Budget Session | ಧನ ವಿನಿಯೋಗ ವಿಧೇಯಕ ಪಾಸ್ ಆಗದಂತೆ ತಡೆಯಲು ಪ್ರಯತ್ನ: ಪ್ರತಿಪಕ್ಷ ನಡೆಗೆ ಸ್ಪೀಕರ್ ಕಿಡಿ
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, ಸದನ ಹಾಗೂ ಸದನದ ಅಧ್ಯಕ್ಷರ ಪೀಠಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜನರಿಂದ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿ ಬಂದವರು ಪೀಠಕ್ಕೆ ಅಗೌರವ ತೋರಿಸಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾ? ಎಂದು ಸ್ಪೀಕರ್ ಪ್ರಶ್ನಿಸಿದ್ದಾರೆ.;
ವಿಧಾನಸಭೆ ಕಲಾಪದಿಂದ 18 ಶಾಸಕರನ್ನು ಅಮಾನತುಗೊಳಿಸಿರುವ ತಮ್ಮ ತೀರ್ಮಾನವನ್ನು ಸ್ಪೀಕರ್ ಯು.ಟಿ. ಖಾದರ್ ಸಮರ್ಥಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಹನಿಟ್ರ್ಯಾಪ್ ಕುರಿತು ಚರ್ಚೆಗೆ ಸಾಕಷ್ಟು ಅವಕಾಶ ಕೊಟ್ಟಿರುವುದನ್ನು ವಿವರಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, ಸದನ ಹಾಗೂ ಸದನದ ಅಧ್ಯಕ್ಷರ ಪೀಠಕ್ಕಿಂತ ದೊಡ್ಡದು ಯಾವುದೂ ಇಲ್ಲ. ಜನರಿಂದ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿ ಬಂದವರು ಪೀಠಕ್ಕೆ ಅಗೌರವ ತೋರಿಸಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾ? ಎಂದು ಶುಕ್ರವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ನಡೆದುಕೊಂಡ ರೀತಿಯನ್ನು ಪ್ರಶ್ನಿಸಿದ್ದಾರೆ.
ಶಾಸಕರು ಈ ರೀತಿ ನಡೆದುಕೊಳ್ಳುತ್ತಿರುವುದು ಮೊದಲಲ್ಲ
ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿ ಬಂದಿದ್ದಾರೆ ಎಂಬುದು ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಶಾಸಕರು ನಡೆದುಕೊಳ್ಳಬೇಕಲ್ಲವಾ? ಬಿಜೆಪಿ ಶಾಸಕರು ಹೀಗೆ ಮಾಡುತ್ತಿರುವುದು ಇದು 2ನೇ ಸಲ. ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯವಿಲ್ಲ. ಶಾಸಕರ ಮೇಲಿನ ದ್ವೇಷದಿಂದ ಈ ತೀರ್ಮಾನ ಮಾಡಿಲ್ಲ. ಜೊತೆಗೆ ಯಾವುದೋ ಕೋಪ ಅಥವಾ ದ್ವೇಷದಿಂದ ರೂಲಿಂಗ್ ಕೊಟ್ಟಿಲ್ಲ. ಶಾಸಕರಿಗೆ ಕೊಟ್ಟಿರುವುದು ಶಿಕ್ಷೆ ಅಂತಾನೂ ಅಲ್ಲ. ಮುಂದಿನ ದಿನಗಳಲ್ಲಿ ಅವರು ಅತ್ಯುತ್ತಮ ಜನಪ್ರತಿನಿಧಿ ಎಂದು ತಿದ್ದಿಕೊಳ್ಳಬೇಕು ಎಂದು ಖಾದರ್ ತಿಳಿಹೇಳಿದ್ದಾರೆ.
ಇದೇ ಸಂದರ್ಭದಲ್ಲಿ 6 ತಿಂಗಳಿನ ಶಿಕ್ಷೆಯನ್ನು ಕಡಿಮೆ ಮಾಡಬಹುದಾದ ಸುಳಿವನ್ನೂ ಅವರು ಕೊಟ್ಟಿದ್ದಾರೆ.
