ಮಂಡ್ಯ ಲೋಕಸಭಾ ಟಿಕೆಟ್‌ಗಾಗಿ ಸುಮಲತಾ-ಜೆಡಿಎಸ್ ಪೈಪೋಟಿ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಸುಮಲತಾ ಬಿಜೆಪಿ ಹೈಕಮಾಂಡ್ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಸಂಸದೆ ಸುಮಲತಾ ಅವರು ಬಿಜೆಪಿ ಹೈಕಮಾಂಡ್ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮಂಡ್ಯ ಕ್ಷೇತ್ರ ತಮ್ಮ ಕೈಬಿಟ್ಟು ಹೋಗುವ ಆತಂಕದಲ್ಲಿರುವ ಸಂಸದೆ ಸುಮಲತಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮಗೆ ಟಿಕೆಟ್ ನೀಡದಿದ್ದರೆ, ತಮ್ಮ ಬಳಿ ಬೇರೆ ಬೇರೆ ಆಯ್ಕೆಗಳಿವೆ ಎಂದು ಎಚ್ಚರಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಉಮೇದುವಾರಿಕೆಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಂತೆ ತೋರುತ್ತಿದೆ. ಹಳೇ ಮೈಸೂರು ಪ್ರಾಂತದ ಹಿಡಿತ ಸಾಧಿಸಲು ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತೋರುತ್ತಿದೆ. ನೀ ಕೊಡೆ ನಾ ಬಿಡೆ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ. ಮಂಡ್ಯ ಲೋಕಸಭಾ ಸ್ಥಾನ ತಮಗೇ ನೀಡುವಂತೆ ಸಂಸದೆ ಹಾಗೂ ಖ್ಯಾತ ಸಿನಿಮಾ ತಾರೆ ಸುಮಲತಾ ಪಟ್ಟು ಹಿಡಿದಿದ್ದಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರನ್ನೆದುರಿಸಿದ ಜೆಡಿಎಸ್ ಪಕ್ಷ ಹೇಗಾದರೂ ಸರಿ ಅವರಿಂದ ಆ ಸ್ಥಾನವನ್ನು ಕಿತ್ತುಕೊಳ್ಳಬೇಕೆಂದು ಹವಣಿಸುತ್ತಿದೆ. ಸುಮಲತಾ ಮತ್ತು ಜೆಡಿಎಸ್ ನಡುವೆ ಸಿಕ್ಕಿಕೊಂಡಿರುವ ಬಿಜೆಪಿ ಹೈಕಮಾಂಡ್ ದಿಕ್ಕುತೋಚದಂತಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮಂಡ್ಯ ಕ್ಷೇತ್ರ ಕೈಬಿಟ್ಟು ಹೋಗುವ ಆತಂಕದಲ್ಲಿರುವ ಸಂಸದೆ ಸುಮಲತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಜೆಡಿಎಸ್ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಮೈತ್ರಿ ನಡುವೆಯೂ ತಮ್ಮನ್ನೇ ಮೈತ್ರಿ ಅಭ್ಯರ್ಥಿಯಾಗಿಸಬೇಕೆಂದು ಅವರು ಬಿಜೆಪಿ ನಾಯಕರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಸುಮಲತಾ ಸಮೀಪವರ್ತಿಗಳು ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ. ತಮ್ಮ ಭೇಟಿಗೆ ಸಂಬಂಧಿಸಿದ ಛಾಯಾ ಚಿತ್ರಗಳನ್ನು ಸುಮಲತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
“ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಅವಕಾಶ ವಂಚಿತರಾಗಬಹುದು ಎಂಬ ಆತಂಕ ಸುಮಲತಾ ಅವರನ್ನು ಕಾಡುತ್ತಿದೆ. ಹಾಗಾಗಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಿದ್ದಾರೆ. ಕಮಲ ನಾಯಕರು ಇದಕ್ಕೆ ಮಣಿದ ಹಾಗೆ ತೋರುತ್ತಿದೆ” ಎಂದು ಹೆಸರು ಬಹಿರಂಗಪಡಿಸಲು ಬಯಸದ ಸುಮಲತಾ ಸಮೀಪವರ್ತಿಯೊಬ್ಬರು ಹೇಳಿದ್ದಾರೆ.
