Political Infight | ಯುಗಾದಿ ಬಳಿಕ ಮತ್ತೆ ಸ್ಪೋಟವಾಗಲಿದೆಯೇ ಆಂತರಿಕ ಬೇಗುದಿ?

ಹನಿ ಟ್ರ್ಯಾಪ್​ ಹಿನ್ನೆಲ್ಲೆಯಲ್ಲಿ ರಾಜ್ಯ ರಾಜಕೀಯ ನಾಯಕರಲ್ಲಿ ಬಹಳಷ್ಟು ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಇದೇ ವೇಳೆ, ಅಧಿವೇಶನ ಮುಗಿಯುತ್ತಲೇ ರಾಜ್ಯ ಬಿಜೆಪಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಮತ್ತೆ ಜೋರಾಗಲಿದೆ ಎನ್ನಲಾಗುತ್ತಿದೆ;

By :  Anil Basur
Update: 2025-03-22 02:00 GMT
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ

ಬಜೆಟ್ ಅಧಿವೇಶನದ ಬಳಿಕ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಮತ್ತೆ 'ಬದಲಾವಣೆ'ಯ ಚರ್ಚೆ ಶುರುವಾಗುವುದು ಖಚಿತ. ಅಧಿವೇಶನದ ಕಾರಣಕ್ಕೆ ತಣ್ಣಗಾಗಿದ್ದ ಬಿಜೆಪಿ ಹಾಗೂ ಕಾಂಗ್ರೆಸ್​ ರಾಜ್ಯ ಅಧ್ಯಕ್ಷರ ಬದಲಾವಣೆಯ ಕೂಗು ಮತ್ತೆ ಜೋರಾಗಲಿದೆ. ಜೊತೆಗೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಒತ್ತಡಗಳೂ ಕೂಡ ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರ ಮೇಲೆ ಹೆಚ್ಚಾಗಲಿವೆ. 

ಶೀಘ್ರದಲ್ಲಿಯೇ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯೂ ನಡೆಯಲಿದೆ. ಆದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹೈಕಮಾಂಡ್​ಗೆ 'ಬದಲಾವಣೆ' ವಿಚಾರ ತಲೆನೋವಾಗಿದೆ. ಆದಷ್ಟು ಬೇಗ ಗೊಂದಲಕ್ಕೆ ತೆರೆ ಎಳೆದು ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಸಿದ್ಧವಾಗಬೇಕಿದೆ. ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ಈ ಬದಲಾವಣೆ ಒತ್ತಡಕ್ಕೆ ಆಯಾ ಪಕ್ಷಗಳ ಹೈಕಮಾಂಡ್ ಈವರೆಗೆ ಅಂತ್ಯ ಹಾಡದಿರುವುದು ಕೂಡ ಆಂತರಿಕ ಬೇಗುದಿ ಉಲ್ಬಣಗೊಳ್ಳಲು ಕಾರಣವಾಗಿದೆ. ವಿಧಾನಸಭಾ ಕಲಾಪದ ವೇಳೆಯೂ ಬಿಜೆಪಿಯಲ್ಲಿ ಒಗ್ಗಟ್ಟು ಕಂಡು ಬರದಿರುವುದು ಬಿಜೆಪಿ ಹೈಕಮಾಂಡ್ ನಿದ್ದೆಗೆಡೆಸಿದೆ ಎನ್ನಲಾಗಿದೆ.  

ಪಟ್ಟು ಸಡಿಲಿಸದ ಯತ್ನಾಳ್ ಬಣ

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಬದಲಾವಣೆಗೆ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ತನ್ನ ಪಟ್ಟನ್ನು ಸಡಿಲಗೊಳಿಸಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲೇಬೇಕು ಎಂಬ ಆಗ್ರಹದಿಂದ ಅವರು ಹಿಂದೆ ಸರಿದಿಲ್ಲ. ಚುನಾವಣೆ ನಡೆದೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಬೇಕು ಎಂದು ಯಡಿಯೂರಪ್ಪ ವಿರೋಧಿ ಬಣ ಹಿಡಿದಿರುವ ಪಟ್ಟನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಒಂದು ವಾರದಲ್ಲಿ ಪಕ್ಷದ ಆಂತರಿಕ ಸಮಸ್ಯೆ ಪರಿಹಾರವಾಗುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿ ಎರಡು ತಿಂಗಳು ಕಳೆದಿವೆ. ಆದರೆ ಪರಿಹಾರವಂತೂ ಈವರೆಗೆ ಆಗಿಲ್ಲ. ಈ ಮಧ್ಯ ವಿಧಾನ ಮಂಡಲ ಅಧಿವೇಶನ ಶುರುವಾಗಿದ್ದರಿಂದ ಬದಲಾವಣೆ ಒತ್ತಡ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಜೊತೆಗೆ ತಮಗೆ ಕೊಟ್ಟಿದ್ದ ಶೋಕಾಸ್ ನೋಟಿಸ್​ಗೆ ಯತ್ನಾಳ್ ಈಗಾಗಲೇ ಉತ್ತರಿಸಿದ್ದಾರೆ ಎಂಬ ಮಾಹಿತಿಯಿದೆ.