ಧನವಿನಿಯೋಗ ವಿಧೇಯಕಕ್ಕೆ ತಡೆ ಹಾಕಲು ಪ್ರಯತ್ನ
ಸದನದಿಂದ ಅಮಾನತುಗೊಂಡಿರುವ 18 ಶಾಸಕರು ಮನವಿ ಮಾಡಿಕೊಂಡರೆ ಮುಂದಿನ ನಿರ್ಧಾರವನ್ನು ಮಾಡುತ್ತೇನೆ. ನಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಅವರಿಗೆ ಬರಬೇಕಿದೆ. ತಮ್ಮ ತಪ್ಪಿನ ಅರಿವು ಸ್ವಲ್ಪವಾದರೂ ಇರಬೇಕಿದೆ. ಸದನವನ್ನು ಮುಂದೂಡಿ ತಿಳಿಗೊಳಿಸಲು ಪ್ರಯತ್ನಿಸಿದ್ದೆ. ಆದರೆ ಸದನ ಮತ್ತೆ ಶುರು ಆದಮೇಲೂ ಕೂಡ ಹಾಗೆಯೇ ವರ್ತಿಸಿದರು. ನಾಳೆ ಇಲ್ಲಿ ಹೀಗೆ ಮಾಡುವ ಶಾಸಕರು ಜಿಲ್ಲಾ ಮಟ್ಟದ ಮೀಟಿಂಗುಗಳಲ್ಲೂ ಹೀಗೇ ಮಾಡಿದರೆ ಹೇಗೆ? ಹೀಗಾಗಿ ಸದನದಿಂದ ಹೊರಗೆ ಕಳುಹಿಸಲಾಯಿತು ಎಂದು ಖದರ್ ಹೇಳಿದ್ದಾರೆ.
ಆ ಮೂಲಕ ಶಾಸಕರು ಬಂದು ಮನವಿ ಮಾಡಿಕೊಂಡರೆ ಶಿಕ್ಷೆಯನ್ನು ಕಡಿಮೆ ಮಾಡುವ ಅವಕಾಶವಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಶಿಕ್ಷೆ ಕಡಿಮೆ ಆಗದಿದ್ದಲ್ಲಿ ಈ 18 ಶಾಸಕರು ಬರುವ ಮಳೆಗಾಲದ ಅಧಿವೇಶನದಲ್ಲಿಯೂ ಭಾಗವಹಿಸುವಂತಿಲ್ಲ. ಹೀಗಾಗಿ ಮನವಿ ಮಾಡಿಕೊಂಡರೆ ಪರಿಶೀಲನೆ ನಡೆಸುತ್ತೇವೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.
ಹನಿಟ್ರ್ಯಾಪ್ ಚರ್ಚೆಗೆ ಅವಕಾಶ ಕೊಡಲಾಗಿತ್ತು
ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆ, ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಮಾಹಿತಿ ನೀಡಿದ್ದಾರೆ. ಸದಸನದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಏಕಾಏಕಿ ಮಾತನಾಡಲು ಆರಂಭಿಸಿದಾಗಲೂ ನಾನು ಅವಕಾಶ ಕೊಟ್ಟಿದ್ದೇನೆ. ನಂತರ ಸಚಿವರು ಮಾತಾಡಿದರು, ಗೃಹ ಸಚಿವ ಪರಮೇಶ್ವರ್ ಕೂಡ ಉತ್ತರ ಕೊಟ್ಟಿದ್ದಾರೆ. ಎಲ್ಲರೂ ಒಮ್ಮತದಿಂದ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಕೇಳಿದ್ದಾರೆ.
