ಹಲಾಲ್ ಬಜೆಟ್: ಬಿಜೆಪಿ ನಾಯಕರ ಎಂಬ ಹೇಳಿಕೆಗೆ ಭಾರಿ ವಿರೋಧ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 16ನೇ ಬಜೆಟ್ ಕುರಿತು ಪರ-ವಿರೋಧ ವ್ಯಕ್ತವಾಗುತ್ತಿದೆ. ಇದೊಂದು ಹಲಾಲ್ ಬಜೆಟ್ ಎಂದು ರಾಜ್ಯ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಬಜೆಟ್ ವಿಶ್ಲೇಷಣೆ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ದಾಖಲೆಯ 16ನೇ ಬಜೆಟ್ ಕುರಿತು ಪರ-ವಿರೋಧ ವ್ಯಕ್ತವಾಗುತ್ತಿದೆ. ಇದೊಂದು ಹಲಾಲ್ ಬಜೆಟ್ ಎಂದು ರಾಜ್ಯ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಬಜೆಟ್ ವಿಶ್ಲೇಷಣೆ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ. ಜೊತೆಗೆ ಇದೇ ರೀತಿಯ ಅಭಿಪ್ರಾಯಗಳನ್ನು ರಾಜ್ಯ ಬಿಜೆಪಿ ನಾಯಕರೂ ಕೂಡ ವ್ಯಕ್ತಪಡಿಸಿದ್ದರು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ಆರೋಪ-ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಎಂದಿನಂತೆ ವಿರೋಧ ಪಕ್ಷಗಳು ಬಜೆಟ್ ಘೋಷಣೆಗಳನ್ನು ತೆಗಳಿವೆ. ಆದರೆ, ವಿರೋಧಿಸುವ ಭರದಲ್ಲಿ ಬಿಜೆಪಿ ನಾಯಕರು ಕೊಟ್ಟಿರುವ ಪ್ರತಿಕ್ರಿಯೆಗಳೇ ಆಕ್ಷೇಪಕ್ಕೆ ಕಾರಣವಾಗಿವೆ. ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದು, ಇದು ಬಿಜೆಪಿಯವರ ಕೊಳಕು ಮನಸ್ಥಿ ಎಂದಿದ್ದಾರೆ.
ಏನಂದಿತ್ತು ಬಿಜೆಪಿ?
ಬಜೆಟ್ನಲ್ಲಿ, ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವಿದೇಶದಲ್ಲಿ ಶಿಕ್ಷಣ ಪಡೆಯಲು ಇರುವ ಅನುದಾನದಲ್ಲಿ 10 ಲಕ್ಷ ರೂ. ಹೆಚ್ಚಳ ಸೇರಿದಂತೆ ಮುಸ್ಲಿಮರಿಗೆ ಕೊಟ್ಟಿರುವ ಯೋಜನೆಗಳನ್ನು ಪಟ್ಟಿ ಮಾಡಿದ ಬಿಜೆಪಿ ಎಕ್ಸ್ ಖಾತೆಯಲ್ಲಿ ಹಲಾಲ್ ಬಜೆಟ್ ಎಂದು ಟೀಕೆ ಮಾಡಿತ್ತು.
ವಿಪಕ್ಷ ನಾಯಕ ಆರ್. ಅಶೋಕ್ ಅವರು, ಇದು ಮುಸ್ಲಿಮರ ಬಜೆಟ್. ಮುಸ್ಲಿಮರ ಜಟಕಾ ಗಾಡಿ ಏರಿಕೊಂಡು ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿಗೆ 1,000 ಕೋಟಿ ರೂ. ನೀಡಲಾಗಿದೆ. ವಕ್ಫ್ ಬೋರ್ಡ್ ಮುಚ್ಚಿ ಎಂದರೆ, ಅದಕ್ಕೆ 150 ಕೋಟಿ ರೂ. ನೀಡಿದ್ದಾರೆ. ಮುಸ್ಲಿಮರ ವಿದೇಶ ಪ್ರಯಾಣಕ್ಕೆ 30 ಲಕ್ಷ ರೂ. ನೀಡಲಾಗುತ್ತದೆ. ಆದರೆ ಗುರುದ್ವಾರಗಳಿಗೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಮುಸ್ಲಿಮರ ಓಟಿನ ಋಣ ತೀರಿಸಲು ಈ ಬಜೆಟ್ ನೀಡಲಾಗಿದೆ, ಎಂದಿದ್ದರು.
ಶನಿವಾರ ಮಾ. 8 ರಂದು ಮತ್ತೊಮ್ಮೆ ಪ್ರತಿಕ್ರಿಯೆ ಕೊಟ್ಟಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ "ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಬಗೆಗಿನ ಪ್ರೀತಿ, ಕಾಳಜಿ ಎಲ್ಲರಿಗೂ ಗೊತ್ತಿದೆ. ಆದರೆ, ಹಣಕಾಸಿನ ಸಚಿವರಾಗಿ ಅವರು ಈ ಮಟ್ಟಕ್ಕೆ ಇಳಿಯುವರೆಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈ ಬಜೆಟ್ ಅನ್ನು ಜಮೀರ್ ಅಹ್ಮದ್ ಖಾನ್ ಮಂಡಿಸಿದ್ದಾರೆಯೇ ಎಂಬ ಅನುಮಾನ ನನಗಿದೆ,'' ಎಂದಿದ್ದಾರೆ.
ಸಿದ್ದರಾಮಯ್ಯ ತಿರುಗೇಟು
ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. 'ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 232 ಕೋಟಿಗಳು ವೆಚ್ಚವಾಗುತ್ತಿದೆ. ಜನರಿಗೆ ಆರ್ಥಿಕ ಬಲ ತುಂಬಿದರೆ ಅವರ ಖರೀದಿ ಶಕ್ತಿಯೂ ಹೆಚ್ಚಿ, ರಾಜ್ಯದ ಆರ್ಥಿಕತೆಯೂ ಬೆಳೆಯುತ್ತದೆ. ಆದರೆ ಬಿಜೆಪಿಯವರು ಇದನ್ನು ಹಲಾಲ್ ಬಜೆಟ್ ಎಂದು ಟೀಕಿಸುತ್ತಾರೆ,'' ಎಂದು ತಿರುಗೇಟು ಕೊಟ್ಟಿದ್ದರು.
ಇದೆ ವಿಚಾರದ ಕುರಿತು ಈಗ ನಾಡಿನಾದ್ಯಂತ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು 4,09,549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಅದರಲ್ಲಿನ 4,05,449 ಕೋಟಿ ರೂಪಾಯಿಗಳ ಕುರಿತು ಮಾತನಾಡುವುದನ್ನು, ವಿಶ್ಲೇಷಣೆ ಮಾಡುವುದನ್ನು ಬಿಟ್ಟು, ಕೇವಲ 4 ಸಾವಿರ ಕೋಟಿ ರೂಪಾಯಿಗಳ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬರಲಿರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗೆ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನ ನಡೆಸಿವೆ ಎಂಬ ಚಚರ್ಚೆಗಳೂ ಕೂಡ ನಡೆಯುತ್ತಿವೆ. ಒಟ್ಟಾರೆ ಬಜೆಟ್ ಕುರಿತು ಬಿಜೆಪಿ ನಾಯಕರ ಅಭಿಪ್ರಾಯಗಳಿಗೆ ಹೆಚ್ಚಿನ ಟೀಕೆಯಂತು ಬರುತ್ತಿವೆ.