ಕದನ ವಿರಾಮದ ಬಳಿಕ ಎಲ್ಲೆಡೆ ನೆಮ್ಮದಿ, ಕಾಶ್ಮೀರದ ಗಡಿ ಭಾಗದ ಜನರ ಸ್ಥಿತಿ ಇನ್ನೂ ಅತಂತ್ರ
A week after Operation Sindoor launch, Jammu struggles with 'new normal';
ಮೇ 11 ರಂದು ಆಪರೇಷನ್ ಸಿಂದೂರ್ ಅಡಿಯಲ್ಲಿ ಘೋಷಿಸಲಾದ ಕದನವು ವಿರಾಮಗೊಂಡಿತು ಹಾಗೂ ಭಾರತದ ಹೆಚ್ಚಿನ ಭಾಗಗಳಲ್ಲಿ ವೈಮಾನಿಕ ದಾಳಿ ಸೈರನ್‌ಗಳು ನಿಂತವು. ವಿದ್ಯುತ್ ಕಡಿತ ಸಮಸ್ಯೆಗಳು ಬಗೆಹರಿದು, ಜನಜೀವನ ಸಹಜ ಸ್ಥಿತಿಗೆ ಮರಳಿತು. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಂಘರ್ಷವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ದೃಢ ಸಂಕಲ್ಪ ಎಂದು ಹೇಳಿದರು. ಅಲ್ಲದೆ ಪರಿಸ್ಥಿತಿಯು 'ಸಹಜ ' ಎಂದು ಬಣ್ಣಿಸಿದರು.
ಇವೆಲ್ಲದರ ನಡುವೆ ಜಮ್ಮುವಿನ ಗಡಿ ಪ್ರದೇಶಗಳಾದ ಪೂಂಚ್ ಮತ್ತು ಮೆಂಧರ್‌ನಲ್ಲಿ ಪರಿಸ್ಥಿತಿ ಇನ್ನೂ ಅತಂತ್ರವಾಗಿದೆ. ಆಪರೇಷನ್ ಸಿಂದೂರ್ ಘೋಷಣೆಯ ನಂತರ ಪಾಕಿಸ್ತಾನದಿಂದ ನಡೆದ ಭಾರೀ ಫಿರಂಗಿ ದಾಳಿಯು ಡಜನ್‌ಗಟ್ಟಲೆ ಮನೆಗಳನ್ನು ಧ್ವಂಸಗೊಳಿಸಿದೆ. ಇದು ಸ್ಥಳೀಯ ನಿವಾಸಿಗಳಿಗೆ ಮತ್ತೊಂದು ಸುತ್ತಿನ ಸ್ಥಳಾಂತರಕ್ಕೆ ಕಾರಣವಾಗಿದೆ. ಬಾಧಿತ ಕುಟುಂಬಗಳು ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದು ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸಾಕಷ್ಟು ನಿವಾಸಿಗಳು ದಿಢೀರ್ ಸ್ಥಳಾಂತರದ ಕಷ್ಟವನ್ನು ವಿವರಿಸುತ್ತಿದ್ದಾರೆ.
ಇದರ ಹೊರತಾಗಿ, ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಶಾಲೆಗಳು ಮತ್ತು ಮಾರುಕಟ್ಟೆಗಳು ಪುನರಾರಂಭಗೊಂಡು ಜನಜೀವನ ನಿಧಾನವಾಗಿ ಸಹಜತೆಗೆ ಮರಳುತ್ತಿದೆ. ಜನರು ಎಚ್ಚರಿಕೆಯಿಂದ ಶಾಂತಿಯ ಪರಿಣಾಮವನ್ನು ಸ್ವೀಕರಿಸುತ್ತಿದ್ದಾರೆ.
ಅನೇಕ ಗಡಿ ಗ್ರಾಮಸ್ಥರಿಗೆ ಕದನ ವಿರಾಮವು ಕೇವಲ ತಾತ್ಕಾಲಿಕ ವಿರಾಮ. ಆಸ್ತಿಪಾಸ್ತಿ ಮತ್ತು ಜಾನುವಾರುಗಳ ನಷ್ಟ ಹಾಗೂ ಪದೇ ಪದೇ ಸ್ಥಳಾಂತರದ ಮಾನಸಿಕ ಆಘಾತದಿಂದ ಅವರು ಬಳಲುತ್ತಿದ್ದಾರೆ. ಬಂಕರ್‌ಗಳ ಕೊರತೆ ಮತ್ತು ಅಗತ್ಯ ಸೌಲಭ್ಯಗಳಿಲ್ಲದಿರುವ ಬಗ್ಗೆ ಅವರು ದೂರುತ್ತಿದ್ದು, ಪಾಕಿಸ್ತಾನದ ಕೃತ್ಯಗಳಿಗೆ ಸರ್ಕಾರ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ತಮ್ಮ ಸಂಕಷ್ಟವು ರಾಷ್ಟ್ರೀಯ ಮಟ್ಟದಲ್ಲಿ ಇತರ ಆಂತರಿಕ ಸ್ಥಳಾಂತರಗಳಿಗೆ ಸಿಗುವಷ್ಟು ಗಮನ ಪಡೆಯುತ್ತಿಲ್ಲ ಎಂಬ ಭಾವನೆ ಅವರಲ್ಲಿದೆ. ಒಟ್ಟಾರೆಯಾಗಿ, ಭಾರತ ರಾಷ್ಟ್ರೀಯ ಭದ್ರತೆಯನ್ನು ಚರ್ಚಿಸುತ್ತಿರುವಾಗ, ಗಡಿ ಪ್ರದೇಶದ ನಿವಾಸಿಗಳು ಪುನಶ್ಚೇತನದ ಕಷ್ಟವನ್ನು ಅನುಭವಿಸುತ್ತಿದ್ದಾರೆ.