ಅರ್ಧ ಗಂಟೆ ಚರ್ಚೆ ನಡೆದ ಬಳಿಕ ಗೃಹ ಸಚಿವರೇ ದೂರು ಬಂದ ಮೇಲೆ ತನಿಖೆ ಮಾಡ್ತೇವೆ ಎಂದು ಉತ್ತರ ನೀಡಿದ್ದಾರೆ. ನಂತರ ಮರುದಿನ (ಶುಕ್ರವಾರ) ವಿಪಕ್ಷ ನಾಯಕರು ಚರ್ಚೆಗೆ ಮುಂದಾದಗಲೂ ನಾವು ಅವಕಾಶ ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಎರಡು ಬಾರಿ ಉತ್ತರ ಕೊಟ್ಟಿದ್ದಾರೆ. ಇಷ್ಟೆಲ್ಲ ಉತ್ತರ ಕೊಟ್ಟ ಮೇಲೂ ವಿಪಕ್ಷ ಶಾಸಕರು ಕಲಾಪಕ್ಕೆ ಅಡ್ಡಿ ಪಡಿಸುವುದು ಸರಿಯಾ? ಮುಖ್ಯಮಂತ್ರಿ ಸಿದ್ದರಾಮಯ್ಯ ಅಸೌಖ್ಯರಾಗಿದ್ದಾರೆ ಎಂಬುದು ಗೊತ್ತಿದ್ದೂ ಕೂಡ ಪ್ರತಿಯೊಂದಕ್ಕೂ ಅಡ್ಡಿಪಡಿಸುವುದು ಸರಿ ಅನಿಸುತ್ತದಾ? ಧನ ವಿನಿಯೋಗ ಪಾಸ್ ಆಗಲೇಬಾರದು ಎಂಬ ಮನಸ್ಥಿತಿ ಇಟ್ಟುಕೊಳ್ಳುವುದು ಸರಿಯಾ? ಫೈನಾನ್ಸ್ ಬಿಲ್ ಪಾಸ್ ಆಗದೇ ಇದ್ದರೆ ಎಲ್ಲರಿಗೂ ಸಮಸ್ಯೆ ಅಲ್ಲವಾ? ಎಂದು ಅವರು ಪ್ರತಿಪಕ್ಷಗಳ ವರ್ತನೆಯನ್ನು ಪ್ರಶ್ನಿಸಿದ್ದಾರೆ.
ಸುವರ್ಣಸೌಧದಲ್ಲೂ ಪುಸ್ತಕ ಮೇಳ
ವಿಧಾನಸೌಧದಲ್ಲಿ ಯಶಸ್ವಿಯಾಗಿ ಪುಸ್ತಕ ಮೇಳ ನಡೆದ ಬಳಿಕ ಬೆಳಗಾವಿ ಸುವರ್ಣಸೌಧದಲ್ಲಿಯೂ ಪುಸ್ತಕ ಮೇಳ ನಡೆಸಲು ಸ್ಪೀಕರ್ ಯು.ಟಿ. ಖಾದರ್ ತೀರ್ಮಾನಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಬೆಳಗವಾವಿಯ ಸುವರ್ಣ ಸೌಧದಲ್ಲೂ ಪುಸ್ತಕ ಮೇಳ ಮಾಡಬೇಕು ಎಂಬ ಇಚ್ಚೆಯಿದೆ. ಚಳಿಗಾಲದ ಅಧಿವೇಶನದಲ್ಲಿ ಪುಸ್ತಕ ಮೇಳ ಮಾಡುವ ಚಿಂತನೆ ಇದೆ. ಜೊತೆಗೆ ವಿಧಾನಸೌದಕ್ಕೆ ಲೈಟಿಂಗ್ ವ್ಯವಸ್ಥೆ ಕಲ್ಪಿಸುತ್ತೇವೆ. ಶನಿವಾರ ಭಾನುವಾರ ಎರಡು ದಿನ ಲೈಟಿಂಗ್ ಇರುತ್ತದೆ. ರಾಷ್ಟ್ರೀಯ ಹಬ್ಬದ ದಿನವೂ ಲೈಟಿಂಗ್ ಅರೇಂಜಮೆಂಟ್ ಆಗುತ್ತದೆ. ಏಪ್ರಿಲ್ ಮೊದಲ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡುತ್ತಾರೆ. ಬೆಳಗಾವಿಯಲ್ಲಿ ಶಾಸಕರ ಭವನ ಹಾಗೂ ಪ್ರವಾಸೋದ್ಯಮ ಇಲಾಖೆಯ ಜೊತೆಗೆ ಚರ್ಚೆ ಮಾಡಿ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.