ಈ ನಡುವೆ ನಾಳೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಭಾವಿ ನಾಯಕ ಅಮಿತ್ ಶಾ ಮೈಸೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಅವರು ಬೆಂಗಳೂರಿಗೂ ಬರುವರೆಂದು ಬಿಜೆಪಿ ಮೂಲಗಳು ತಿಳಿಸಿದ್ದವು. ಬೆಂಗಳೂರಿನಲ್ಲಿ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿಯೂ ಇತ್ತು. ಆದರೆ ಅವರು ಸದ್ಯಕ್ಕೆ ತಮ್ಮ ಭೇಟಿಯನ್ನು ಮೈಸೂರಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಮಲತಾ ಅವರನ್ನು ಭೇಟಿಯಾಗುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.
ಅಕಸ್ಮಿಕವಾಗಿ ಮೈತ್ರಿಗೆ ಮಣಿದು, ಬಿಜೆಪಿ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಲ್ಲಿ ತಮಗೆ ಬೇರೆ ಆಯ್ಕೆಗಳಿವೆ. ಅದನ್ನು ಬಳಸಿಕೊಳ್ಳಲು ತಾವು ಹಿಂಜರಿಯುವುದಿಲ್ಲ. ಇದು ಮಂಡ್ಯದ ಜನತೆಯ ಅಭಿಮತ ಎಂದು ಸುಮಲತಾ ಬಿಜೆಪಿ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಪತ್ರಕರ್ತರೊಂದಿಗೆ ಮಾತನಾಡುತ್ತಾ “ಕೆಲವು ಕಾಂಗ್ರೆಸ್ ನಾಯಕರೂ ನನ್ನನ್ನು ಸಂಪರ್ಕಿಸುತ್ತಿದ್ದಾರೆ” ಎಂದು ತಮ್ಮ ಮುಂದಿನ ನಡೆಯ ಸುಳಿವನ್ನೂ ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದರು. ಮಂಡ್ಯ ಒಕ್ಕಲಿಗ ಪ್ರಾಬಲ್ಯದ ಲೋಕಸಭಾ ಕ್ಷೇತ್ರವಾಗಿದ್ದು, ಒಂದು ರೀತಿಯಲ್ಲಿ ಜೆಡಿಎಸ್‌ನ ಭದ್ರಕೋಟೆ ಎನ್ನಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಸರ್ವೋಚ್ಛ ನಾಯಕ ದೇವೇಗೌಡರ ಮೊಮ್ಮಗ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ಹಾಗೂ ಚಲನಚಿತ್ರ ನಟ ನಿಖಿಲ್ ಕುಮಾರಸ್ವಾಮಿ, ಸುಮಲತಾ ಅವರೆದುರು ಮಂಡಿಯೂರಬೇಕಾಯಿತು. 2018ಲ್ಲಿ ಮಂಡ್ಯದ ಏಳು ವಿಧಾನ ಸಭಾ ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ಗೆ ಇದು ಆರದ ಗಾಯ ಮಾಡಿದೆ. ಜೊತೆಯಲ್ಲಿ 2023ರಲ್ಲಿ ನಡೆದ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಮತ್ತೆ ಮಂಡ್ಯದ ಮೇಲೆ ಹಿಡಿತ ಸಾಧಿಸಲು ಜೆಡಿಎಸ್ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.
ಜೆಡಿಎಸ್ ಮೈತ್ರಿಗೆ ಧಕ್ಕೆಯಾಗದಂತೆ ಸುಮಲತಾ ಅವರ ಮನವೊಲಿಸಿ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವಂತೆ ಮನವೊಲಿಸಲು ಬಿಜೆಪಿ ನಾಯಕರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಸುಮಲತಾ ಬಡಪೆಟ್ಟಿಗೆ ಒಪ್ಪಿಕೊಳ್ಳುವಂತೆ ತೋರುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಪ್ರತಿಷ್ಠಿತ ಕ್ಷೇತ್ರವಾಗಲಿದ್ದು, ಘಟಾನುಘಟಿಗಳ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆಯುವ ಎಲ್ಲ ಸಾಧ್ಯತೆಗಳಿವೆ.