ಕೇಂದ್ರ ಬಿಜೆಪಿ ಶಿಸ್ತು ಸಮಿತಿಯ ಸೂಚನೆಯ ಹೊರತಾಗಿಯೂ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಲೇ ಬೇಕು ಎಂದು ಶಾಸಕ ಯತ್ನಾಳ್ ಸೇರಿದಂತೆ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಬಿ.ಪಿ. ಹರೀಶ್ ಆಗಾಗ ಮಾಡುತ್ತಲೇ ಇದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಯತ್ನಾಳ್ ಬಣಕ್ಕೆ ಬೆಂಬಲ ಕೊಟ್ಟಿರುವುದು ಬಿಜೆಪಿ ಹೈಕಮಾಂಡ್​ಗೆ ತಲೆನೋವಾಗಿದೆ.

ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಜಿಲ್ಲಾ ಅಧ್ಯಕ್ಷರು ಯಾರಿಗೆ ಮತದಾನ ಮಾಡುತ್ತಾರೆ ಎಂಬುದು ಮಹತ್ವ ಪಡೆದುಕೊಳ್ಳುತ್ತದೆ. ಹೀಗಾಗಿ ಜಿಲ್ಲಾ ಅಧ್ಯಕ್ಷರ ನೇಮಕಾತಿ ಕುರಿತು ದ ಫೆಡರಲ್ ಕರ್ನಾಟಕ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ ಅವರನ್ನು ಸಂಪರ್ಕಿಸಿದಾಗ, ಅವರು, "ರಾಜ್ಯ ಬಿಜೆಪಿಯ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ 30 ಜಿಲ್ಲೆಗಳ ಅಧ್ಯಕ್ಷರ ನೇಮಕಾತಿ ಆಗಿದೆ. ಜೊತೆಗೆ ಉಳಿದ 9 ಜಿಲ್ಲೆಗಳಿಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ಬಳಿಕ ನೇಮಕಾತಿ ಆಗಲಿದೆ. ದೇಶದ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಆಯ್ಕೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಕೂಡ ಆಗಲಿದೆ" ಎಂಬ ಮಾಹಿತಿ ನೀಡಿದ್ದಾರೆ. 

ವಿಜಯೇಂದ್ರ ಬಣದ ಜಿಲ್ಲಾಧ್ಯಕ್ಷರು ಹೆಚ್ಚು?

ಈಗ 30 ಜಿಲ್ಲೆಗಳಿಗೆ ಸಹಮತದ ಮೂಲಕ ಜಿಲ್ಲಾ ಆಧ್ಯಕ್ಷರ ನೇಮಕಾತಿ ಆಗಿದೆ. ಜೊತೆಗೆ ಉಳಿದಿರುವ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕಾತಿ ಆಗಬೇಕಿದೆ. ಈಗಾಗಲೇ ಆಗಿರುವ ನೇಮಕಾತಿಗಳಲ್ಲಿ ವಿಜಯೇಂದ್ರ ಬಣದವರಿಗೆ ಹೆಚ್ಚು ಅವಕಾಶ ಕೊಡಲಾಗಿದೆ ಎಂಬ ಆರೋಪವನ್ನು ಕೂಡ ಯತ್ನಾಳ್ ಬಣ ಮಾಡಿತ್ತು. ಅದೇ ವೇಳೆ ಸಂಸದ ಡಾ.ಕೆ. ಸುಧಾಕರ್ ತಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂದೀಪ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ವಿರೋಧಿಸಿದ್ದರು. ಮಧ್ಯ ಪ್ರವೇಶ ಮಾಡಿದ್ದ ಹೈಕಮಾಂಡ್ ನೇಮಕಾತಿಯನ್ನು ತಡೆಹಿಡಿದಿದೆ. ಅವರ ಆಯ್ಕೆಯನ್ನು ರದ್ದು ಮಾಡಿಲ್ಲ, ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಲ್ಲಿ ಸಂದೀಪ್ ಮತದಾನ ಮಾಡುವಂತಿಲ್ಲ ಎಂದೂ ಸೂಚಿಸಿದೆ. ಹೀಗಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಲ್ಲಿ 29 ಜಿಲ್ಲಾ ಅಧ್ಯಕ್ಷರ ಮತಗಳು ಮಹತ್ವ ಪಡೆದುಕೊಳ್ಳುತ್ತವೆ.

