಮಾಜಿ ಸಿಎಂ ಆತಿಶಿ ಹೇಳಿದರು.

ಈ ಹಿಂದಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಕುರಿತಾದ 14 ಸಿಎಜಿ ವರದಿಗಳನ್ನು ಇಂದು ಅಥವಾ ನಾಳೆ ವಿಧಾನಸಭೆಯಲ್ಲಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿರುವಂತೆಯೇ ಈ ಹೈಡ್ರಾಮಾ ನಡೆದಿದೆ.

Tags:    

Similar News