ಅದರಿಂದಾಗಿ ಯುಗಾದಿ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆಯೋ? ಅಥವಾ ಸಹಮತದ ಮೂಲಕ ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೇ ಬಿಜೆಪಿ ಹೈಕಮಾಂಡ್ ಮುಂದುರಿಸುತ್ತದೆಯೊ? ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ ಪರಿಸ್ಥಿತಿಯೂ ಭಿನ್ನವಾಗಿಲ್ಲ

ಇದೇ ರೀತಿಯ ಡೋಲಾಯಮಾನ ಪರಿಸ್ಥಿತಿ ಕಾಂಗ್ರೆಸ್ ಪಕ್ಷದಲ್ಲಿಯೂ ಇದೆ. ಒಂಡೆದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ. ಶಿವಕುಮಾರ್ ಬದಲಾವಣೆಗೆ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಸೇರಿದಂತೆ ಸಿದ್ದರಾಮಯ್ಯ ಬಣದ ಹಲವರು ತೀವ್ರ ಪ್ರಯತ್ನ ನಡೆಸಿದ್ದರು. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿರ್ಣಯದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಹುದ್ದೆಯನ್ನು ಬಿಟ್ಟು ಕೊಡಬೇಕು ಎಂಬ ಪಟ್ಟನ್ನು ಕಾಂಗ್ರೆಸ್ ಹಿರಿಯ ಸಚಿವರು ಹಿಡಿದಿದ್ದಾರೆ.

ಆದರೆ ಮತ್ತೊಂದೆಡೆ ಸಿಎಂ ಬದಲಾವಣೆಯ ದಾಳವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉರುಳಿಸುತ್ತಿದ್ದಾರೆ. ಉಳಿದ ಅವಧಿಗೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ತಾವೇ ಮುಂದುವರಿಯುವ ಪಟ್ಟನ್ನು ಡಿಕೆ ಶಿವಕುಮಾರ್ ಹಿಡಿದಿದ್ದಾರೆ ಎಂಬ ಮಾಹಿತಿ ರಾಜ್ಯ ಕಾಂಗ್ರೆಸ್ ವಲಯದಿಂದಲೇ ಕೇಳಿ ಬಂದಿದೆ.

ಬದಲಾವಣೆಗೆ ಈಗ ಹನಿ ಟ್ರ್ಯಾಪ್ ಬಲ?   

ಇದೇ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ರಾಜ್ಯ ಕಾಂಗ್ರೆಸ್ ನಾಯಕರ ನೆಮ್ಮದಿಯನ್ನು ಮಾತ್ರವಲ್ಲ ಹೈಕಮಾಂಡ್ ನಾಯಕರ ನಿದ್ದೆಗೆಡೆಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಕೆ.ಎನ್. ರಾಜಣ್ಣ ಹೈಕಮಾಂಡ್​ಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಅಧಿವೇಶನದ ಬಳಿಕ ಮತ್ತೊಮ್ಮೆ ಹೈಕಮಾಂಡ್ ಭೇಟಿ ಮಾಡಿ ಹನಿ ಟ್ರ್ಯಾಪ್ ಕುರಿತು ದೂರು ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ ಬದಲಾವಣೆಗೂ ಒತ್ತಾಯ ಮಾಡಲಿದ್ದಾರೆ ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ಹನಿಟ್ರ್ಯಾಪ್‌ ಪ್ರಕರಣ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವ ಲೆಕ್ಕಾಚಾರದಲ್ಲಿರುವ ಡಿ ಕೆ ಶಿವಕುಮಾರ್‌ ಅವರಿಗೆ ಹಿನ್ನಡೆ ತರುವ ಸಾಧ್ಯತೆಗಳು ಹೆಚ್ಚಿವೆ.

ಒಟ್ಟಾರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಧ್ಯಕ್ಷ ಸ್ಥಾನದ ಕುರಿತ ಚರ್ಚೆ ಮತ್ತೆ ಅಧಿವೇಶನದ ಬಳಿಕ ಗರಿಗೆದರಲಿದೆ. ಜೊತೆಗೆ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಕೂಡ ಬರಲಿವೆ. ಹೀಗಾಗಿ ತಮ್ಮ ಪಕ್ಷದ ಕಾರ್ಯಕರ್ತರಲ್ಲಿನ ಗೊಂದಲವನ್ನು ಎರಡೂ ಪಕ್ಷಗಳ ಹೈಕಮಾಂಡ್ ಸರಿಪಡಿಸಬೇಕಿದೆ. ತಲೆನೋವಾಗಿರುವ ರಾಜ್ಯ ಅಧ್ಯಕ್ಷ ಹುದ್ದೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹೇಗೆ ನಿರ್ವಹಿಸಲಿವೆ ಎಂಬುದು ಕುತೂಹಲ ಮೂಡಿಸಿದೆ.

Tags:    

Similar News